ನೆಲ್ಯಾಡಿ ಜೆಸಿಐಗೆ ಜೆಸಿಐ ಭಾರತ ರಾಷ್ಟ್ರಾಧ್ಯಕ್ಷ ಅಂಕುರ್ ಜುಂಜೂನ್‌ವಾಲಾ ಅಧಿಕೃತ ಭೇಟಿ

0

ವಾಹನ ಜಾಥಾ | ಗಾಂಧಿ ಮೈದಾನದಲ್ಲಿ ಸಿಮೆಂಟ್ ಬೆಂಚುಗಳ ಲೋಕಾರ್ಪಣೆ

ನೆಲ್ಯಾಡಿ: ಜೆಸಿಐಯ ಭಾರತ ರಾಷ್ಟ್ರಾಧ್ಯಕ್ಷ ಮೇಘಾಲಯ ಮೂಲದ ಅಂಕುರ್ ಜುಂಜೂನ್‌ವಾಲಾ ಆ.5ರಂದು ಸಂಜೆ ನೆಲ್ಯಾಡಿ ಜೆಸಿಐಗೆ ಅಧಿಕೃತ ಭೇಟಿ ನೀಡಿದರು. ಅಧ್ಯಕ್ಷರನ್ನು ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ವಾಹನ ಜಾಥಾ ಮೂಲಕ ನೆಲ್ಯಾಡಿ ಗಾಂಧಿ ಮೈದಾನಕ್ಕೆ ಬರಮಾಡಿಕೊಂಡು ನೆಲ್ಯಾಡಿ ಜೆಸಿಐನ ಶಾಶ್ವತ ಕೊಡುಗೆಯಾದ ಸಿಮೆಂಟ್ ಬೆಂಚುಗಳ ಲೋಕಾರ್ಪಣೆ ಮಾಡಲಾಯಿತು.

ಮಧ್ಯಾಹ್ನ ನೆಲ್ಯಾಡಿಗೆ ಆಗಮಿಸಿದ ಅಂಕುರ್ ಜುಂಜೂನ್‌ವಾಲಾ ಅವರಿಗೆ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿ ಸ್ವಾಗತ ಕೋರಲಾಯಿತು.

ಅಲ್ಲಿಂದ ವಾಹನ ಜಾಥಾ ಮೂಲಕ ನೆಲ್ಯಾಡಿ ಪೇಟೆಗೆ ತೆರಳಿ ಹಿಂತಿರುಗಿ ನೆಲ್ಯಾಡಿ ಗಾಂಧಿ ಮೈದಾನಕ್ಕೆ ಬರಲಾಯಿತು. ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನೆಲ್ಯಾಡಿ ಜೆಸಿಐನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ನೆಲ್ಯಾಡಿ ಜೆಸಿಐ ಮೂಲಕ ನೀಡಿದ 10 ಸಿಮೆಂಟ್ ಬೆಂಚುಗಳನ್ನು ಜೆಸಿಐಯ ಭಾರತದ ಅಧ್ಯಕ್ಷರಾದ ಅಂಕುರ್ ಜುಂಜೂನ್‌ವಾಲಾ ಅವರು ಲೋಕಾರ್ಪಣೆ ಮಾಡಿದರು.


