ನಿನ್ನೆವರೆಗೆ ಕಾಂಗ್ರೆಸ್, ಇಂದಿನಿಂದ ಬಿಜೆಪಿ ಆಡಳಿತ! ಮಾಜಿ ಸಂಸದ ನಳಿನ್ ಮಾತಿಗೆ ನಗೆಗಡಲಲ್ಲಿ ತೇಲಾಡಿದ ರೋಟರಿ ಬಿರುಮಲೆ ಹಿಲ್ಸ್ ಪದಪ್ರದಾನ ಸಭೆ

0

ಪುತ್ತೂರು: ನಿನ್ನೆವರೆಗೆ ಕಾಂಗ್ರೆಸ್ ಆಡಳಿತವಿತ್ತು. ಇಂದಿನಿಂದ ಬಿಜೆಪಿ ಆಡಳಿತ ಶುರುವಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಹಾಸ್ಯಭರಿತ ಮಾತಿಗೆ ಸಭೆ ನಗೆಗಡಲಿನಲ್ಲಿ ತೇಲಾಡಿತು. ಜು.19ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಿದ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಾಸ್ಯಕ್ಕಾಗಿ ಹೀಗೆ ಹೇಳಿದ್ದು. ಪಕ್ಷಗಳು ಭಿನ್ನವಾಗಿದ್ದರೂ ಯಾವುದೇ ಗೊಂದಲ, ಅಧಿಕಾರದ ಆಸೆಯಿಲ್ಲದೆ ಇಂದಿನ ಪದ ಪ್ರದಾನ ಕಾರ್ಯಕ್ರಮ ನಡೆದಿರುವುದು ರೋಟರಿಯ ಹೆಚ್ಚುಗಾರಿಕೆ. ಇದನ್ನು ರೋಟರಿಯಲ್ಲಿ ಮಾತ್ರ ಕಾಣಲು ಸಾಧ್ಯ. ಹೃದಯದ ಭಾವನೆ ಅದು ಮಾನವೀಯತೆ ಮಾತ್ರ ಎಂದು ಇಲ್ಲಿ ಬಿಂಬಿತವಾಗಿದೆ. ಇದೀಗ ರೋಟರಿಯ ಅಧ್ಯಕ್ಷರಾಗಿ ಆಯ್ಕೆಯಾದ ಸಾಜ ರಾಧಾಕೃಷ್ಣ ಆಳ್ವರವರು ರೋಟರಿಯ ಕೀರ್ತಿಯನ್ನು ಬಿರುಮಲೆ ಬೆಟ್ಟದಷ್ಟು ಎತ್ತರಕ್ಕೆ ಏರಿಸಲಿ ಎಂದರು.

ಜನಪರ ಸೇವೆಯೊಂದಿಗೆ ಜಿಲ್ಲೆಗೆ ಮಾದರಿ ಕ್ಲಬ್ ಆಗಲಿ-ಪ್ರಮೋದ್ ಕುಮಾರ್
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್ ರವರು ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಪದ ಪ್ರದಾನ ಕಾರ್ಯಕ್ರಮ ಅದು ಜವಾಬ್ದಾರಿ ಬದಲಾವಣೆ ಕಾರ್ಯಕ್ರಮ. ಕಳೆದ ವರ್ಷ ಉತ್ತಮ ಸೇವೆಗೈದ ನಿರ್ಗಮಿತ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ತಂಡಕ್ಕೆ ಕೃತಜ್ಞತೆ. ವಿವಿಧ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಕೀರ್ತಿ ಸಾಜ ರಾಧಾಕೃಷ್ಣ ಆಳ್ವರವರದ್ದಾಗಿದ್ದು ಮುಂದಿನ ಒಂದು ವರ್ಷ ರೋಟರಿ ಜವಾಬ್ದಾರಿ ತೆಗೆದುಕೊಂಡಿದ್ದು, ಜಿಲ್ಲಾ ಗವರ್ನರ್ ನೆಲೆಯಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಒಳ್ಳೆಯ ಸೇವೆಗಾಗಿ ಕೈಜೋಡಿಸೋಣ ಎಂಬಂತೆ ಸದಸ್ಯರನ್ನು ಒಗ್ಗೂಡಿಸಿ ಉತ್ತಮ ಜನಪರ ಸೇವೆಯನ್ನು ಹಮ್ಮಿಕೊಂಡು ಜಿಲ್ಲೆಗೆ ಮಾದರಿ ಕ್ಲಬ್ ಎನಿಸಿಕೊಳ್ಳಲಿ ಎಂದರು.

