ಸರಕಾರ ಪಂಚಾಯತ್ ನ ಅಧಿಕಾರ ಕಿತ್ತು ಕೊಳ್ಳುತ್ತಿದೆ- ಅರಿಯಡ್ಕ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

0

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಜು.19ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಸರಕಾರದ ಕಾನೂನಿನಿಂದ ಸಾರ್ವಜನಿಕರಿಗೆ ತೊಂದರೆ…..
ಪಂಚಾಯತ್ ಗಳಲ್ಲಿ 9/11 ವಿನ್ಯಾಸ ನಕ್ಷೆ ಮಾಡಲು ಕಳೆದ ಒಂದು ವರ್ಷದಿಂದ ಯಾವುದೇ ತೊಂದರೆ ಇಲ್ಲದೆ ಮಾಡಿಕೊಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ತೊಂದರೆ ಇಲ್ಲದೆ ತಮ್ಮ ಕೆಲಸ ಕಾರ್ಯಗಳನ್ನು ಪಂಚಾಯತ್ ನಿಂದ ಮಾಡಿಕೊಳ್ಳುತ್ತಿದ್ದರು. ಕಳೆದ ಒಂದು ವರ್ಷದಿಂದ ಸಾಮಾನ್ಯ ಭೂ ಪರಿವರ್ತನೆಗೊಂಡ ಜಮೀನಿಗೆ ವಿನ್ಯಾಸ ನಕ್ಷೆ ಮಾಡಲು ಪುಡಾದ ಅಭಿಪ್ರಾಯ ಪಡೆದುಕೊಂಡು 9/11 ಮಾಡಲು ಸರಕಾರದ ಆದೇಶವಾಗಿತ್ತು. 94 ಸಿ ಯಲ್ಲಿ ಹಕ್ಕು ಪತ್ರ ಪಡೆದುಕೊಂಡ ಜಮೀನಿಗೆ ಹಿಂದಿನ ರೀತಿಯಲ್ಲಿ ಗ್ರಾಮ ಪಂಚಾಯತಿನಲ್ಲಿ 9/11 ಮಾಡಲು ಅವಕಾಶ ಇತ್ತು. ಇತ್ತೀಚಿನ ದಿನಗಳಲ್ಲಿ ಡೋರ್ ನಂಬರ್ ಪಡೆಯಲು ಫಲಾನುಭವಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. 9/11 ಗ್ರಾಮ ಪಂಚಾಯಿತಿನಲ್ಲಿ ಆಗುತ್ತಾ ಇಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಕಿತ್ತುಕೊಳ್ಳುವ ಕಾರ್ಯ ಸರಕಾರದಿಂದ ನಡೆಯುತ್ತಿದೆ ಎಂದು ಸದಸ್ಯ ಹರೀಶ್ ರೈ ಜಾರತ್ತಾರು ಆರೋಪಿಸಿದರು. ಗ್ರಾಮಾಭಿವೃಧ್ಧಿಯಲ್ಲಿ ಇಂತಹ ಕಾನೂನುಗಳು ಸರಿ ಅಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಸದಸ್ಯ ಲೋಕೇಶ್ ಚಾಕೊಟೆ ಹೇಳಿದರು.


ಈ ವಿಚಾರವಾಗಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿಯವರು ಮಾತನಾಡಿ, ನಾವು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಸೇವೆಯನ್ನು ಮಾಡಿದ್ದರೂ ಕೂಡ, ಸರಕಾರದ ನೀತಿಯಿಂದಾಗಿ ಸಾರ್ವಜನಿಕರ ಸೇವೆ ಮಾಡಲು ಕಷ್ಟವಾಗುತ್ತಿದೆ. ನಮ್ಮ ಸಮಸ್ಯೆಗಳಿಗೆ ಪಂಚಾಯತ್ ಸ್ಪಂದಿಸುವುದಿಲ್ಲ ಎಂಬ ಆರೋಪವು ನಮ್ಮ ಮೇಲಿದೆ. ಸರಕಾರದ ತಪ್ಪು ನೀತಿಯಿಂದಾಗಿ ಪಂಚಾಯತ್ ನಲ್ಲಿ 9/11 ತಡವಾಗುತ್ತಿದೆ. ಅದಲ್ಲದೇ ಸಾರ್ವಜನಿಕರ ಜಾಗದ ಅಕ್ರಮ ಸಕ್ರಮ ಸಿಟ್ಟಿಂಗ್ ಮಾತ್ರ ಆಗುತ್ತಿದೆ, ಹಕ್ಕುಪತ್ರ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.


ಈ ಸಂದರ್ಭದಲ್ಲಿ ಪಂಚಾಯತ್ ಪಿ.ಡಿ.ಓ ಸುನಿಲ್ ಎಚ್ ಟಿ ರವರು ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರ, ಭೂಪರಿವರ್ತನೆ ಜಮೀನುಗಳಿಗೆ 9/11 ಖಾತೆ ಆಗಲು ವಿನ್ಯಾಸ ನಕ್ಷೆ ಅನುಮೋದನೆಯನ್ನು ಪುಡಾ ಮಾಡಬೇಕು. ಕಟ್ಟಡ ಪರವಾನಿಗೆ ನಕಾಶೆಗೆ ಪುಡಾ ಅನುಮೋದನೆ ನೀಡಬೇಕು, ಕಟ್ಟಡ ನಂಬರ್ ಕೊಡುವಾಗ ವಾಸ್ತವ್ಯಕ್ಕೆ ಯೋಗ್ಯ ಎಂಬ ಪ್ರಮಾಣ ಪತ್ರದ ಜೊತೆ ಕಾರ್ಮಿಕ ಇಲಾಖೆ ಎನ್.ಓ.ಸಿ ಪರಿಶೀಲನೆ ಮಾಡಿ ಅನುಮೋದನೆ ಮಾಡಬೇಕು ಎಂದು ಮಾಹಿತಿ ನೀಡಿದರು.


