





ಮಾಫಲದಲ್ಲಿರುವ ಔಷಧಿಯ ಗುಣಗಳೇನು?.. ಇಲ್ಲಿದೆ ಮಾಹಿತಿ


ಲಿಂಬೆ ಜಾತಿ ಹಣ್ಣುಗಳಲ್ಲಿ ದೊಡ್ಡ ಫಲ(ಹಣ್ಣು)ಇದು, ಆದ ಕಾರಣ ಇದಕ್ಕೆ ಮಹಾಫಲ, ಮಾಫಲ ಎನ್ನುತ್ತಾರೆ. ಸತ್ಯನಾರಾಯಣ ಪೂಜೆ ಮಾಡುವಾಗ ಪುರೋಹಿತರ ಪಟ್ಟಿಯಲ್ಲಿ ಮಾಫಲ ಇರುತ್ತದೆ. ಉಪ್ಪಿನಕಾಯಿ, ಚಟ್ನಿ ಮಾಡಿದರೆ ರುಚಿಯಾಗಿರುತ್ತದೆ. ದೊರಗಾದ ಹೊರ ಮೈ, ತುಂಡು ಮಾಡಿದರೆ ಒಳಗೆ ಬಿಳಿ ವರ್ಣದ ತಿನ್ನಬಹುದಾದ ರಸಭರಿತ ಅಂಶ. ಇದರಲ್ಲಿ ಸಿಹಿ, ಹುಳಿ ಎಂಬ ಎರಡು ವಿಧದ ಹಣ್ಣುಗಳು ಲಭ್ಯ. ಸಿಹಿಭರಿತ ಹಣ್ಣು ಔಷಧಿಗೆ ಉಪಕಾರಿ. ಎಲೆ ಬಹಳ ಪರಿಮಳದಿಂದ ಕೂಡಿದೆ. ಎಲೆಯಲ್ಲಿ ತೈಲದ ಅಂಶ ಅಧಿಕ ಇದೆ. ಹಣ್ಣಿನ ಸಿಪ್ಪೆ ಕಹಿ, ದಪ್ಪ ಸಿಪ್ಪೆಯಲ್ಲಿಯೂ ತೈಲದ ಅಂಶ ಜಾಸ್ತಿ ಇದೆ.ಇದರ ಎಲೆ, ಹೂ, ಹಣ್ಣು, ಬೀಜಗಳು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ. ರುಚಿ ಹೀನತೆ, ಅಜೀರ್ಣ, ಹೊಟ್ಟೆ ಉರಿ, ಹೊಟ್ಟೆನೋವು, ವಾಂತಿ ಇರುವಾಗ ಬಹಳಷ್ಟು ಪ್ರಯೋಜನ ನೀಡುವ ಔಷಧಿಯಾಗಿದೆ.





