‘ಮರಳು, ಕೆಂಪುಕಲ್ಲು ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ’- ‘ಕಲ್ಲುಕೋರೆ ಲೈಸೆನ್ಸ್ ಬೇಕಿದ್ದವರು ನಮ್ಮ ಬಳಿಗೆ ಬನ್ನಿ’- ‘ಸುದ್ದಿ ಜನಧ್ವನಿ’ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ದ.ಕ. ಜಿಲ್ಲೆಯಾದ್ಯಂತ ಮರಳು, ಕೆಂಪುಕಲ್ಲು ಸಿಗದೆ ಸಮಸ್ಯೆಯಾಗುತ್ತಿದೆ ಎನ್ನುವ ಮಾತುಗಳ ಹಿನ್ನೆಲೆಯಲ್ಲಿ ಸಮಸ್ಯೆಗೆ ತುತ್ತಾಗಿರುವ ವಿವಿಧ ವರ್ಗಗಳ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ನಿಟ್ಟಿನಲ್ಲಿ ‘ಜನಧ್ವನಿ-ಕೆಂಪುಕಲ್ಲು, ಮರಳು ಸಮಸ್ಯೆ’ ನೇರಸಂವಾದ ಕಾರ್ಯಕ್ರಮವನ್ನು ಸುದ್ದಿ ಚಾನೆಲ್ ಮತ್ತು ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ಜು.23ರಂದು ಆಯೋಜಿಸಲಾಗಿತ್ತು.


ದ.ಕ.ಜಿಲ್ಲಾ ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ದ.ಕ. ಜಿಲ್ಲಾ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಪುತ್ತೂರು ಇದರ ಸಲಹೆಗಾರ ಕೆ.ಜಯರಾಮ ಕುಲಾಲ್ ಮತ್ತು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ. ವಾಮನ್ ಪೈಯವರು ವಿವಿಧ ವರ್ಗಗಳ ಪ್ರತಿನಿಽಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮರಳು, ಕೆಂಪುಕಲ್ಲು ಪೂರೈಕೆಯ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳು, ಕಾರ್ಮಿಕರು, ಉದ್ಯಮ, ನಿರ್ಮಾಣ ಕ್ಷೇತ್ರ, ವ್ಯಾಪಾರಸ್ಥರು, ವಾಹನ ಮಾಲಕ-ಚಾಲಕರು ಹೀಗೆ ಪ್ರತಿಯೊಂದು ವಿಭಾಗದವರು ಅನುಭವಿಸುತ್ತಿರುವ ಬವಣೆಗಳ ಬಗ್ಗೆ ವಿವರಿಸಿದರು. ಜೊತೆಗೆ ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಅತಿಥಿಗಳು, ಕರೆಮಾಡಿದ ವೀಕ್ಷಕರು ಅಭಿಪ್ರಾಯಗಳನ್ನು ಹಂಚಿಕೊಂಡರು.


ಕಾರ್ಯಕ್ರಮದ ಅಂತಿಮ ಹಂತದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರನ್ನು ಫೋನ್ ಮೂಲಕ ಸಂಪರ್ಕಿಸಿದ್ದು, ಅತಿಥಿಗಳು ಎದುರಾಗಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ‘ತಾತ್ಕಾಲಿಕ ಸಮಸ್ಯೆಗಳಾಗಿರುವುದು ನಿಜ. ಈ ಹಿಂದೆ ಯಾರ‍್ಯಾರೋ ಎಲ್ಲಿಂದಲೋ ಬಂದು ಮಾಡುತ್ತಿದ್ದರು. ಈಗ ಕಾನೂನಿನಲ್ಲಿ ಯಾರಿಗೆ ತೆಗೆದುಕೊಳ್ಳುವುದಕ್ಕೆ ಅವಕಾಶ ಇದೆಯೋ ಅವರು ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಲೈಸನ್ಸ್ ಪಡೆದವರು 12 ಮಂದಿ ಇರುವುದು. ಉಳಿದವರು ಬೇರೆ ಕಡೆಯಿಂದ ಕೆಂಪುಕಲ್ಲು ತರಿಸಿ ಇಲ್ಲಿ ಮಾರಾಟ ಮಾಡುತ್ತಿದ್ದರು. ಇನ್ನು ಮರಳಿನ ವಿಚಾರದಲ್ಲಿ, ಮಂಗಳೂರಿನಲ್ಲಿ ಆಪ್ ಮೂಲಕ ಮರಳು ಸಿಗುತ್ತಿದೆ. ನಾವು ಕೂಡ ಅದನ್ನು ಪಡೆದುಕೊಳ್ಳುತ್ತಿದ್ದೇವೆ. ಆಪ್ ಮೂಲಕ ಸಿಗದಿದ್ದರೆ ಡಿಸಿ ಕಚೇರಿಗೆ ಹೋಗಿ ಶುಲ್ಕ ಕಟ್ಟಿದರೆ ಅಲ್ಲಿಂದ ಲೋಡ್ ಮಾಡಿ ಕಳಿಸುತ್ತಾರೆ. ಪರವಾನಿಗೆ ಇಲ್ಲದೆ ಸಿಕ್ಕಸಿಕ್ಕಲ್ಲಿ ಮಾಡುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಪರವಾನಿಗೆ ಇರುವವರಿಗೆ ಆರಾಮದಲ್ಲಿ ಮರಳುಗಾರಿಕೆ ನಡೆಸಬಹುದು’ ಎಂದು ಹೇಳಿದರು.


