ಅಪಘಾತ ವಲಯವಾಗುತ್ತಿದೆಯಾ ನೆಕ್ಕಿಲಾಡಿಯ ಚತುಷ್ಪಥ ರಸ್ತೆ?

0

ನಿರಂತರ ಅಪಘಾತ:ಅವೈಜ್ಞಾನಿಕ ಕಾಮಗಾರಿಯೇ ಕಾರಣ-ಸ್ಥಳೀಯರ ಆರೋಪ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರದ ಸಮಯ ಕಡಿಮೆಯಾಗಿದೆ. ಸುಗಮ ಸಂಚಾರ ಉತ್ತಮವಾದಷ್ಟೇ ಪ್ರಮಾಣದಲ್ಲಿ ಅಪಘಾತ ಪ್ರಮಾಣಗಳೂ ಅಧಿಕವಾಗಿದೆ. ನೆಕ್ಕಿಲಾಡಿಯ ಅದರ್ಶ ನಗರ, ಇಂದಾಜೆಯಲ್ಲಿ ಒಂದೂವರೆ ತಿಂಗಳಲ್ಲಿ 5ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು, ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.


ಪುತ್ತೂರು-ಉಪ್ಪಿನಂಗಡಿ ರಸ್ತೆಯ ಬೇರಿಕೆಯಿಂದ ನೆಕ್ಕಿಲಾಡಿ ತನಕ ಕಳೆದ ಬಾರಿ ಚತುಷ್ಪಥ ಕಾಮಗಾರಿ ನಡೆದಿತ್ತು. ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ತುಂಬಿದ್ದ ರಸ್ತೆಗೆ ಡಾಮರೀಕರಣಗೊಂಡು ಅಂದದ ರಸ್ತೆ ನಿರ್ಮಾಣಗೊಂಡಿತ್ತು. ಹೀಗಾಗಿ ವಾಹನಗಳ ವೇಗದ ಮಿತಿ ಅಧಿಕವಾಗತೊಡಗಿತು.ಇದರಿಂದಾಗಿ ಅಪಘಾತಗಳುಂಟಾಗುವುದೂ ಸಾಮಾನ್ಯವಾಗ ತೊಡಗಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ 5 ಅಪಘಾತಗಳು ಒಂದೇ ಸ್ಥಳದಲ್ಲಿ ಸಂಭವಿಸಿದೆ. ಈ ಪೈಕಿ ಕೆಲವು, ವಾಹನಗಳ ಅತಿ ವೇಗದ ಕಾರಣದಿಂದ ಸಂಭವಿಸಿದ್ದರೆ ಇನ್ನು ಕೆಲವು ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಮನೆಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳೇ ಸಾಕ್ಷಿಯಾಗಿದೆ.


ಚತುಷ್ಪಥ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗುತ್ತಿದೆ.ಅದನ್ನು ಸರಿಪಡಿಸಿ ಎಂದು ಕಾಮಗಾರಿ ಸಂದರ್ಭದಲ್ಲಿ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದಿದ್ದರೂ ಅವರು ಗಮನಹರಿಸಿಲ್ಲ.ಈ ಹಿಂದೆ ಇದ್ದ ಒಳರಸ್ತೆಗಳು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿಯೂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ.ಚತುಷ್ಪಥ ರಸ್ತೆ ಕೊನೆಗೊಂಡು ಏಕ ರಸ್ತೆಗ ಪ್ರವೇಶಿಸುವಲ್ಲಿ, ಶಾಲಾ ವಠಾರ, ತಿರುವು ಸೇರಿದಂತೆ ಅವಶ್ಯಕತೆಯಿರುವಲ್ಲಿಯೂ ಸೂಚನಾ ಫಲಕವನ್ನು ಅಳವಡಿಸದೇ ಇರುವುದೂ ಅಪಘಾತಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.


