ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜು.19ರಂದು ಪತ್ರಿಕಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಗರ ಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಲೇಖನ ಬಹಳ ಹರಿತವಾದುದು. ಅದು ಬಹುದೊಡ್ಡ ಕ್ರಾಂತಿ ಮಾಡಬಲ್ಲುದು. ಬದಲಾವಣೆಗೆ ಪ್ರರೇಪಣೆ ನೀಡುತ್ತಿದೆ. ಆರಂಭದ ಕಾಲಘಟ್ಟದಲ್ಲಿ ಪತ್ರಿಕೆಗಳು ದೇಶದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದ್ದವು. ಸ್ವಾತಂತ್ರಾನಂತರದಲ್ಲಿ ಮಾಧ್ಯಮಗಳು ದೇಶದ ಅಭಿವೃದ್ಧಿ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಮಾಹಿತಿ ಸಾಕಷ್ಟು ವೇಗವಾಗಿರುವ ಜೊತೆಗೆ ಸುಳ್ಳು ಸುದ್ದಿಗಳ ಹರಡುತ್ತಿದೆ. ಪತ್ರಿಕೆ ಮೂಲಕ ಸತ್ಯ ನಿಖರತೆ ದೊರೆಯುತ್ತಿದೆ. ಈ ವಿಚಾರದಲ್ಲಿ ಕಾರ್ಯನಿರತ ಪತ್ರಕರ್ತರು ಎಚ್ಚರ ವಹಿಸುವ ಅಗತ್ಯವಿದೆ ಎಂದರು. ನಮ್ಮ ಕರ್ತವ್ಯದಲ್ಲಿ ಯಾವ ಸಮಸ್ಯೆಗಳಾಗಿದೆ ಎಂದು ಪತ್ರಿಕೆ ಮೂಲಕ ತಿಳಿಯಲಾಗುತ್ತದೆ. ಪುತ್ತೂರು ನಗರದ ಆಡಳಿತ ಸುಧಾರಣೆ ಮಾಡುವಲ್ಲಿ ಪತ್ರಕರ್ತರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬರುವ ಟೀಕೆ, ವಿಮರ್ಶೆ, ಸಮಸ್ಯೆ ಬಿಂಬಿತ ಸುದ್ದಿಗಳನ್ನು ನಾವು ಧನಾತ್ಮಕವಾಗಿ ಸ್ವೀಕರಿಸಿಕೊಂಡು ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಪತ್ರಿಕೆ ಮತ್ತು ಸಾಹಿತ್ಯ ಬೇರೆಯಲ್ಲ. ಅಭಿವ್ಯಕ್ತಿಯ ವಿಧಾನ ಮಾತ್ರ ಬೇರೆ ಇರಬಹುದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಇತರ 3 ಅಂಗಗಳು ತಪ್ಪಿದಾಗ ತಿದ್ದುವ ಮಹೋನ್ನತ ಕೆಲಸ ಮಾಡುತ್ತದೆ. ಅವುಗಳನ್ನು ಅಲುಗಾಡಿಸುವ ಶಕ್ತಿಯೂ ಮಾಧ್ಯಮಕ್ಕಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲಾ ಸಂಘದಿಂದ ಸುವರ್ಣ ಸಂಭ್ರಮ ಆಯೋಜಿಸಲಾಗುವುದು. ಇದಕ್ಕೆ ಪೂರಕವಾಗಿ ಎಲ್ಲ ತಾಲೂಕು ಮಟ್ಟದಲ್ಲೂ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಮಾತನಾಡಿ, ಸಮಾಜದಲ್ಲಿ ಸಕಾರತ್ಮಕ ಬೆಳವಣಿಗೆಗೆ ಪತ್ರಿಕೋಧ್ಯಮ ಬಹುಮುಖ್ಯ. ಸಂಘದ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಹ ಮಾಹಿತಿ ಶಿಬಿರಗಳು ನಡೆಸುವ ಆವಶ್ಯಕತೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ ಮಾತನಾಡಿ, ಜಿಲ್ಲಾ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಸಹಕಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘದ ಮೂಲಕ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಪುಣ್ಯಶ್ರೀ, ಸಿಹಾ ಸಮ್ರಾ ಮತ್ತು ಕೃತಿಕಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯ ಮೇಘಾ ಪಾಲೆತ್ತಡಿ ಸ್ವಾಗತಿಸಿದರು. ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು. ನಾ ಕಾರಂತ ಪೆರಾಜೆ, ನಝೀರ್ ಕೊಲ, ಐ.ಬಿ. ಸಂದೀಪ್ ಕುಮಾರ್, ಅಜಿತ್ ಉಚ್ಚಿಲ, ಪ್ರವೀಣ್ ಬೊಳುವಾರ್, ಹರೀಶ್, ಯತೀಶ್ ಉಪ್ಪಳಿಗೆ, ರಾಜೇಶ್ ಪಟ್ಟೆ, ಶರತ್, ವಿದ್ಯಾಶ್ರೀ ಅತಿಥಿಗಳಿಗೆ ಹೂ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು.