ಗುಂಡಿಗಳೇ ರಸ್ತೆಯ ಜೀವಾಳ…?
ಕಾಂಕ್ರೀಟ್ಕರಣವೊಂದೆ ಪರಿಹಾರ..
@ ಸಿಶೇ ಕಜೆಮಾರ್
ಪುತ್ತೂರು: ನಿಮಗೇನಾದರೂ ನರಕ ದರ್ಶನವಾಗಬೇಕಾದರೆ ನೀವು ತ್ಯಾಗರಾಜೆಯಿಂದ ಮಜ್ಜಾರಡ್ಕ ಮೂಲಕ ಓಲ್ತಾಜೆಯಾಗಿ ಗೋಳ್ತಿಲ ಕಟ್ಟತ್ತಾರು ಸಂಪರ್ಕ ರಸ್ತೆಯಲ್ಲೊಮ್ಮೆ ಸಂಚರಿಸಬೇಕು. ತ್ಯಾಗರಾಜನಗರದಿಂದ ಮಜ್ಜಾರಡ್ಕದ ಮೂಲಕ ಕಟ್ಟತ್ತಾರು ಸಂಪರ್ಕಿಸುವ ಸುಮಾರು 3 ಕಿ.ಮೀ ದೂರದ ರಸ್ತೆ ಇದಾಗಿದೆ. ತ್ಯಾಗರಾಜನಗರದಿಂದ ಮಜ್ಜಾರಡ್ಕ ಅಂಗನವಾಡಿ ಕೇಂದ್ರದ ತನಕ ಇತ್ತೀಚೆಗೆ ಕಾಂಕ್ರಿಟೀಕರಣಗೊಂಡಿದ್ದು ಅಲ್ಲಿಂದ ಒಂದು ಇನ್ನೂರು ಮೀಟರ್ ಡಾಂಬರೀಕರಣಗೊಂಡಿದ್ದರೂ ಇದೀಗ ಜಲ್ಲಿಕಲ್ಲು ಮಾತ್ರ ಇದೆ. ಅದು ಬಿಟ್ಟರೆ ಸುಮಾರು 1 ಕಿ.ಮೀ ವ್ಯಾಪ್ತಿಯ ರಸ್ತೆ ಸಂಪೂರ್ಣ ಕಚ್ಛಾ ರಸ್ತೆಯಾಗಿದ್ದು ಹೊಂಡ ಗುಂಡಿಗಳಿಂದ ತುಂಬಿ ಹೋಗಿದೆ. ಅದರಲ್ಲೂ ಓಲ್ತಾಜೆ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದೆ.

ಹೊಂಡ ಗುಂಡಿಗಳೇ ರಸ್ತೆಯ ಜೀವಾಳ…?
ಅರಿಯಡ್ಕ ಮತ್ತು ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುವ ಈ ರಸ್ತೆಯು ಓಲ್ತಾಜೆ ತನಕ ಅರಿಯಡ್ಕ ಗ್ರಾಪಂ ವ್ಯಾಪ್ತಿಗೆ ಬರುತ್ತದೆ ಉಳಿದಂತೆ ಗೋಳ್ತಿಲ, ಕಟ್ಟತ್ತಾರು ಕೆಯ್ಯೂರು ಗ್ರಾಪಂ ವ್ಯಾಫ್ತಿಗೆ ಸೇರಿದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು ಇವರಿಗೆ ಮುಖ್ಯರಸ್ತೆಯನ್ನು ಸಂಪರ್ಕಿಸಬೇಕಾದರೆ ಇದೇ ರಸ್ತೆಯನ್ನು ಅವಲಂಭಿಸಬೇಕಿದೆ. ಪ್ರತಿನಿತ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಕ್ಕೆ ಹೋಗುವ ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಓಲ್ತಾಜೆ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ತುಂಬಾ ಹೊಂಡ ಗುಂಡಿಗಳೇ ತುಂಬಿ ಹೋಗಿವೆ. ದ್ವಿಚಕ್ರ ವಾಹನದಲ್ಲಿ ಸರ್ಕಸ್ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ.

ಗ್ರಾಮಸ್ಥರೇ ರಸ್ತೆ ಸರಿಪಡಿಸಿದ್ದರು…
ತ್ಯಾಗರಾಜೆ ಮತ್ತು ಕಟ್ಟತ್ತಾರು ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿರುವುದರಿಂದ ಓಲ್ತಾಜೆ ಭಾಗದ ಜನರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಖ್ಯರಸ್ತೆಯ ಮೂಲಕ ಪೇಟೆಗೆ ಬರಬೇಕಾದರೆ ಬೇರೆ ಯಾವುದೇ ಸಂಪರ್ಕ ರಸ್ತೆಗಳು ಇಲ್ಲದೆ ಇರುವುದರಿಂದ ಇದೇ ರಸ್ತೆಯನ್ನು ಅವಲಂಭಿಸಬೇಕಾಗಿದೆ. ವಾಹನ ಸಂಚಾರಕ್ಕೂ ಕೂಡ ತೊಂದರೆಯಾಗಿರುವುದರಿಂದ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೂಡ ಕಷ್ಟವಾಗುತ್ತಿದೆ ಎನ್ನುತ್ತಾರೆ ಈ ಭಾಗದ ಸಾರ್ವಜನಿಕರು. ರಸ್ತೆಯ ಅವ್ಯಸ್ಥೆಯನ್ನು ನೋಡಿ ಹಲವು ಬಾರಿ ಗ್ರಾಮಸ್ಥೆ ತಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯಿಂದಲೂ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ. ಆದರೆ ಅದೆಷ್ಟೇ ದುರಸ್ತಿ ಪಡಿಸಿದರೂ ಮಳೆಗಾಲದಲ್ಲಿ ರಸ್ತೆ ತುಂಬಾ ಗುಂಡಿಗಳು ಆಗುವುದರಿಂದ ದುರಸ್ತಿ ಕಷ್ಟಸಾಧ್ಯವಾಗಿದೆ.

