ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿಯಿರಲಿ: ನ್ಯಾ. ಶಿವಣ್ಣ ಎಚ್. ಆರ್.
ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಕಾನೂನು ಪದವಿಗೆ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಬಿ.ಎ.ಎಲ್.ಎಲ್.ಬಿ. ವಿದ್ಯಾರ್ಥಿಗಳಿಗೆ ‘ಜ್ಯೋತಿರ್ಗಮಯ’- ಎರಡು ದಿನಗಳ ಅಭಿವಿನ್ಯಾಸ(ಓರಿಯಂಟೇಶನ್) ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಪುತ್ತೂರು ನ್ಯಾಯಾಲಯದ ಗೌ। ಪ್ರಧಾನ ವ್ಯವಹಾರಿಕ ನ್ಯಾಯಾಧೀಶರಾದ ಶಿವಣ್ಣ ಹೆಚ್. ಆರ್. ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯೂ ಸಹ ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸುತ್ತಾನೆ. ಒಬ್ಬ ವಿದ್ಯಾರ್ಥಿ ತನ್ನ ಯಶಸ್ಸಿಗಾಗಿ ಕಷ್ಟಪಟ್ಟು ಹಗಲಿರುಳು ಶ್ರಮ ವಹಿಸಬೇಕಾಗುತ್ತದೆ. ಕಾನೂನು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ಸ್ಪಷ್ಟವಾದ ಗುರಿಯಿಟ್ಟುಕೊಂಡು ಅದಕ್ಕಾಗಿ ಐದು ವರ್ಷಗಳ ಕಾಲ ಪರಿಶ್ರಮದ ಮೂಲಕ ಪ್ರಯತ್ನಿಸಿದರೆ ಖಂಡಿತ ಗೆಲುವು ನಿಮ್ಮದಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿ ಮೊಬೈಲ್, ಟಿ.ವಿ. ಸಾಮಾಜಿಕ ಜಾಲತಾಣದಂತಹ ವಿಷಯಗಳ ದಾಸನಾಗದೇ, ತಮ್ಮ ಗುರಿ ತಲುಪಲು ಅದನ್ನು ಮೆಟ್ಟಿಲುಗಳನ್ನಾಗಿ ಮಾಡಿದಾಗ ಖಂಡಿತ ಗುರಿ ತಲುಪಲಿದ್ದೀರಿ ಎಂದರು.

ಜೊತೆಗೆ ನ್ಯಾಯಮೂರ್ತಿಗಳು ತಮ್ಮ ಜೀವನದ ಸಾಧನೆಯ ಪಥವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅವರು, ತಮ್ಮ ಸರಳ ಮಾತಿನ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿಸಿದರು. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ, ಸ್ವಾರ್ಥರಹಿತ ಹಾಗೂ ಅತ್ಯಂತ ಉತ್ತಮ ಕಾನೂನು ತಜ್ಞರನ್ನು ರೂಪಿಸುವಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಈಗಾಗಲೇ ಗುರುತಿಸಿಕೊಂಡಿದೆ. ಅಂತಹ ವಿದ್ಯಾಸಂಸ್ಥೆಯನ್ನು ಆಯ್ದುಕೊಂಡಿರುವ ನೀವು, ಇಲ್ಲಿರುವ ಎಲ್ಲಾ ಉತ್ತಮ ಅಂಶಗಳನ್ನು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ವೃತ್ತಿಪರರಾಗಲು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಬದ್ಧತೆ, ಸಮರ್ಪಣೆ ಮತ್ತು ಪರಿಶ್ರಮವನ್ನು ಮೈಗೂಡಿಸಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಮಹಾವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಎಂ. ಶಿವಪ್ರಸಾದ್ ಶೆಟ್ಟಿ ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ. ಎಂ. ಮಾತನಾಡಿ, ಭಾರತೀಯ ಮೌಲ್ಯವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ನಮ್ಮ ಮಹಾವಿದ್ಯಾಲಯದಲ್ಲಿ ಮಕ್ಕಳಿಗೆ ಕಾನೂನು ವಿಷಯದ ಪಠ್ಯಕ್ರಮದೊಂದಿಗೆ ಆದರ್ಶ ಜೀವನದ ಮೌಲ್ಯಗಳನ್ನೂ ಹೇಳಿಕೊಡಲಾಗುತ್ತಿದೆ. ಅದಕ್ಕಾಗಿ ವಿವಿಧ ಸಹಪಠ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕಾನೂನು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ನಮ್ಮ ಮಹಾವಿದ್ಯಾಲಯವು ನೀಡುತ್ತಿದೆ. ನೀವು ಮುಂದಿನ ಐದು ವರ್ಷಗಳ ಕಾಲ ಇಲ್ಲಿಗೆ ನಿಮ್ಮನ್ನು ಸಮರ್ಪಸಿಕೊಂಡು ವಿದ್ಯಾಭ್ಯಾಸ ಮಾಡಿದರೆ ಖಂಡಿತ ಅದ್ಭುತ ಭವಿಷ್ಯ ನಿಮ್ಮದಾಗಲಿದೆ. ಅಂತಹ ಬದ್ಧತೆ ನಿಮ್ಮಲಿರಲಿ ಎಂದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸಂಧ್ಯಾ ಪಿ. ಎಂ. ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾರಾದ ಅಕ್ಷತಾ ಎ. ಪಿ. ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಭಿವಿನ್ಯಾಸ ಕಾರ್ಯಕ್ರಮದ ಸಂಯೋಜಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ಎ. ವಂದಿಸಿದರು. ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್.ಎಂ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ‘ಕಾನೂನು ಕ್ಷೇತ್ರದಲ್ಲಿರುವ ಅವಕಾಶಗಳು’ ಎಂಬ ವಿಚಾರದ ಕುರಿತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ ವಿಶೇಷ ಉಪನ್ಯಾಸ ನೀಡಿದರು.