ಕಾಮಗಾರಿಗಾಗಿ ಎರಡು ವರ್ಷ ತಗೊಂಡಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಹೋಗಿದ್ದಾರೆ. ಆದರೆ ಇಲ್ಲಿ ಕೆಲಸ ಪೂರ್ಣಗೊಂಡಿಲ್ಲ. ಈ ಹಿಂದೆ ಇದ್ದ ಸಂಪರ್ಕ ರಸ್ತೆಗಳ ನಿರ್ವಹಣೆ ಸರಿಯಾಗಿ ಮಾಡಿಲ್ಲ. ರಸ್ತೆಯಲ್ಲಿ ಎಲ್ಲಿಯೂ ಸೂಚನಾ ಫಲಕವಿಲ್ಲ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಇಲ್ಲಿ ಹಲವು ಅಪಘಾತಗಳು ನಡೆಯುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಮಾಡಿಕೊಡುವುದಾಗಿ ಪ್ರಾರಂಭದಲ್ಲಿ ತಿಳಿಸಿದ್ದರೂ ಈಗ ರಸ್ತೆಯ ಒಂದು ಬದಿ ಮಾತ್ರ ಚರಂಡಿ ನಿರ್ಮಿಸಿದ್ದಾರೆ. ಇದರ ಪರಿಣಾಮ ಮಳೆ ನೀರು ಪಕ್ಕದ ತೋಟಕ್ಕೆ ನುಗ್ಗಿ ಕೃಷಿ ಹಾನಿಯುಂಟಾಗುತ್ತಿದೆ. ಕೊಳಚೆ ನೀರು ಮನೆಯಂಗಳಕ್ಕೆ ಬರುತ್ತಿದೆ. ಚತುಷ್ಪಥ ರಸ್ತೆ ಕಾಮಗಾರಿಗಾಗಿ ತನ್ನ ಕೃಷಿಭೂಮಿಯನ್ನು ಬಿಟ್ಟುಕೊಟ್ಟಿದ್ದು, ಈಗ ಇರುವ ಅಲ್ಪ ಕೃಷಿಯೂ ತೋಟದಲ್ಲಿ ನೀರು ನಿಂತು ಹಾನಿಯಾಗುತ್ತಿರುವುದರಿಂದ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ.


ಕಾಮಗಾರಿಯು ಅವೈಜ್ಞಾನಿಕವಾಗಿ ನಡೆದಿದ್ದು, ಒಳರಸ್ತೆಯಿಂದ ಮುಖ್ಯರಸ್ತೆಗೆ ಪ್ರವೇಶ ಮಾಡುವಲ್ಲಿ ವಾಹನಗಳ ಸಂಚಾರ ಗಮನಕ್ಕೆ ಬರುವುದಿಲ್ಲ. ಇಂತಹ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಬ್ಯಾರಿಕೇಡ್ ಅಳವಡಿಸಲು ಪಂಚಾಯತ್ ಮುಂದಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯವರು ಅನುಮತಿ ನೀಡುತ್ತಿಲ್ಲ. ಕಾಮಗಾರಿಯ ಪ್ರಾರಂಭದಲ್ಲಿ ರಸ್ತೆಯ ಎರಡೂ ಬದಿ ಚರಂಡಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದರು. ಕಾಮಗಾರಿ ನಡೆಯುತ್ತಿರುವಾಗಲೇ ಅವ್ಯವಸ್ಥೆಯ ಬಗ್ಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೆ ತರಲಾಗಿದ್ದರೂ ಅವರು ಸ್ಪಂದನೆ ನೀಡಿಲ್ಲ. ಸಂಭಾವ್ಯ ಅಪಘಾತ,ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಇನ್ನು ಮುಂದೆಯಾದರೂ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕು. ಅನಾಹುತ ನಡೆದ ಬಳಿಕ ಸಾಂತ್ವನ ಹೇಳುವ ಬದಲು ಜನಪ್ರತಿನಿಽಗಳು ಅಽಕಾರಿಗಳು ಎಚ್ಚೆತ್ತುಕೊಂಡು ಈಗಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.


