ಪುತ್ತೂರು: 7 ವರ್ಷದ ಹಿಂದಿನ ಪೋಕ್ಸೋ ಪ್ರಕರಣದ ಆರೋಪಿಗೆ ಜೈಲು ಶಿಕ್ಷೆ

0

ಶಿಕ್ಷೆ ವಿಧಿಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಾಲಯ

ಪುತ್ತೂರು: 7 ವರ್ಷಗಳ ಹಿಂದೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೈಂದನಡ್ಕದ ಬಾಡಿಗೆ ಮನೆಯಲ್ಲಿದ್ದ ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ದಿಂಡೂರ ಸರಕಾರಿ ಪ್ರಾಥಮಿಕ ಶಾಲೆಯ ಬಳಿಯ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂಬವರಿಗೆ ಜೈಲು ಶಿಕ್ಷೆ ವಿಧಿಸಿ ದ.ಕ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.


ಘಟನೆ ವಿವರ:
ಮೂಲತಃ ಗದಗ ಜಿಲ್ಲೆಯ ಆರೋಪಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಅವರು ಮೈಂದನಡ್ಕದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ್ತವ್ಯವಿದ್ದು, 2017ನೇ ಇಸವಿಯ ಆಗಸ್ಟ್ ತಿಂಗಳ ಒಂದು ದಿನ ಅಪ್ರಾಪ್ತ ಬಾಲಕಿ ಮೊಬೈಲ್ ಚಾರ್ಜ್ ಮಾಡಲು ಮೈಂದನಡ್ಕ ಹೊಟೇಲ್‌ಗೆ ಹೋದಾಗ ಅಲ್ಲಿ ವಿದ್ಯುತ್ ಇಲ್ಲ ಎಂದು ಹಿಂದುರಿಗಿದ ವೇಳೆ ಆರೋಪಿಯು ಅಪ್ರಾಪ್ತೆಯನ್ನು ತಾನು ವಾಸ್ತವ್ಯವಿದ್ದ ಬಾಡಿಗೆ ಮನೆಯಲ್ಲಿ ವಿದ್ಯುತ್ ಸಂಪರ್ಕವಿದೆ ಎಂದು ನಂಬಿಸಿ ಮೊಬೈಲ್ ಚಾರ್ಜ್ ಮಾಡಲು ಬಾ ಎಂದು ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅಸಭ್ಯವಾಗಿ ವರ್ತಿಸಿ ಅತ್ಯಚಾರ ಎಸಗಿದ್ದರು. ಬಳಿಕದ ದಿನದಲ್ಲೂ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದರು. ಬಾಲಕಿಯ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳನ್ನು ವಿಚಾರಿಸಿದೆ. ಬಾಲಕಿ ಮತ್ತು ಅವಳ ತಾಯಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ಸವಿವರವಾದ ಹೇಳಿಕೆ ನೀಡಿರುತ್ತಾರೆ. ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯೆ ಡಾ. ಸುಂದರಿಯವರು ಬಾಲಕಿ ಗರ್ಭಿಣಿಯಾಗಿದ್ದ ಬಗ್ಗೆ ವಿವರವಾದ ಹೇಳಿಕೆ ನೀಡಿರುತ್ತಾರೆ. ಆರೋಪಿಯೇ ಬಾಲಕಿ ಗರ್ಭಿಣಿಯಾಗಲು ಕಾರಣ ಎಂಬುದಾಗಿ ಡಿ.ಎನ್.ಎ. ತಜ್ಞೆ ಶಹನಾಜ್ ಫಾತಿಮ ತಾನು ನೀಡಿದ ವರದಿಯನ್ನು ಉಲ್ಲೇಖಿಸಿ ಸವಿವರವಾದ ಹೇಳಿಕೆಯನ್ನು ಮಾನ್ಯ ನ್ಯಾಯಾಲಯದಲ್ಲಿ ನೀಡಿರುತ್ತಾರೆ.

ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಬಿ.ಯನ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಗ್ಗೆ ವಿವರವಾದ ಸಾಕ್ಷ್ಯ ನೀಡಿರುತ್ತಾರೆ. ನ್ಯಾಯಾಧೀಶೆ ಸರಿತಾ ಡಿ. ಯವರು ಇತ್ತಂಡಗಳ ವಾದ ಆಲಿಸಿ ಆರೋಪಿಗೆ ಭಾ.ದಂ.ಸಂ. ಕಲಂ 376 ರಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 20ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ ಮತ್ತು ಭಾ.ದಂ.ಸಂ. ಕಲಂ 506 ರಡಿ ಅಪರಾಧಕ್ಕೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು ರೂ. 5ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕ್ಸೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 10ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿರುತ್ತಾರೆ. ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ ಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಗೆ ರೂ. 6ಲಕ್ಷ ಪರಿಹಾರ ರೂಪವಾಗಿ ನೀಡಬೇಕೆಂದು ಆದೇಶಿಸಿದೆ. ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.

LEAVE A REPLY

Please enter your comment!
Please enter your name here