9-11 ಸರಳೀಕರಣಕ್ಕೆ ಸದಸ್ಯರ ಆಗ್ರಹ
ಪೆರಾಬೆ: 9-11ಗೆ ಜನ ಅಲೆದಾಡುವಂತಾಗಿದ್ದು, ಈ ಹಿಂದಿನಂತೆ ಸುಲಭವಾಗಿ ಸಿಗಬೇಕೆಂದು ಸದಸ್ಯರು ಆಗ್ರಹಿಸಿದ ಘಟನೆ ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ನಮೂನೆ 9 ಮತ್ತು 11 ಎ ಗಳನ್ನು ಮಾಡಲು ಪುಡಾದಿಂದ ವಿನ್ಯಾಸ ನಕ್ಷೆ ಪಡೆದುಕೊಳ್ಳಬೇಕು. ಈ ಬಗ್ಗೆ ಜಮೀನಿಗೆ ಸಂಬಂಧಪಟ್ಟಂತೆ ಅನೇಕ ದಾಖಲೆಗಳನ್ನು ಒದಗಿಸಬೇಕಾಗಿದ್ದು ಇದರಿಂದ ಸಾಮಾನ್ಯ ಜನರಿಗೆ ನಮೂನೆ 9 ಮತ್ತು 11 ಎ ಪಡೆದುಕೊಳ್ಳುವುದು ಕಷ್ಟವಾಗಿದೆ. ಅಲ್ಲದೇ ಪುಡಾದಿಂದ ಕಡಬದಲ್ಲಿ ನಿಯೋಜನೆ ಮೇರೆಗೆ ಓರ್ವ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಜನರಿಗೆ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಲು ಕಷ್ಟವಾಗಿದೆ. ಇದರಿಂದ ಸಾಮಾನ್ಯ ಜನರು ನಿತ್ಯ ಅಲೆದಾಡುವಂತಾಗಿದೆ. ಆದ್ದರಿಂದ ಈ ಕಾನೂನು ಸರಳೀಕರಣಗೊಳಿಸಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಾಕ್ಷ ವೇದಾವತಿ, ಸದಸ್ಯರಾದ ಬಿ.ಕೆ.ಕುಮಾರ, ಫಯಾಝ್ ಸಿ.ಎಂ., ಮಮತ, ಕಾವೇರಿ, ಲೀಲಾವತಿ, ಮೇನ್ಸಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ., ಸ್ವಾಗತಿಸಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.