ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ : ಹಿರಿಯ ಪತ್ರಕರ್ತ ಡಾ|ನರೇಂದ್ರ ರೈ ದೇರ್ಲರವರಿಗೆ ಸನ್ಮಾನ

0

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ ಡಾ|ನರೇಂದ್ರ ರೈ ದೇರ್ಲರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಯ್ಯೂರು ದೇರ್ಲದಲ್ಲಿರುವ ಡಾ|ನರೇಂದ್ರ ರೈ ದೇರ್ಲರವರ `ಕನಸು’ ಮನೆಯಲ್ಲಿ ಜು.24ರಂಂದು ಕಾರ್ಯಕ್ರಮ ನಡೆಯಿತು. 


ಯಾವುದೋ ವಿಶ್ವವಿದ್ಯಾನಿಲಯದ ಕುಲಪತಿ ಆಗಬೇಕಿತ್ತು-ದಂಬೆಕ್ಕಾನ ಸದಾಶಿವ ರೈ:
ಹಿರಿಯ ಪತ್ರಕರ್ತರೂ, ಖ್ಯಾತ ಸಾಹಿತಿಗಳೂ ಪ್ರಗತಿಪರ ಚಿಂತಕರೂ ಲೇಖಕರೂ ಆಗಿರುವ ವಿಶ್ರಾಂತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕರಾದ `ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈರವರು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಸದಾಶಿವ ರೈ ಅವರು ನನ್ನ ಎದುರಿಗೆ ಬೆಳೆದ ಹುಡುಗ, ನನ್ನ ಆತ್ಮೀಯ, ಸಂಬಂಧಿಕನೂ ಆಗಿರುವ ನರೇಂದ್ರ ರೈಯವರು ಸಮಾಜದ ಎಲ್ಲಾ ರಂಗದಲ್ಲೂ, ಅಂದರೆ ಪತ್ರಿಕಾ ಮಾಧ್ಯಮ, ವಿದ್ಯಾ ಮಾಧ್ಯಮ, ಲೇಬರ್ ವರ್ಗದಲ್ಲೂ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಅವರಿಗೆ ಡಾಕ್ಟರೇಟ್ ಬಂದ ಮೇಲೆ ಅವರನ್ನು ಡಾಕ್ಟರ್ ಎಂದೇ ಕರೆಯುತ್ತೇನೆ. ಜೊತೆಗೆ ಅವರು ಯಾವುದೋ ವಿಶ್ವವಿದ್ಯಾನಿಲಯದ ಕುಲಪತಿ ಆಗಬೇಕಿತ್ತು ಎಂದರು. ನನ್ನ ಕುಟುಂಬದ ಸದಸ್ಯರಂತಿರುವ ಪುತ್ತೂರಿನ ಪತ್ರಕರ್ತರು ನರೇಂದ್ರ ರೈ ಅವರನ್ನು ಅವರ ಮನೆಯಲ್ಲಿಯೇ ಸನ್ಮಾನಿಸಿರುವುದು ತುಂಬಾ ಸಂತಸ ತಂದಿದೆ ಎಂದು ದಂಬೆಕ್ಕಾನ ಹೇಳಿದರು.


ದೇರ್ಲರವರು ಸಮಾಜದ ಕುಲಪತಿ-ಹರೀಶ್ ಬಂಟ್ವಾಳ್:  
ದ.ಕ ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷರೂ ಆಗಿರುವ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್ ಮಾತನಾಡಿ, ಸಂಘ ಬೇರೆ ಬೇರೆಯಾದರೂ ಪತ್ರಕರ್ತರು ಅನಿಸಿಕೊಂಡವರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸೇರುತ್ತಾರೆ. ನರೇಂದ್ರ ರೈಯವರು ತರಂಗ ಪತ್ರಿಕೆಯಲ್ಲಿರುವಾಗಲೇ ಅವರ ಲೇಖನವನ್ನು ಓದಿ ಬೆಳೆದವನು ನಾನಾಗಿದ್ದು, ಪತ್ರಿಕಾ ದಿನಾಚರಣೆಯ ಅಂಗವಾಗಿ ನರೇಂದ್ರ ರೈ ದೇರ್ಲರವರನ್ನು ಸನ್ಮಾನಿಸಿರುವುದು ತುಂಬಾ ಖುಷಿಯ ವಿಷಯವಾಗಿದೆ. ನರೇಂದ್ರ ರೈ ದೇರ್ಲರವರು ಈ ಸಮಾಜದ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾರೆ ಎಂದರು. 