ಸಂಪರ್ಕ ರಸ್ತೆ ಕಾಮಗಾರಿಯಲ್ಲಿ ತಾರತಮ್ಯ:
ರಸ್ತೆ ಕಾಮಗಾರಿ ಮಾಡುವಾಗ ಇಲಾಖೆಯಲ್ಲಿ ತನ್ನದೇ ಮಾರ್ಗಸೂಚಿಗಳಿದ್ದು ಅದರಂತೆ ಕಾಮಗಾರಿ ಮಾಡಬೇಕು. ಆದರೆ ಮಾರ್ಗಸೂಚಿ ಬಿಟ್ಟು ರಸ್ತೆ ಕಾಮಗಾರಿ ಮಾಡಿರುವುದೇ ಇಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಸಂಪರ್ಕ ರಸ್ತೆಗಳಿಗೂ ಮಾರ್ಗಸೂಚಿಯಂತೆ ಸಂಪರ್ಕ ಕಲ್ಪಿಸಬೇಕೆಂಬ ನಿಯಮಗಳಿದ್ದರೂ ಇದರಲ್ಲಿಯೂ ತಾರತಮ್ಯ ಮಾಡಿದ್ದಾರೆ. ಐನೂರಕ್ಕೂ ಅಧಿಕ ನಿವಾಸಿಗಳಿರುವ ಸಂಪರ್ಕ ರಸ್ತೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಕೇವಲ ಅರು ಮನೆಗಳಿಗೆ ತೆರಳುವಲ್ಲಿ ರಸ್ತೆ ಮಾಡಿದ್ದಾರೆ. ಆದರ್ಶ ನಗರದಲ್ಲಿ ಭಜನಾ ಮಂದಿರ, ಮಸೀದಿ, ಮನೆಗಳು ಸಂಪರ್ಕ ಕಲ್ಪಿಸುವ ರಸ್ತೆ ಮಾಡಿಲ್ಲ. ಅವರು ರಾಜಕೀಯ ಒತ್ತಡಕ್ಕೆ ಮಣಿದು ಆ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಒಂದೂವರೆ ತಿಂಗಳಲ್ಲಿ 5ಕ್ಕೂ ಅಧಿಕ ಅಪಘಾತ:
ಅವೈಜ್ಞಾನಿಕವಾದ ರಸ್ತೆ ಕಾಮಗಾರಿಯಿಂದಾಗಿ ನೆಕ್ಕಿಲಾಡಿಯ ಇಂದಾಜೆ, ದರ್ಬೆ, ಆದರ್ಶ ನಗರಗಳು ಅಪಘಾತ ವಲಯಗಳಾಗಿವೆ. ಒಂದೂವರೆ ತಿಂಗಳಲ್ಲಿ ಐದಕ್ಕಿಂತಲೂ ಅಧಿಕ ಅಪಘಾತಗಳು ಸಂಭವಿಸಿದ್ದು, ಈ ಪೈಕಿ 5 ಪ್ರಕರಣಗಳು ದಾಖಲಾಗಿದೆ. ದಾಖಲಾಗದ ಪ್ರಕರಣಗಳು ಕೆಲವು ಇದೆ. ಅಪಘಾತದ ಭಯಾನಕ ದೃಶ್ಯಾವಳಿಗಳು ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳು ಸಂಭವಿಸುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ.