ರೋಟರಿ ಸದಸ್ಯರಿಂದ ಸಮಾಜಕ್ಕೆ ‌ಮೌಲ್ಯಾಧಾರಿತ ಸೇವೆ-ಶಶಿಧರ್ ಬಿ.ಕೆ
ರೋಟರಿ ವಲಯ ಸೇನಾನಿ ಶಶಿಧರ್ ಬಿ.ಕೆ ಮಾತನಾಡಿ, ಪುತ್ತೂರಿನಲ್ಲಿ ಎಂಟು ರೋಟರಿ ಸಂಸ್ಥೆಯ ಸದಸ್ಯರು ಸಮಾಜಕ್ಕೆ ಮೌಲ್ಯಾಧಾರಿತ ಸೇವೆಯನ್ನು ನೀಡುವ ಮೂಲಕ ಜನ ಮನ್ನಣೆ ಗಳಿಸಿದೆ. ಕಳೆದ ವರ್ಷ ಬಿರುಮಲೆ ಅಭಿವೃದ್ಧಿಯ ಧ್ಯೇಯದೊಂದಿಗೆ ಹುಟ್ಟಿಕೊಂಡ ಈ ಬಿರುಮಲೆ ಹಿಲ್ಸ್ ಕ್ಲಬ್ ಜಿಲ್ಲಾ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಜೋಡಣೆ ಮಾಡಿಕೊಂಡು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದರು.

ಸಮಾಜಮುಖಿ ಸೇವೆಯಿಂದ ರೋಟರಿಗೆ ಉತ್ತಮ ಹೆಸರು-ಶಶಿಧರ್ ಕಿನ್ನಿಮಜಲು
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದೆ. ದೇಶದಲ್ಲಿ ಪೋಲಿಯೊ ನಿರ್ಮೂಲನೆ ಮಾಡಿದ ಹೆಗ್ಗಳಿಕೆ ಈ ರೋಟರಿ ಸಂಸ್ಥೆಯದ್ದಾಗಿದೆ. ಪುತ್ತೂರಿನಲ್ಲಿಯೂ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ ಇವುಗಳು ರೋಟರಿಯ ಶಾಶ್ವತ ಕೊಡುಗೆಗಳಾಗಿವೆ ಎಂದರು.