20 ವರ್ಷಗಳ ಬೇಡಿಕೆ ಈಡೇರುವುದೇ…?
ಓಲ್ತಾಜೆ ಭಾಗದಲ್ಲಿ ಸುಮಾರು 1 ಕಿ.ಮೀ ರಸ್ತೆ ಕಚ್ಛಾರಸ್ತೆಯಾಗಿದ್ದು ಸಂಪೂರ್ಣ ಹಾಳಾಗಿದೆ. ಈ ರಸ್ತೆಗೆ ಕಾಂಕ್ರೀಟ್ ಮಾಡಿಕೊಡುವಂತೆ ಈ ಭಾಗದ ಜನರು 20 ವರ್ಷಗಳಿಂದ ಜನ ಪ್ರತಿನಿಧಿಗಳ ಹತ್ತಿರ ತಮ್ಮ ಬೇಡಿಕೆಯನ್ನು ಇಡುತ್ತಾ ಬಂದಿದ್ದಾರೆ. ಆದರೆ ಇದುವರೇಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಾಗರೀಕರು.
ಶಾಸಕ ಅಶೋಕ್ ಕುಮಾರ್ ರೈಯವರಿಗೂ ಮನವಿ
ಅರಿಯಡ್ಕ ಗ್ರಾಮದ ಓಲ್ತಾಜೆ ಎಂಬಲ್ಲಿ ಸುಮಾರು 1 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ನಡೆದುಕೊಂಡು ಹೋಗಲು ಕೂಡ ಕಷ್ಟವಾಗುತ್ತಿದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು ಇವರಿಗೆ ಕಟ್ಟತ್ತಾರೆ ಅಥವಾ ತ್ಯಾಗರಾಜನಗರಕ್ಕೆ ಬರಬೇಕಾದರೆ ಇದೇ ರಸ್ತೆಯನ್ನು ಅವಲಂಭಿಸಬೇಕಾಗಿದೆ. ಸಾರಿಗೆ ವ್ಯವಸ್ಥೆ ಕೂಡ ಇಲ್ಲದೇ ಇರುವುದು ಮತ್ತು ರಸ್ತೆ ಅವ್ಯವಸ್ಥೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೂ ಬಹಳಷ್ಟು ತೊಂದರೆಯಾಗಿದೆ. ಆದ್ದರಿಂದ ಓಲ್ತಾಜೆ ಭಾಗಕ್ಕೆ ಕಾಂಕ್ರೀಟ್ ಮಾಡಿಕೊಡುವಂತೆ ಓಲ್ತಾಜೆ, ಮಜ್ಜಾರಡ್ಕ ಮತ್ತು ಗೋಳ್ತಿಲ ಭಾಗದ ನಾಗರೀಕರು ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಇತ್ತೀಚಿಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.

‘ ನಮಗೆ ಸರಿಯಾದ ರಸ್ತೆ ಇಲ್ಲದೆ ಇರುವುದು ನಮ್ಮ ದೌರ್ಭಾಗ್ಯವಾಗಿದೆ.ಇದರಿಂದ ನಾವು ಪ್ರತಿದಿನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರಸ್ತೆಗಾಗಿ ನಾವು ಪ್ರತಿವರ್ಷ ಗುಂಪಾಗಿ ಶ್ರಮಿಸುತ್ತಿದ್ದೇವೆ. ಕಾಂಕ್ರೀಟೀಕರಣ ಮಾಡುವುದು ಒಂದೇ ಇಲ್ಲಿಗೆ ಪರಿಹಾರ ಅಂತ ಭಾವಿಸಿಕೊಂಡಿದ್ದೇವೆ.ಈ ಬಗ್ಗೆ ಈ ಬಾರಿಯೂ ನಾವು ಮನವಿಯನ್ನು ಸಲ್ಲಿಸಿದ್ದೇವೆ. ಮಾನ್ಯ ಶಾಸಕರು ಹಾಗೂ ಗ್ರಾಮ ಪಂಚಾಯತ್‌ಗಳ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ.’
ಭರತ್ ಓಲ್ತಾಜೆ, ರಸ್ತೆ ಫಲಾನುಭವಿ, ಸ್ಥಳೀಯರು