ನೆಕ್ಕಿಲಾಡಿ ಪೆಟ್ರೋಲ್ ಪಂಪ್ ಬಳಿಯೂ ಅಪಘಾತ:
ಚತುಷ್ಪಥ ರಸ್ತೆ ಕೊನೆಗೊಳ್ಳುವ ನೆಕ್ಕಿಲಾಡಿಯ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಬಳಿ ಚತುಷ್ಪಥ ರಸ್ತೆ ಕೊನೆಗೊಳ್ಳುವ ಬಗ್ಗೆ ಯಾವುದೇ ಮುನ್ಸೂಚನಾ ಫಲಕಗಳಿಲ್ಲ. ಏರು ರಸ್ತೆಯಾಗಿರುವ ಕಾರಣ ಚತುಷ್ಪಥ ರಸ್ತೆ ಕೊನೆಗೊಳ್ಳುವುದು ವಾಹನ ಸವಾರರಿಗೆ ತಕ್ಷಣ ಅರಿವಿಗೆ ಬರುವುದಿಲ್ಲ. ಇದರಿಂದಾಗಿ, ರಸ್ತೆ ಉತ್ತಮವಾಗಿದೆ ಎಂದು ವೇಗದಲ್ಲಿ ಬರುವ ವಾಹನಗಳು ಹತ್ತಿರ ತಲುಪಿದಾಗ ಚತುಷ್ಟಥ ರಸ್ತೆಯಿಂದ ಏಕ ರಸ್ತೆಗೆ ಪ್ರವೇಶಿಸುವಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತಗಳು ಸಂಭವಿಸುತ್ತಿವೆ.ಅಲ್ಲದೆ ಚತುಷ್ಪಥ ರಸ್ತೆ ಕೊನೆಗೊಳ್ಳುವಲ್ಲಿ ರಸ್ತೆಯು ಹೊಂಡ ಗುಂಡಿಗಳಿಂದ ತುಂಬಿರುವುದೂ ಅಪಘಾತಕ್ಕೆ ಕಾರಣವಾಗಿದೆ.


ಲೈವ್ ಆಗಿ ಕಂಡ ಅಪಘಾತ:
ಸಮಸ್ಯೆ ಕುರಿತ ಮಾಹಿತಿಗಾಗಿ ಸುದ್ದಿ ತಂಡವು ನೆಕ್ಕಿಲಾಡಿಗೆ ತೆರಳಿತ್ತು. ಈ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕಾರೊಂದು ನೆಕ್ಕಿಲಾಡಿ ಪೆಟ್ರೋಲ್ ಪಂಪ್ ಬಳಿ, ಚತುಷ್ಪಥ ರಸ್ತೆ ಕೊನೆಗೊಳ್ಳುವ ಬಗ್ಗೆ ಸೂಚನಾ ಫಲಕವಿಲ್ಲದೆ ಹತ್ತಿರ ತಲುಪಿದಾಗಲಷ್ಟೆ ಚಾಲಕನ ಗಮನಕ್ಕೆ ಬಂದಿದ್ದರಿಂದ ನಿಯಂತ್ರಣ ಕಳೆದುಕೊಂಡು ಕಾರು ಅಪಘಾತವಾಗಿರುವುದನ್ನು ‘ಸುದ್ದಿ’ ತಂಡವು ಲೈವ್ ಆಗಿ ಕಂಡಿದೆ.

ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಒಂದೂವರೆ ತಿಂಗಳಲ್ಲಿ ಹಲವು ಅಪಘಾತಗಳು ನಡೆದಿದ್ದು, ಇದರಲ್ಲಿ ಐದು ಅಪಘಾತ ಪ್ರಕರಣಗಳು ದಾಖಲಾಗಿದೆ. ರಾಜಿಯಲ್ಲಿ ಹಲವು ಪ್ರಕರಣ ಇತ್ಯರ್ಥಗೊಂಡಿದೆ. ಗುತ್ತಿಗೆದಾರರಿಗೆ, ಇಲಾಖೆಗಳ ಪ್ರತಿನಿಧಿಗಳನ್ನು ಕರಿಸಿ ಮಾತುಕತೆ ನಡೆಸಿ ಅವರಿಗೆ ವಾಸ್ತವ ವಿಚಾರಗಳ ಮನವರಿಕೆ ಮಾಡಲಾಗಿದೆ. ಇಲಾಖೆ ತನ್ನ ಮಾರ್ಗಸೂಚಿ ಬಿಟ್ಟು ಕಾಮಗಾರಿ ಮಾಡಿರುವುದೇ ಅಪಘಾತಕ್ಕೆ ಕಾರಣ. ಸಂಪರ್ಕ ರಸ್ತೆಗಳನ್ನು ಮಾಡುವಲ್ಲಿಯೂ ತಾರತಮ್ಯ ಮಾಡಿದ್ದಾರೆ. ರಸ್ತೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರ ಆಗ್ರಹದಂತೆ ನೆಕ್ಕಿಲಾಡಿ ಗ್ರಾ.ಪಂ.ನಿಂದ ಇಲಾಖೆಗೆ ಮನವಿ ಮಾಡಿದೆ. ಆದರೆ ಅವರ ಸ್ಪಂದನೆಯಿಲ್ಲ. ನಮ್ಮ ಗ್ರಾಮದಲ್ಲಿ ಅಪಘಾತ ವಲಯಗಳು ಇರಬಾರದು ಎಂದು ಗ್ರಾ.ಪಂನಿಂದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದರೂ ಅವರು ಸ್ಪಂದಿಸುತ್ತಿಲ್ಲ.
ಪ್ರಶಾಂತ್, ಸದಸ್ಯರು ನೆಕ್ಕಿಲಾಡಿ ಗ್ರಾ.ಪಂ

ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ತಗೊಂಡಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ಹೋಗಿದ್ದಾರೆ. ಆದರೆ ಇಲ್ಲಿನ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯ ಒಂದು ಬದಿ ಮಾತ್ರ ಚರಂಡಿಯಿದೆ.ಇನ್ನೊಂದು ಭಾಗದಲ್ಲಿ ಚರಂಡಿಯಿಲ್ಲ.ಸಂಪರ್ಕ ರಸ್ತೆಗಳಿಗೆ ಸರಿಯಾಗಿ ನಿರ್ವಹಿಸಿಲ್ಲ.ಎಲ್ಲಿಯೂ ಸೂಚನಾ -ಲಕಗಳಿಲ್ಲ.ಕಾಮಗಾರಿ ಅವೈಜ್ಞಾನಿಕವಾಗಿದ್ದು ನಿರಂತರ ಅಪಘಾತಗಳು ನಡೆಯುತ್ತಿದೆ.ನಿವೃತ್ತ ಯೋಧರೊಬ್ಬರು ಬಿದ್ದು ಗಾಯಗೊಂಡಿದ್ದಾರೆ.
ಶಿವಾನಂದ ನೆಕ್ಕಿಲಾಡಿ, ಸ್ಥಳೀಯರು

ಇಂದಾಜೆ ತಿರುವಿನಲ್ಲಿ ತಡೆಗೋಡೆ ನಿರ್ಮಾಣ ಬಗ್ಗೆ ಪ್ರಾರಂಭದಲ್ಲಿಯೇ ಜನರಲ್ಲಿ ಸಂಶಯ ಉಂಟಾಗಿತ್ತು.ಅಲ್ಲಿ ರಸ್ತೆಯು ವಕ್ರವಾಗಿ ನಿರ್ಮಾಣಗೊಂಡಿತ್ತು.ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ ಪರಿಣಾಮ ತಿರುವಿನಲ್ಲಿ ರಸ್ತೆ 12 ಮೀಟರ್ ವಿಸ್ತರಣೆಯಾಗಿದೆ. ಆದರೂ ರಸ್ತೆ ವಕ್ರವಾಗಿ ನಿರ್ಮಾಣಗೊಂಡಿದ್ದು ಅಪಘಾತ ವಲಯವಾಗಿದ್ದು ನಿರಂತರ ಅಪಘಾತಗಳು ನಡೆಯುತ್ತಿದೆ. ಸಂಪರ್ಕ ರಸ್ತೆಗಳು ಮುಖ್ಯ ರಸ್ತೆಗೆ ಸೇರುವಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲ.ಆದರ್ಶನಗರದಲ್ಲಿ ದರ್ಬೆ ಸಂಪರ್ಕ ರಸ್ತೆಯ ಬಳಿ ವಿಭಾಜಕವನ್ನು ಉದ್ದವಾಗಿ ಬಿಟ್ಟಿರುವುದು ಅವೈಜ್ಞಾನಿಕವಾಗಿದೆ.ಚತುಷ್ಪಥ ರಸ್ತೆ ಕೊನೆಗೊಳ್ಳುವ ಪೆಟ್ರೋಲ್ ಪಂಪ್ ಬಳಿ,ರಸ್ತೆ ಎಂಡ್ ಅಗುವಲ್ಲಿ ಸೂಚನಾ ಫಲಕಗಳಿಲ್ಲದೆ ವಾಹನ ಸವಾರರ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆಯುತ್ತಿದೆ.
ಹರೀಶ್,ಉಪಾಧ್ಯಕ್ಷರು ನೆಕ್ಕಿಲಾಡಿ ಗ್ರಾ.ಪಂ.

ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ತಗೊಂಡಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ಹೋಗಿದ್ದಾರೆ. ಆದರೆ ಇಲ್ಲಿನ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯ ಒಂದು ಬದಿ ಮಾತ್ರ ಚರಂಡಿಯಿದೆ.ಇನ್ನೊಂದು ಭಾಗದಲ್ಲಿ ಚರಂಡಿಯಿಲ್ಲ. ಸಂಪರ್ಕ ರಸ್ತೆಗಳಿಗೆ ಸರಿಯಾಗಿ ನಿರ್ವಹಿಸಿಲ್ಲ.ಎಲ್ಲಿಯೂ ಸೂಚನಾ ಫಲಕಗಳಿಲ್ಲ. ಕಾಮಗಾರಿ ಅವೈಜ್ಞಾನಿಕವಾಗಿದ್ದು ನಿರಂತರ ಅಪಘಾತಗಳು ನಡೆಯುತ್ತಿದೆ.ನಿವೃತ್ತ ಯೋಧರೊಬ್ಬರು ಬಿದ್ದು ಗಾಯಗೊಂಡಿದ್ದಾರೆ.
-ಶಿವಾನಂದ ನೆಕ್ಕಿಲಾಡಿ, ಸ್ಥಳೀಯರು

ರಸ್ತೆ ಉತ್ತಮವಾಗಿರುವುದರಿಂದ ವಾಹನಗಳ ವೇಗ ಅಧಿಕವಾಗುತ್ತಿದೆ. ರಸ್ತೆಯಲ್ಲಿ ಎಲ್ಲಿಯೂ ತಡೆಗೋಡೆಯಾಗಲಿ, ಗಾರ್ಡ್‌ಗಳಾಗಲೀ ನಿರ್ಮಿಸಿಲ್ಲ. ಒಂದು ಬದಿ ಮಾತ್ರ ಚರಂಡಿ ನಿರ್ಮಿಸಿದ್ದು ಇನ್ನೊಂದು ಬದಿಯಲ್ಲಿ ಚರಂಡಿಯಿಲ್ಲದೆ ಮಳೆ ನೀರು ತೋಟಗಳಿಗೆ ನುಗ್ಗುತ್ತಿದೆ. ರಸ್ತೆಗಾಗಿ ಜಾಗ ಬಿಟ್ಟುಕೊಟ್ಟವರ ಕೃಷಿಗೆ ಹಾನಿಯುಂಟಾಗುತ್ತಿದೆ. ಕೊಳಚೆ ನೀರು ಮನೆಯಂಗಳಕ್ಕೂ ಬರುತ್ತಿದೆ. ಕಾಮಗಾರಿಯ ಸಂದರ್ಭದಲ್ಲಿ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೆ ತರಲಾಗಿದ್ದು, ಪ್ರಾರಂಭದಲ್ಲಿ ಒಪ್ಪಿಕೊಂಡಿದ್ದ ಅವರು ನಂತರ ಮಾಡಿಲ್ಲ.ಅನಾಹುತ ನಡೆದ ಬಳಿಕ ಸಾಂತ್ವನ ಹೇಳುವ ಬದಲು ಈಗಲೇ ಸೂಕ್ತ ಕ್ರಮಕೈಗೊಳ್ಳಬೇಕು.
ಪ್ರಕಾಶ್ ಸ್ಥಳೀಯರು