ಬಳಿಕ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆಸಿಐಯ ಭಾರತದ ಅಧ್ಯಕ್ಷರಾದ ಅಂಕುರ್ ಜುಂಜೂನ್‌ವಾಲಾ ಅವರು, ಜೆಸಿಐ ಯುವ ಜನತೆಗೆ ತರಬೇತಿ ನೀಡುವ ಮೂಲಕ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ನೀಡುವ ಉದ್ದೇಶದೊಂದಿಗೆ ಕಾರ್ಯೋನ್ಮುಖವಾಗಿದೆ. ಯುವ ಜನತೆ ದೇಶದ ಸಂಪತ್ತು. ಅಂತಹ ಸಂಪತ್ತು ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗಬೇಕಾದರೆ ಯುವ ಶಕ್ತಿಯನ್ನು ಪ್ರೇರೇಪಿಸುವ ಕೌಶಲ್ಯ ಭರಿತವಾದ ತರಬೇತಿಗಳ ಅವಶ್ಯಕತೆ ಇದೆ. ಜೆಸಿಐ ಈ ರೀತಿಯ ತರಬೇತಿ ನೀಡುವ ಮೂಲಕ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ ಎಂದರು. ನೆಲ್ಯಾಡಿ ಜೆಸಿಐನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ತನ್ನ ವೃತ್ತಿ ಜೀವನದ 25ನೇ ವರ್ಷದ ಸಂದರ್ಭದಲ್ಲೇ ನೆಲ್ಯಾಡಿ ಗಾಂಧಿ ಮೈದಾನಕ್ಕೆ ಶಾಶ್ವತ ಕೊಡುಗೆಯಾಗಿ ಸಿಮೆಂಟ್ ಬೆಂಚುಗಳನ್ನು ನೀಡಿರುವುದು ಹೆಮ್ಮೆಯ ವಿಚಾರ. ಅವರಿಂದ ಇನ್ನಷ್ಟೂ ಸೇವೆ ಸಿಗಲಿ. ನಾನು ಸೇರಿ ನೆಲ್ಯಾಡಿ ಜೆಸಿಐಗೆ ಈ ತನಕ ಮೂವರು ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡಿರುವುದು ಸಂತಸ ತಂದಿದೆ ಎಂದು ಅಂಕುರ್ ಜುಂಜೂನ್‌ವಾಲಾ ಹೇಳಿದರು.

ಅತಿಥಿಯಾಗಿದ್ದ ಜೆಸಿಐ ವಲಯಾಧ್ಯಕ್ಷ ಅಭಿಲಾಷ್ ಬಿ.ಎ.ಮಾತನಾಡಿ, ನೆಲ್ಯಾಡಿ ಜೆಸಿಐ ಪ್ರತಿವರ್ಷವೂ ವಿಶಿಷ್ಟ ಹಾಗೂ ಯಶಸ್ವಿ ಕಾರ್ಯಕ್ರಮ ಆಯೋಜನೆಯ ಮೂಲಕ ವಲಯದಲ್ಲಿ ಗಮನ ಸೆಳೆಯುತ್ತಿದೆ. ಈ ವರ್ಷದ ಅಧ್ಯಕ್ಷರಾಗಿರುವ ಡಾ.ಸುಧಾಕರ ಶೆಟ್ಟಿಯವರು ತನ್ನ ವೈದ್ಯಕೀಯ ವೃತ್ತಿ ಆರಂಭಿಸಿ 25ವರ್ಷ ಪೂರ್ಣಗೊಂಡ ಸವಿನೆನಪಿನಲ್ಲಿ ನೆಲ್ಯಾಡಿ ಜೆಸಿಐ ಮೂಲಕ ಗಾಂಧಿ ಮೈದಾನಕ್ಕೆ ಸಿಮೆಂಟ್ ಬೆಂಚು ಕೊಡುಗೆಯಾಗಿ ನೀಡುವ ಮೂಲಕ ಜೆಸಿಐಯ ಹೆಸರನ್ನು ಇನ್ನಷ್ಟೂ ಎತ್ತರಕ್ಕೆ ಏರಿಸಿದ್ದಾರೆ. ಅವರ ಬದ್ಧತೆಗೆ ಧನ್ಯವಾದಗಳು ಎಂದರು.

ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೆಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಸ್ವಾಗತಿಸಿ ಮಾತನಾಡಿ, ನೆಲ್ಯಾಡಿ ಜೆಸಿಐನ ಈ ಹಿಂದಿನ ಪೂರ್ವಾಧ್ಯಕ್ಷರು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಗಾಂಧಿಪ್ರತಿಮೆ ಸ್ಥಾಪನೆ ಸಹಿತ ನೆಲ್ಯಾಡಿಗೆ ವಿವಿಧ ಶಾಶ್ವತ ಕೊಡುಗೆ ನೀಡಿದ್ದಾರೆ. ಈ ವರ್ಷದ ಅಧ್ಯಕ್ಷನ ನೆಲೆಯಲ್ಲಿ ಹಾಗೂ ನನ್ನ ವೈದ್ಯಕೀಯ ವೃತ್ತಿ ಜೀವನಕ್ಕೆ 25 ವರ್ಷ ಪೂರ್ಣಗೊಂಡ ಸವಿನೆನಪಿನಲ್ಲಿ ಶಾಶ್ವತ ಕೊಡುಗೆಯ ಭಾಗವಾಗಿ ಗಾಂಧಿ ಮೈದಾನಕ್ಕೆ 9 ಬೆಂಚುಗಳನ್ನು ನೀಡಿದ್ದೇನೆ. ಇದಕ್ಕೆ ಯಾರಿಂದಲೂ ದೇಣಿಗೆ ಸ್ವೀಕರಿಸಿಲ್ಲ. ಈ ಬೆಂಚುಗಳನ್ನು ಪುತ್ತೂರಿನ ಮಾಸ್ಟರ್ ಪ್ಲಾನರಿಯವರು ಅಲ್ಪ ಅವಧಿಯಲ್ಲೇ ತಯಾರಿಸಿಕೊಟ್ಟಿದ್ದಾರೆ. ಗಾಂಧಿ ಮೈದಾನದಲ್ಲಿ ಒಟ್ಟು 10 ಸಿಮೆಂಟ್ ಬೆಂಚು ನಿರ್ಮಿಸಿದ್ದು ಇದರಲ್ಲಿ 1 ಸಿಮೆಂಟ್ ಬೆಂಚು ಮಾಸ್ಟರ್ ಪ್ಲಾನರಿಯವರು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಜೆಸಿಐ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ರಾಜ್ಯಾಧ್ಯಕ್ಷರ ಟೂರ್ ನಿರ್ದೇಶಕ ಕಾಶಿನಾಥ ಗೋಗಟೆ, ನೆಲ್ಯಾಡಿ ಮಹಿಳಾ ಜೆಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ್, ನೆಲ್ಯಾಡಿ ಜೆಸಿಐ ಕಾರ್ಯದರ್ಶಿ ನವ್ಯ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾದ ನಾರಾಯಣ ಎನ್.ಬಲ್ಯ, ಡಾ.ಮುರಳೀಧರ, ಪ್ರಕಾಶ್ ಕೆ.ವೈ., ಪ್ರಶಾಂತ್ ಸಿ.ಹೆಚ್. ಅವರು ಅತಿಥಿಗಳಿಗೆ ಶಾಲು ಹಾಕಿ, ಹೂ ನೀಡಿ ಗೌರವಿಸಿದರು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಪುರಂದರ ಗೌಡ ಡೆಂಜ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಇನ್ನೋರ್ವ ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿ ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ನವ್ಯ ಪ್ರಸಾದ್ ವಂದಿಸಿದರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ಜೆಸಿಐನ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.


ರೂ. 1.20 ಲಕ್ಷದ 10 ಸಿಮೆಂಟ್ ಬೆಂಚು ಕೊಡುಗೆ;
ನೆಲ್ಯಾಡಿ ಗಾಂಧಿ ಮೈದಾನಕ್ಕೆ ಸುಮಾರು 1.20 ಲಕ್ಷ ರೂ.ವೆಚ್ಚದಲ್ಲಿ 10 ಸಿಮೆಂಟ್ ಬೆಂಚುಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಇದನ್ನು ಜೆಸಿಐ ಭಾರತದ ಅಧ್ಯಕ್ಷರ ಮೂಲಕ ಲೋಕಾರ್ಪಣೆಗೊಳಿಸಿ ಇದಕ್ಕೆ ಸಂಬಂಧಿಸಿದ ಪತ್ರವನ್ನು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷರಾದ ಯಾಕೂಬ್ ಯಾನೆ ಸಲಾಂ ಬಿಲಾಲ್ ಅವರಿಗೆ ಹಸ್ತಾಂತರಿಸಲಾಯಿತು.

ಸನ್ಮಾನ:
ಜೆಸಿಐಯ ಭಾರತದ ಅಧ್ಯಕ್ಷರಾದ ಅಂಕುರ್ ಜುಂಜೂನ್‌ವಾಲಾ, ವಲಯ 15ರ ಅಧ್ಯಕ್ಷರಾದ ಅಭಿಲಾಷ್ ಬಿ.ಎ.ಅವರನ್ನು ನೆಲ್ಯಾಡಿ ಜೆಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾದ ಅಬ್ರಹಾಂ ವರ್ಗೀಸ್ ಅವರು ಜೆಸಿಐಯ ಭಾರತದ ಅಧ್ಯಕ್ಷರಾದ ಅಂಕುರ್ ಜುಂಜೂನ್‌ವಾಲಾ ಅವರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here