 ಅರ್ಹ ವ್ಯಕ್ತಿಯನ್ನೇ ಸನ್ಮಾನಿಸುವ ಯೋಗ-ರಾಮದಾಸ್ ಶೆಟ್ಟಿ:
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕದ ಅಧ್ಯಕ್ಷರಾದ ವಿ.ಟಿ.ವಿ. ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ, ಪತ್ರಿಕಾ ದಿನಾಚರಣೆಯ ಪ್ರಯುಕ್ತ ಡಾ|ನರೇಂದ್ರ ರೈ ದೇರ್ಲರವರನ್ನು ಸನ್ಮಾನಿಸುವ ಕಾರ್ಯಕ್ರಮದ ಕುರಿತು ನಾನು ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದೆ. ಹಲವಾರು ಮಂದಿ ನನ್ನ ಸ್ನೇಹಿತ ಬಳಗದವರು ಅದನ್ನು ನೋಡಿ ನೀವು ಅರ್ಹ ವ್ಯಕ್ತಿಯನ್ನೇ ಸನ್ಮಾನಕ್ಕೆ ಆಯ್ಕೆ ಮಾಡಿದ್ದೀರಿ ಎಂದು ಹೇಳಿದ್ದರು. ಅಂತಹ ಯೋಗ್ಯತಾ ವ್ಯಕ್ತಿಯನ್ನು ಇಂದು ನಾವು ಸನ್ಮಾನಿಸುವ ಯೋಗ ಬಂದಿದೆ ಎಂದು ಹೇಳಿದರು.

ಹಲವರು ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಸನ್ಮಾನಿತ ಡಾ|ನರೇಂದ್ರ ರೈ ದೇರ್ಲರವರ ಪತ್ನಿ ಪವಿತ್ರಾ ಎನ್.ರೈ, ಸಹೋದರ, ಪ್ರಗತಿಪರ ಕೃಷಿಕ ಚೆನ್ನಪ್ಪ ರೈ ದೇರ್ಲ, ಅಮರ್‌ನಾಥ್ ರೈ ದೇರ್ಲ, ಭಾವ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶಿವರಾಮ ರೈ ಇಳಂತಾಜೆ, ರಂಜನ್ ರೈ ದೇರ್ಲ, ಉದ್ಯಮಿ ಗೌತಮ್ ಶೆಟ್ಟಿ ಕೊಲ್ಯ, ದ.ಕ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಉಪಾಧ್ಯಕ್ಷ ಸುದ್ದಿ ಬಿಡುಗಡೆ ವರದಿಗಾರ ಜ್ಯೋತಿಪ್ರಕಾಶ್ ಪುಣಚ, ತಾಲೂಕು ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಸಂತೋಷ್ ಮೊರಾಸ್ ಮೊಟ್ಟೆತ್ತಡ್ಕ, ಕಾರ್ಯದರ್ಶಿ ಸುದ್ದಿ ನ್ಯೂಸ್ ಚಾನೆಲ್ ಪ್ರಧಾನ ನಿರೂಪಕಿ ಹೇಮಾ ಜಯರಾಂ ರೈ, ಕೊಶಾಧಿಕಾರಿ ಕಹಳೆ ನ್ಯೂಸ್‌ನ ಪ್ರಜ್ವಲ್ ಕೋಟ್ಯಾನ್, ಸದಸ್ಯರಾದ ಕಹಳೆ ನ್ಯೂಸ್‌ನ ಮಧುಶ್ರೀ, ಸುಮನಾ, ಯಕ್ಷಿತ್, ವಿ.ಟಿ.ವಿಯ ಪ್ರಭಾಕರ ಅಮೈ, ರಕ್ಷಿತಾ, ರಾಜೇಶ್, ನಮ್ಮ ಕುಡ್ಲದ ಶಶಿಧರ್ ನೆಕ್ಕಿಲಾಡಿ(ನಮ್ಮ ಕುಡ್ಲ), ಅಕ್ಕರೆ ನ್ಯೂಸ್‌ನ ಮುಖ್ಯಸ್ಥ ಜಯಪ್ರಕಾಶ್ ಬದಿನಾರು, ಜನತೆ ಡಾಟ್ ಕಾಮ್‌ನ ಜಗದೀಶ್ ಕಜೆ, ಸುಳ್ಯ ಸುದ್ದಿ ನ್ಯೂಸ್‌ನ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು. 