ಅಲ್ಲದೆ, ‘ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಕ್ರೆಡಾಯ್ ಮಟ್ಟದಲ್ಲಿ ರೂಪುರೇಷೆ ತಯಾರಿಸಿ, ಸಚಿವರ ಜೊತೆಗೆ ಮೀಟಿಂಗ್ ಮಾಡಿದ್ದೇವೆ. ಇಂದಿನಿಂದ ನಾಳೆಗೆ ಕಾನೂನು ಮಾಡಲು ಸಾಧ್ಯವಿಲ್ಲ. ಮಧ್ಯವರ್ತಿಗಳಿಂದಾಗಿ ಮರಳಿನ ಬೆಲೆ ಏರಿಕೆಯಾಗಿದೆ. ಕೆಂಪುಕಲ್ಲು ಕೋರೆ ಪರವಾನಿಗೆಗೆ ಅರ್ಜಿ ತೆಗೆದುಕೊಂಡು ನನ್ನ ಬಳಿಗೆ ಬನ್ನಿ, ಲೈಸೆನ್ಸ್ ಕೊಡಿಸುತ್ತೇನೆ. ರಾಯಲ್ಟಿ ಹೆಚ್ಚಾಗಿದೆ ಎನ್ನುವ ಆರೋಪವಿದ್ದು, ಸರಕಾರಕ್ಕೆ ಒತ್ತಡ ಹೇರಿ ಅದನ್ನೂ ಕಡಿಮೆಗೊಳಿಸಲು ಸಾಧ್ಯವಿದೆ. ಇಷ್ಟು ವರ್ಷ ಸಮರ್ಪಕವಾದ ಮರಳು ನೀತಿ ರೂಪಿಸದೇ ತಪ್ಪಾಗಿದೆ. ಕಾರ್ಮಿಕರ ನೋವಿನ ಬಗ್ಗೆ ಅರಿವಿದೆ. ಸಮಸ್ಯೆಗಳು ಸರಿಯಾಗುವವರೆಗೆ ಜಿಲ್ಲಾಡಳಿತದಿಂದ ಮರಳು ನೀಡುವ ಕೆಲಸ ಮಾಡುತ್ತೇವೆ. ಮರಳಿನ ಕೊರತೆ ಎಲ್ಲೂ ಇಲ್ಲ. ಅನೇಕ ಕಡೆಗಳಲ್ಲಿ ಕಾನೂನು ತೊಡಕುಗಳು ಇರುವುದನ್ನು ಸರಳೀಕರಣ ಮಾಡಿ, ಎಲ್ಲರಿಗೂ ಲೈಸೆನ್ಸ್ ಸಿಗುವಂತೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಸರಕಾರಕ್ಕೆ ಸಲ್ಲಿಕೆಯಾಗಿದೆ. ಮುಂದಿನ ಒಂದೆರಡು ವಾರದಲ್ಲಿ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತೇವೆ. ಯಾರೂ ಹೆದರಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು. ಸುದ್ದಿ ಚಾನೆಲ್ ನಿರೂಪಕ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here