ವಿಷಯಾಧಾರಿತವಾಗಿ ಹುಟ್ಟಿಕೊಂಡ ಕ್ಲಬ್ ಬಿರುಮಲೆ ಹಿಲ್ಸ್-ಕೆ.ಪಿ ಆಳ್ವ
ಕ್ಲಬ್ ನಿರ್ಗಮಿತ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಬಿರುಮಲೆ ಬೆಟ್ಟದ ಅಭಿವೃದ್ಧಿ ಎಂಬ ವಿಷಯಾಧಾರಿತವಾಗಿ ಹುಟ್ಟಿಕೊಂಡ ಕ್ಲಬ್ ಬಿರುಮಲೆ ಹಿಲ್ಸ್ ಆಗಿದ್ದು, ಕಳೆದ ಒಂದು ವರ್ಷ ನನ್ನ ಅಧ್ಯಕ್ಷಾವಧಿಯಲ್ಲಿ ಸಹಕರಿಸಿದ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಹಾಗೂ ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರಾದ ಸಾಜ ರಾಧಾಕೃಷ್ಣರವರಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಹೇಳಿ ಸ್ಥಾಪಕ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಹೊಸ ಸದಸ್ಯರ ಸೇರ್ಪಡೆ
ಕುಂಬ್ರದಲ್ಲಿ ವ್ಯವಹಾರ ಉದ್ಯಮದೊಂದಿಗೆ ದ.ಕ ಟೆಲಿಕಾಂ ಮಂಡಳಿಯಲ್ಲಿ ಸಲಹೆದಾರರಾಗಿರುವ ನಿತೀಶ್ ಕುಮಾರ್ ಶಾಂತಿವನ, ಸಂಟ್ಯಾರಿನಲ್ಲಿ ಕೃಷಿ ಹಾಗೂ ಉದ್ಯಮ ನಡೆಸುತ್ತಿರುವ ಯತೀಶ ದೇವ, ಪಿಡಬ್ಲ್ಯೂಡಿ ಗುತ್ತಿಗೆದಾರ ಕೃಷ್ಣಪ್ರಸಾದ್ ಶೆಟ್ಟಿ, ರಾಮಕೃಷ್ಣ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಪರಮೇಶ್ವರಿ ಭಟ್ ಬಲ್ನಾಡು, ಸಿವಿಲ್ ಕಾಂಟ್ರಾಕ್ಟರ್ ಹಾಗೂ ಪುತ್ತೂರು ನಗರ ಬಿಜೆಪಿ ಯುವ ಮೋರ್ಛಾ ಉಪಾಧ್ಯಕ್ಷ ಶರತ್ ಗೌಡ ಬಲ್ನಾಡು, ಕೃಷಿಕ, ಗುತ್ತಿಗೆದಾರ, ಪಿ.ಎಲ್.ಡಿ ಬ್ಯಾಂಕ್ ಕೋಶಾಧಿಕಾರಿ ಯುವರಾಜ ಪೆರಿಯತ್ತೋಡಿ, ಬಂಟ್ವಾಳ ತಾ.ಪಂ ಮಾಜಿ ಸದಸ್ಯ ಹರಿಪ್ರಸಾದ್ ಯಾದವ್, ಬಿಇ(ಸಿವಿಲ್) ಪದವೀಧರ ಸುಜಿರ್ ಕುಮಾರ್ ಶೆಟ್ಟಿ ನುಳಿಯಾಲು, ಟೌನ್ ಬ್ಯಾಂಕ್ ನಿರ್ದೇಶಕ ಹರೀಶ್ ಬಿಜತ್ರೆ, ಕುಂಬ್ರ ಸ್ಪಂದನಾ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ರೈ ಜಾರತ್ತಾರು, ಬೊಳ್ವಾರು ಪ್ರಗತಿ ಕಾಲೇಜು ಆಫ್ ನರ್ಸಿಂಗ್ ಸೈನ್ಸ್ ಇದರ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆರವರುಗಳನ್ನು ಅಸಿಸ್ಟೆಂಟ್ ಗವರ್ನರ್ ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.


ನಿರ್ಗಮಿತ ಪದಾಧಿಕಾರಿಗಳಿಗೆ ಗೌರವ
ಕಳೆದ ವರ್ಷ ಕ್ಲಬ್‌ನ್ನು ಉತ್ತಮವಾಗಿ ಮುನ್ನಡೆಸಿದ ನಿರ್ಗಮಿತ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾರ್ಯದರ್ಶಿ ದಾಮೋದರ್ ಪಾಟಾಳಿರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನೂತನ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರ ಪತ್ನಿ ಇಂದಿರಾ ಆರ್.ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವ್ಯ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ನೂತನ ಕಾರ್ಯದರ್ಶಿ ರುಕ್ಮಯ ಕುಲಾಲ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ದಾಮೋದರ್ ಪಾಟಾಳಿ ಕ್ಲಬ್ ವರದಿ ಮಂಡಿಸಿದರು. ಕ್ಲಬ್ ಮಾರ್ಗದರ್ಶಕರಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಶರತ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.


ಬಿರುಮಲೆ ಅಭಿವೃದ್ಧಿಗೆ ಕ್ಲಬ್ ಸದಾ ಮುಂದು
ಬಿರುಮಲೆ ಹಿಲ್ಸ್ ಎನ್ನುವುದು ಅತೀ ಎತ್ತರದ ಗುಡ್ಡ ಜೊತೆಗೆ ಸುಂದರ, ಸಾಂಸ್ಕೃತಿಕವಾಗಿ ಬಿಂಬಿಸುವ ಪ್ರದೇಶ. ಬಿರುಮಲೆ ಬೆಟ್ಟವು ನಗರಸಭೆ, ಸರಕಾರ, ಶಾಸಕರ ಅನುದಾನದ ಹಿನ್ನೆಲೆಯಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಸಾರ್ವಜನಿಕರೂ ಇದರಲ್ಲಿ ಕೈಜೋಡಿಸಿರುತ್ತಾರೆ. ನಮ್ಮ ಕ್ಲಬ್ ಕೂಡ ಬಿರುಮಲೆ ಹಿಲ್ಸ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದು ಬಿರುಮಲೆ ಬೆಟ್ಟದ ಅಭಿವೃದ್ಧಿಗಾಗಿ ಕೈಜೋಡಿಸುತ್ತಿದೆ. ಪುತ್ತೂರಿನಲ್ಲಿ ದೊಡ್ಡದಾದ ಪ್ರಾಜೆಕ್ಟ್ ಹಮ್ಮಿಕೊಂಡು ಅದನ್ನು ಸಮಾಜಕ್ಕೆ ಅರ್ಪಣೆ ಮಾಡುವುದು ನಮ್ಮ ಉದ್ಧೇಶವಾಗಿದೆ.
ಸಾಜ ರಾಧಾಕೃಷ್ಣ ಆಳ್ವ, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು

ಸನ್ಮಾನ/ಗೌರವಾರ್ಪಣೆ
ಪುತ್ತೂರಿನ ಹಾಗೂ ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರನ್ನು ಮಂಗಳೂರು ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ಸ್ಥಾಪಿಸಿದ್ದು ಮಾತ್ರವಲ್ಲ ಪ್ರಸ್ತುತ ಪುತ್ತೂರಿನಲ್ಲಿ ಎಂಟು ರೋಟರಿ ಕ್ಲಬ್‌ಗಳು ಪುತ್ತೂರಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಪುತ್ತೂರಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಸದಾ ಕೈಜೋಡಿಸುತ್ತಿರುವ “ರೋಟರಿ ಭೀಷ್ಮ” ಎಂದೇ ಖ್ಯಾತರಾದ ಕೆ.ಆರ್ ಶೆಣೈರವರನ್ನು ಸನ್ಮಾನಿಸಲಾಯಿತು. ಕಳೆದ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಶಿವರಾಮ ಆಳ್ವ ಹಾಗೂ ಸೀಮಾ ಆಳ್ವ ದಂಪತಿ ಪುತ್ರಿ ವರ್ಷಿಣಿ ಎಸ್.ಆಳ್ವರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಪದ ಪ್ರದಾನ
ಕ್ಲಬ್ ನೂತನ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿ ರುಕ್ಮಯ ಕುಲಾಲ್, ಕೋಶಾಧಿಕಾರಿ ಪುರುಷೋತ್ತಮ ಪ್ರಭು, ಕ್ಲಬ್ ಜಿ.ಎಸ್.ಆರ್ ಶರತ್ ಕುಮಾರ್ ರೈ, ಉಪಾಧ್ಯಕ್ಷ ಜಯರಾಜ್ ರೈ, ಸಾರ್ಜಂಟ್ ಎಟ್ ಆಮ್ಸ್೯ ರಾಕೇಶ್ ರೈ ಬಿ, ಕ್ಲಬ್ ಸರ್ವಿಸ್ ನಿರ್ದೇಶಕಿ ವಂದನಾ ಶರತ್, ವೊಕೇಶನಲ್ ಸರ್ವಿಸ್ ನಿರ್ದೇಶಕ ದಾಮೋದರ್ ಪಾಟಾಳಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸಂದೀಪ್ ರೈ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ನಿತಿನ್ ಪಕ್ಕಳ, ಯೂತ್ ಸರ್ವಿಸ್ ನಿರ್ದೇಶಕ ಸುಚಿತಾ ಶೆಟ್ಟಿ, ಚೇರ್ಮನ್ ಗಳಾದ ಅನಿಲ್ ಡಿ’ಸೋಜ(ಮೆಂಬರ್ ಶಿಪ್), ಡಾ.ಶರಣ್ ಆಳ್ವ(ಟಿ.ಆರ್.ಎಫ್), ಅಭಿಷೇಕ್ ರೈ(ಪಬ್ಲಿಕ್ ಇಮೇಜ್), ಸಿದ್ಧಾರ್ಥ್ ನಾಯರ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಜಯಮಾಲ(ಪಲ್ಸ್ ಪೋಲಿಯೊ), ಗಣೇಶ್ ರೈ(ವೆಬ್/ಡಿಜಿಟಲ್ ರೋಟರಿ), ಸ್ವಾತಿ ಜೆ.ರೈ(ಸಿ.ಎಲ್.ಸಿ.ಸಿ) ರವರುಗಳನ್ನು ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್ ರವರು ಪದ ಪ್ರದಾನ ನೆರವೇರಿಸಿದರು.

LEAVE A REPLY

Please enter your comment!
Please enter your name here