ತಾಲೂಕು ಜರ್ನಲಿಸ್ಟ್ ಯೂನಿಯನ್ ಸ್ಥಾಪಕಾಧ್ಯಕ್ಷ ಪುತ್ತೂರು ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಕಹಳೆ ನ್ಯೂಸ್‌ನ ಕವಿತಾ ಮಾಣಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ನಿಖರ ನ್ಯೂಸ್‌ನ ಚಿನ್ಮಯಕೃಷ್ಣ ವಂದಿಸಿದರು. ಕಾರ್ಯಕಾರಿಣಿ ಸದಸ್ಯರಾದ ವಿ.ಟಿ.ಯ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

ವಿಶ್ವವಿದ್ಯಾನಿಲಯದ ಪತ್ರಕರ್ತರಿಂದ ಮಾನವೀಯತೆ-ಮನುಷ್ಯತ್ವ..
ಪುತ್ತೂರಿನ ಬಹುತೇಕ ಪತ್ರಕರ್ತರು ವಿಶ್ವವಿದ್ಯಾನಿಲಯದಿಂದ ಜರ್ನಲಿಸಂ ಓದಿದವರಲ್ಲ. ಲೋಕ ವಿಶ್ವವಿದ್ಯಾನಿಲಯದಲ್ಲಿ ಬೆಳೆದು ಪುತ್ತೂರನ್ನು ಬೆಳಗಿಸಿದವರು. ನಾನೂ ಕೂಡ ಜರ್ನಲಿಸಂ ಮಾಡಿದವನಲ್ಲ. ಅಂದು ನವಭಾರತ ಪತ್ರಿಕೆಯನ್ನು ಓದುತ್ತಾ ಈ ಅಜ್ಜನ ಜಗಲಿಯಲ್ಲಿ ಬೆಳೆದವನು ನಾನು. ಕಾಲು ಒದ್ದೆಯಾಗದೆ ಕಡಲನ್ನು ದಾಟಬಹುದು. ಆದರೆ ಕಣ್ಣು ಒದ್ದೆಯಾಗದೆ ಬದುಕನ್ನು ದಾಟಲು ಸಾಧ್ಯವಿಲ್ಲ ಎಂದು ಲೋಕ ವಿಶ್ವವಿದ್ಯಾನಿಲಯದಲ್ಲಿ ಬೆಳೆದ ಚಿತ್ರದುರ್ಗದ ಸಿರಿಯಜ್ಜಿರವರು ಹೇಳಿದ್ದರು. ಇವರಿಗೆ ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ ಬಂದಿದೆ. ಜರ್ನಲಿಸಂ ಕಲಿತು ಬಂದ ಪತ್ರಕರ್ತರಿಗೆ ತಾನು ಕಲಿತು ಬಂದಿದ್ದೇನೆ ಎಂಬುದು ಇರುತ್ತದೆ. ಆದರೆ ಲೋಕ ವಿಶ್ವವಿದ್ಯಾನಿಲಯದಿಂದ ಬಂದಂತಹ ಪತ್ರಕರ್ತರಿಗೆ ಸಾಂಸ್ಕೃತಿಕ ಜೀವನದಲ್ಲಿ ಮಾನವೀಯತೆ, ಮನುಷ್ಯತ್ವವಿರುತ್ತದೆ.
-ಡಾ|ನರೇಂದ್ರ ರೈ ದೇರ್ಲ,ಸನ್ಮಾನಿತ ಹಿರಿಯ ಪತ್ರಕರ್ತರು 

-ಡಾ|ನರೇಂದ್ರ ರೈ ದೇರ್ಲ,ಸನ್ಮಾನಿತ ಹಿರಿಯ ಪತ್ರಕರ್ತರು 

 ಲ್ಯಾಪ್‌ಟಾಪ್ ಬ್ಯಾಗ್ ವಿತರಣೆ..
ಪ್ರತಿಷ್ಠಿತ ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಯ ವತಿಯಿಂದ ತಾಲೂಕು ಜರ್ನಲಿಸ್ಟ್ ಯೂನಿಯನ್‌ನ ಸದಸ್ಯರಿಗೆ ಲ್ಯಾಪ್‌ಟಾಪ್ ಬ್ಯಾಗ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here