ಎಲೆ: ಹಣ್ಣಿನಂತೆ ಎಲೆಯಲ್ಲಿಯೂ ಅಧಿಕ ಔಷಧಿ ಗುಣಗಳಿವೆ. ಗರ್ಭಿಣಿಯರು ವಾಂತಿ ಮಾಡುವಾಗ 2-3 ಎಲೆಯನ್ನು ಕಿವುಚಿ ನೀರು ಹಾಕಿ ಚೆನ್ನಾಗಿ ಕುದಿಸಿ ಸೋಸಿ ಸ್ವಲ್ಪ ಉಪ್ಪು ಏಲಕ್ಕಿ ಪುಡಿ ಹಾಕಿ ಕಲಸಿ ಆಗಾಗ ಕುಡಿಯುತ್ತಿದ್ದರೆ ವಾಂತಿ ಕಡಿಮೆಯಾಗುತ್ತದೆ.
ಅಜೀರ್ಣದಿಂದ ವಾಂತಿಯಾಗುತ್ತಿರುವಾಗ 1-2 ಎಲೆ, ಸ್ವಲ್ಪ ಹೊದ್ಲು ಸೇರಿಸಿ ಚೆನ್ನಾಗಿ ಕುದಿಸಿ ಸೋಸಿ ಸ್ವಲ್ಪ ಉಪ್ಪು, ಸಕ್ಕರೆ ಸೇರಿಸಿ ಕುಡಿಯುತ್ತಾ ಇದ್ದರೆ ವಾಂತಿಯೊಂದಿಗೆ ನಿತ್ರಾಣವೂ ಕಡಿಮೆಯಾಗುತ್ತದೆ.
ಚೇಳು ಕಡಿತ ಆದರೆ ಅದೇ ಸ್ಥಳಕ್ಕೆ ಎಲೆಯನ್ನು ಅಥವಾ ಹಣ್ಣಿನ ಬೀಜವನ್ನು ಅರೆದು ಲೇಪಿಸಿದರೆ ನೋವು ಉರಿ ಕಡಿಮೆಯಾಗುತ್ತದೆ.
ಎಲೆಯನ್ನು ಜಜ್ಜಿ ಅದರ ಜ್ಯೂಸ್ ತೆಗೆದು ಎಳ್ಳೆಣ್ಣೆಗೆ ಹಾಕಿ ಕಾಯಿಸಿ ಪಾಕ ಮಾಡಿ ತಲೆಗೆ ಹಾಕಿ ಸ್ನಾನ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.
ಎಲೆ ಜ್ಯೂಸ್ ಪ್ರತ್ಯೇಕಿಸಿ ತೆಂಗಿನೆಣ್ಣೆಗೆ ಸೇರಿಸಿ ಅದಕ್ಕೆ ಅರಸಿನ ಮತ್ತು ಕರಿಜೀರಿಗೆ ಹಾಕಿ ಪಾಕಮಾಡಬೇಕು. ಇದನ್ನು ಕಜ್ಜಿ ಹಾಗೂ ಹಳೆ ಹುಣ್ಣುಗಳಿಗೆ ಹಚ್ಚಿದರೆ ಬೇಗನೆ ಗುಣವಾಗುವುದು.

ಹಣ್ಣು: ಸಿಹಿ ಮಾಫಲ ಪಿತ್ಥವನ್ನು ಕಡಿಮೆಮಾಡುತ್ತದೆ. ಅಸಿಡಿಟಿಗೆ ಆಯುರ್ವೇದ ಭಾಷೆಯಲ್ಲಿ ಆಮ್ಲ ಪಿತ್ಥ ಎನ್ನುತ್ತಾರೆ. ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಅಥವಾ ಹಣ್ಣನ್ನು ಜಗಿದು ತಿನ್ನುವುದರಿಂದಲೂ ಹೊಟ್ಟೆ ಉರಿ, ಹೊಟ್ಟೆನೋವುಗಳು ನಿವಾರಣೆಯಾಗುವುದು. ಇದರ ಸೇವನೆಯಿಂದ ಗ್ಯಾಸ್ಟ್ರಿಕ್, ಮೂಲವ್ಯಾಧಿ, ಮಲಬದ್ಧತೆ ನಿವಾರಣೆಯಾಗುತ್ತದೆ.
ಜುಲಾಯಿ- ಆಗಸ್ಟ್ ನಲ್ಲಿ ಮಾಫಲದೊಂದಿಗೆ ಸೈಂದವ ಲವಣ ಸೇರಿಸಿ ತಿನ್ನಬೇಕು.
ಸೆಪ್ಟಂಬರ್- ಅಕ್ಟೊಬರ್ ನಲ್ಲಿ ಮಾಫಲದೊಂದಿಗೆ ಸಕ್ಕರೆ ಹಾಕಿ ಸೇವಿಸಬೇಕು.
ನವಂಬರ್‌ನಿಂದ – ಫೆಬ್ರವರಿವರೆಗೆ ಮಾಫಲದೊಂದಿಗೆ ಉಪ್ಪು, ಶುಂಠಿ, ಬಡೇಸೊಪ್ಪು, ಹಿಪ್ಲಿ ಪುಡಿ ಸೇರಿಸಿ ಮಿಶ್ರ ಮಾಡಿ ಸೇವಿಸಬೇಕು.
ಮೇ- ಜೂನ್‌ನಲ್ಲಿ ಮಾಫಲದೊಂದಿಗೆ ಬೆಲ್ಲ ಸೇರಿಸಿ ತಿನ್ನಬೇಕು. ವರ್ಷದ ಎಲ್ಲಾ ಸಮಯದಲ್ಲಿ ಸಿಗುವ ಹಣ್ಣಾದ ಕಾರಣ ಆರೋಗ್ಯ ರಕ್ಷಣೆಗೆ ಇದನ್ನು ಇತರ ಔಷಧಿಗಳೊಂದಿಗೆ ನಿರಂತರ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇದರಲ್ಲಿ vit C A ಜಾಸ್ತಿ ಇರುವುದರಿಂದ ವ್ಯಾಧಿ ಕ್ಷಮತೆ ವೃದ್ಧಿ ಮಾಡುವುದು. ಅಲ್ಲದೆ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣದ ಅಂಶಗಳು ಇರುವುದರಿಂದ ರಕ್ತ ಮಾಂಸ ವೃದ್ಧಿಯನ್ನು ಮಾಡುವುದು.
ಉತ್ತಮ ಮಾಂಸ ವರ್ಧಕ ಕ್ಷೀಣ ಶರೀರಿಗಳು ಪುಷ್ಠಿಯಾಗಲು ಪ್ರತಿನಿತ್ಯ ಮಾಫಲ 40 ರಿಂದ 60 ಗ್ರಾಂ ಗೆ ಒಂದು ಗ್ರಾಂ ನಷ್ಟು ಹಿಪ್ಲಿ ಚೂರ್ಣ ಸೇರಿಸಿ ಸೇವಿಸಿದರೆ ತೂಕದಲ್ಲಿ ವೃದ್ಧಿಯಾಗುವುದು.

