ಪುತ್ತೂರು:ಅಕ್ರಮ ದನ ಸಾಗಾಟ ಸಂಶಯದ ಮೇರೆಗೆ ವಿಚಾರಿಸುತ್ತಿದ್ದ ಸಂದರ್ಭ ತಂಡವೊಂದು ಪಿಕಪ್ ಚಾಲಕನಿಗೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
26.01.2020ರಂದು ಕೊಕ್ಕಡ ಗ್ರಾಮದ ರೂಪೇಶ್ ಕುಮಾರ್ ಎಂಬವರು ತನ್ನ ಸ್ನೇಹಿತ ನಾಣ್ಯಪ್ಪ ಎಂಬವರ ಜೊತೆ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ತನ್ನ ಪಿಕಪ್ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾಂಚನ ಕ್ರಾಸ್ ಬಳಿ ತಲುಪಿದಾಗ ಎದುರಿಂದ ಒಂದು ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ತನ್ನ ಮುಂದೆ ಹೋಗುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ವಿಚಾರಿಸುತ್ತಿದ್ದ ಸಂದರ್ಭದಲ್ಲಿ ಅಶ್ರಫ್ ಕೋಲ್ಪೆ,ನವಾಜ್ ಕೋಲ್ಪೆ,ಜಾಬೀರ್ ಕೋಲ್ಪೆ, ಜಾಫರ್ ಕೋಲ್ಪೆ ಮತ್ತು ಅನ್ಸಾರ್ ಕೊಣಾಲು ಎಂಬವರು ರೂಪೇಶ್ ಅವರಿಗೆ ಕೈಯಿಂದ ಮತ್ತು ಕಲ್ಲಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಪುತ್ತೂರಿನ ಜಿಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು.ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆರೋಪಿಗಳೆಲ್ಲರನ್ನೂ ನಿರ್ದೋಷಿಗಳು ಎಂದು ಪರಿಗಣಿಸಿ ಖುಲಾಸೆ ಮಾಡಿ ಜು.೩೦ರಂದು ತೀರ್ಪು ನೀಡಿದೆ.ಆರೋಪಿಗಳ ಪರವಾಗಿ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ ಮತ್ತು ನಿತೇಶ್ ವಾದಿಸಿದ್ದರು.