ಮರಳು -ಕೆಂಪುಕಲ್ಲು ಗಣಿಗಾರಿಕೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ಕೆಲವು ದಿನಗಳಿಂದ ಮನೆ,ಕಟ್ಟಡ ನಿರ್ಮಾಣ ಮಾಡುವವರಿಗೆ, ಕಟ್ಟಡ ಕಾರ್ಮಿಕರಿಗೆ ಮರಳು, ಕೆಂಪು ಕಲ್ಲು ಗಣಿಗಾರಿಕೆ ನಿಲ್ಲಿಸಿ ತೊಂದರೆಯಾಗಿದೆ. ಈ ಉದ್ಯಮದಿಂದಲೇ ಜೀವನ ಕಟ್ಟಿಕೊಂಡ ಜನರ ಬದುಕು ದುಸ್ತರವಾಗಿದೆ ಎಂದು ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು ಮತ್ತು ಭಾರತಿ ವಸಂತ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.


ಸ್ವಚ್ಛತೆಗೆ ಆದ್ಯತೆ ನೀಡಿ
ಕಾವು ಅಂಗನವಾಡಿ ಸಮೀಪ‌ ಸಾರ್ವಜನಿಕ ಶೌಚಾಲಯ ದುಸ್ಥಿತಿಯಲ್ಲಿ ಇದೆ.ವಠಾರದಲ್ಲಿ ಗಿಡ ಗಂಟಿ ಪೊದರು ತುಂಬಿದೆ. ಇದನ್ನು ಸ್ವಚ್ಛ ಮಾಡುವ ಕೆಲಸವಾಗಬೇಕಿದೆ ಎಂದು ಸದಸ್ಯೆ ಹೇಮಾವತಿ ಚಾಕೋಟೆ ಹೇಳಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.


ದಾರಿ ದೀಪ ಬೆಳಗಿಸಿ
ದಾರಿ ದೀಪ ಎಲ್ಲಾ ಕೆಟ್ಟು ಹೋಗಿದೆ. ಒಂದು ಕಡೆಯಿಂದ ಆನೆ ಮುಂತಾದ ಕಾಡು ಪ್ರಾಣಿಗಳ‌ ಹಾವಲಿ, ರಾತ್ರಿ ದಾರಿಯುದ್ದಕ್ಕೂ ಕತ್ತಲು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ದಾರಿ ದೀಪ ಸರಿ ಮಾಡಿ ಎಂದು ಸದಸ್ಯ ಲೋಕೇಶ್ ಚಾಕೋಟೆ ಹೇಳಿದರು. ಈ ಕುರಿತು ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಮಾತನಾಡಿ, ವಿಪರೀತ ಗಾಳಿ ಮಳೆಗೆ ವಿದ್ಯುತ್ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸದ್ಯ ಪ್ರಧಾನ ರಸ್ತೆಯ ದಾರಿ ದೀಪಗಳ ದುರಸ್ತಿ ಒಂದು ವಾರದೊಳಗೆ ಮಾಡುತ್ತೇವೆ ಎಂದರು.


ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಪಿ.ಡಿ.ಓ ಸುನಿಲ್ ಎಚ್.ಟಿ, ಸದಸ್ಯರಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ಹರೀಶ್ ರೈ ಜಾರತ್ತಾರು, ರಾಜೇಶ್ ಮಣಿಯಾಣಿ ತ್ಯಾಗರಾಜೆ, ನಾರಾಯಣ ನಾಯ್ಕ ಚಾಕೋಟೆ, ಸದಾನಂದ ಮಣಿ ಮಾಣಿ, ಸೌಮ್ಯ ಬಾಲಸುಬ್ರಹ್ಮಣ್ಯ, ಭಾರತಿ ವಸಂತ್ ಕೌಡಿಚ್ಚಾರು, ಜಯಂತಿ ಪಟ್ಟುಮೂಲೆ, ಉಷಾ ರೇಖಾ ರೈ ಕೊಳ್ಳಜೆ, ಪುಷ್ಪಲತಾ ಮರತ್ತಮೂಲೆ, ಸಾವಿತ್ರಿ ಪೊನ್ನೆತ್ತಳ್ಕ, ಅನಿತಾ ಆಚಾರಿಮೂಲೆ, ಹೇಮಾವತಿ ಚಾಕೋಟೆ, ವಿನೀತ ಬಳ್ಳಿಕಾನ, ರೇಣುಕಾ ಸತೀಶ್ ಕರ್ಕೇರಾ, ಉಪಸ್ಥಿತರಿದ್ದರು.

ಕಾರ್ಯದರ್ಶಿ‌ ವಿದ್ಯಾಧರ ಸ್ವಾಗತಿಸಿ, ಇಲಾಖಾ ಮಾಹಿತಿ ನೀಡಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here