ಈ ಹಿಂದೆ ನಮ್ಮ ಮನೆಗೆ ತಡೆಗೋಡೆ ನಿರ್ಮಿಸಿದ್ದೆವು. ಚತುಷ್ಪಥ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಅದನ್ನು ತೆರವುಗೊಳಿಸಿ ಮತ್ತೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದರು. ನಾವು ಸತ್ಯವೆಂದು ನಂಬಿದ್ದೆವು. ಕಾಮಗಾರಿ ಪೂರ್ಣಗೊಂಡರೂ ತಡೆಗೋಡೆ ನಿರ್ಮಿಸಿಲ್ಲ.ರಸ್ತೆ ಉತ್ತಮವಾಗಿದ್ದು ವಾಹನಗಳು ಹೋಗುವ ವೇಗಕ್ಕೆ ನಮಗೆ ಭಯ ಉಂಟಾಗುತ್ತಿದೆ.ಮಕ್ಕಳು ಅಂಗಳದಲ್ಲಿ ಆಡುತ್ತಿರುತ್ತಾರೆ. ತಡೆಗೋಡೆಯಿಲ್ಲದೆ ವಾಹನಗಳು ಮನೆಯಂಗಳಕ್ಕೆ ಬರುತ್ತದೋ ಎಂಬ ಆತಂಕವಿದೆ.ಚರಂಡಿಯಿಲ್ಲದೆ ಮಳೆ ನೀರು ಅಂಗಳಕ್ಕೆ ಬರುತ್ತಿದೆ.ತೆಂಗಿನ ಮರ, ಅಡಿಕ ಮರ ಹಾಗೂ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟಿದ್ದು ಪರಿಹಾರ ನೀಡಿಲ್ಲ.
ಪ್ರಭಾಕರ ನಾಯಕ್, ಸ್ಥಳೀಯರು

ಕಾಮಗಾರಿ ಅವೈಜ್ಞಾನಿಕವಾಗಿಲ್ಲ-ಎಇಇ

ಚತುಷ್ಪಥ ಕಾಮಗಾರಿಗಳನ್ನು ವೈಜ್ಞಾನಿಕ ರೀತಿಯಲ್ಲೇ ಮಾಡಲಾಗಿದೆ. ಎಲ್ಲಿಯೂ ಅವೈಜ್ಞಾನಿಕವಾಗಿಲ್ಲ. ವಾಹನ ಸವಾರರ ಅತಿಯಾದ ವೇಗದಿಂದಾಗಿ ಅಪಘಾತಗಳು ನಡೆಯುತ್ತಿರಬಹುದು. ತಿರುವುಗಳಲ್ಲಿ ವೇಗದ ಮಿತಿ, ಸೂಚನಾ ಫಲಕ ಅಳವಡಿಸಲಾಗಿದೆ. ಚರಂಡಿ ನಿರ್ಮಾಣಕ್ಕೆ ರಸ್ತೆಯ ಇನ್ನೊಂದು ಬದಿಯಲ್ಲಿ ಜಾಗದ ಕೊರತೆಯಿಂದಾಗಿ ಚರಂಡಿ ನಿರ್ಮಿಸುವುದು ಸಾಧ್ಯವಾಗಿಲ್ಲ. ಕೆಲವು ಸಂಪರ್ಕ ರಸ್ತೆಗಳು ಬಾಕಿಯಿದ್ದು ಅವುಗಳನ್ನು ಮಾಡಿಕೊಡಲಾಗುವುದು. ಮಳೆಗಾಲದಲ್ಲಿ ವಾಹನ ಅಪಘಾತಗಳು ಅಧಿಕವಾಗಿ ನಡೆಯುತ್ತಿದ್ದು, ಸವಾರರು ವೇಗವನ್ನು ನಿಯಂತ್ರಿಸಬೇಕು. ನೆಕ್ಕಿಲಾಡಿ ಪೆಟ್ರೋಲ್ ಪಂಪ್ ಬಳಿಯ ರಸ್ತೆ ಸಮಸ್ಯೆಯು ಮುಂದಿನ ಹಂತದಲ್ಲಿ ಚತುಷ್ಪಥ ಕಾಮಗಾರಿ ನಡೆಯುವಾಗ ಸರಿಯಾಗಲಿದೆ.ರಸ್ತೆಗೆ ಬ್ಯಾರಿಕೇಡ್ ಅಳವಡಿಸಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕಿದೆ
ರಾಜೇಶ್ ರೈ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

LEAVE A REPLY

Please enter your comment!
Please enter your name here