ಹೂ : ಬಿಳಿ ಅಥವಾ ನೇರಳೆ ವರ್ಣದಲ್ಲಿ ಕಂಡುಬರುವ ಹೂವನ್ನು ಅರೆದು ಸೇವಿಸಿದರೆ ಹಸಿವು ಜಾಸ್ತಿಯಾಗುವುದು. ಕಫ, ಕೆಮ್ಮು ಕಡಿಮೆಯಾಗುವುದು. ಹೊಟ್ಟೆ ಉಬ್ಬರಿಸುವುದನ್ನು ಕಡಿಮೆ ಮಾಡುವುದು. ಮಾಫಲವನ್ನು ಉಪಯೋಗಿಸಿ ತಯಾರಿಸುವ “ಮಾದೀ ಫಲ ರಸಾಯನ” ಉದರ ಸಂಬಂಧಿ ಹಲವು ತೊದರೆಗಳನ್ನು ನಿವಾರಿಸುವ ಪ್ರಸಿದ್ಧ ಔಷಧಿಯಾಗಿದೆ.
ಕೃಷಿ: ಲಿಂಬೆ ಗಿಡದಂತೆ ಬೆಳೆಯುತ್ತದೆ. ಬೀಜದಿಂದ ಗಿಡಗಳು ಹುಟ್ಟಿಕೊಳ್ಳುತ್ತದೆ. ಆಹಾರವಾಗಿ ಉಪಯೋಗವಾಗುತ್ತದೆ. ವ್ಯಾಧಿಗಳು ಬರದಂತೆ ತಡೆಗಟ್ಟುತ್ತದೆ. ಬಂದ ವ್ಯಾಧಿಯನ್ನು ನಿವಾರಿಸುವಲ್ಲಿಯೂ ನೆರವಾಗುವ ಇದನ್ನು ಎಲ್ಲರೂ ತಮ್ಮ ಮನೆಯಂಗಳದಲ್ಲಿ ನೆಟ್ಟು ಬೆಳಸಬೇಕು.
ಲೇಖಕರು : ಡಾ| ಹರಿಕೃಷ್ಣ ಪಾಣಾಜೆ











