ನೆನಪುಗಳಿಗೊಂದು ಕಲರ್‌ಫುಲ್ ಪೈಟಿಂಗ್…

0

ಸುಫ್ರಮ್‌ಸೋ….ಅಪರೂಪದ ಹಾರರ್ ಸಿನಿಮಾ


@ ಸಿಶೇ ಕಜೆಮಾರ್


ಹೊಡಿ,ಬಡಿ,ಕಡಿ, ಲವ್, ಗಿವ್,ರೊಮ್ಯಾನ್ಸ್,ದೈವ,ದೇವರು ಇತ್ಯಾದಿಗಳನ್ನು ಬಿಟ್ಟು ಅದರಾಚೆಗೊಂದು ಸಿನಿಮಾ ಮಾಡಬಹುದು ಆ ಮೂಲಕ ಕುಟುಂಬ ಸಮೇತರಾಗಿ ಕುಳಿತು ನೋಡುವ ಮಂದಿಗೆ ಒಂದು ಕಲರ್‌ಫುಲ್ ಮನರಂಜನೆ ನೀಡಬಹುದು ಎಂಬುದಕ್ಕೆ ಸುಫ್ರಮ್‌ಸೋ ಒಂದು ದಿ ಬೆಸ್ಟ್ ಸಿನಿಮಾ ಆಗಿದೆ. ಸಿನಿಮಾ ಎಲ್ಲೂ ಕಲ್ಪನೆಯನ್ನು ಕಟ್ಟಿಕೊಡುವುದಿಲ್ಲ ಬದಲಾಗಿ ಸಿನಿಮಾದಲ್ಲಿ ಬರುವ ಪ್ರತಿಯೊಂದು ದೃಶ್ಯಗಳು ಕೂಡ ನಮ್ಮ ಜೀವನದ ಕಲರ್‌ಫುಲ್ ನೆನಪುಗಳೇ ಆಗಿರುವುದು ವಿಶೇಷವಾಗಿದೆ. ಇಂತಹ ನೆನಪುಗಳಿಗೆ ಕಲರ್‌ಫುಲ್ ಪೈಟಿಂಗ್ ಕೊಟ್ಟು ಚಂದನೆ ಫ್ರೇಮ್ ಹಾಕಿ ನಮ್ಮ ಮುಂದೆ ಇಟ್ಟಿದ್ದಾರೆ ನಿರ್ದೇಶಕ ಜೆ.ಪಿ ತೂಮಿನಾಡುರವರು. ಲಾಂಗ್ ಮಚ್ಚುಗಳ ಸದ್ದಿಲ್ಲ, ಪ್ರೀತಿ ಪ್ರೇಮ ಅನ್ನುತ್ತಾ ರೋಮ್ಯಾನ್ಸ್ ಮಾಡುವ ದೃಶ್ಯಗಳೇ ಇಲ್ಲ, ಅಶ್ಲೀಲ ಅನ್ನಿಸುವ ಪಾತ್ರಗಳೇ ಇಲ್ಲ, ಅಬ್ಬಿರಿದು ಬೊಬ್ಬಿರಿಸುವ ಖಳನಾಯಕರು ಇಲ್ಲ, ಬಣ್ಣಬಣ್ಣದ ಡ್ರೆಸ್‌ಗಳಿಂದ ಮಿಂಚುವ ನಾಯಕನೂ, ನಾಯಕಿಯೂ ಇಲ್ಲ ಇವೆಲ್ಲವೂ ಇಲ್ಲದಿದ್ದರೂ ಸಿನಿಮಾದಲ್ಲಿ ನಮ್ಮ ನಿಮ್ಮ ಬದುಕಿನ ನೆನಪುಗಳಿವೆ. ಇಡೀ ಕುಟುಂಬವೊಂದು ಆನಂದಿಸಲು ಆರೋಗ್ಯಕರವಾದ ಸಿನಿಮಾ ಇದಾಗಿದೆ.


ಸುಫ್ರಮ್‌ಸೋ….ಸುಲೋಚನಾ ಫ್ರಮ್ ಸೋಮೇಶ್ವರ ಸಿನಿಮಾ ಆರಂಭವಾಗುವುದೆ ಸಾವಿನ ದೃಶ್ಯದೊಂದಿಗೆ ಸಾವಿನ ಮನೆಯ ಊಟ, ಪ್ರೇತಗಳಿಗೆ ಬಡಿಸುವುದು ಹೀಗೆ ಮುಂದುವರಿಯುತ್ತದೆ. ಆ ನಂತರದ್ದು ಮದುವೆ ಸಮಾರಂಭ. ಮದುವೆ ಎಂದ ಮೇಲೆ ಅಲ್ಲಿ ಎಣ್ಣೆ ಪಾರ್ಟಿ, ಡಿಜೆ ಕುಣಿತ ಇದ್ದೆ ಇರುತ್ತದೆ. ಇವೆಲ್ಲವನ್ನು ನಿರ್ದೇಶಕ ಕಟ್ಟಿಕೊಟ್ಟ ರೀತಿ ಮಾತ್ರ ಸೂಪರ್. ಕೆಲವೊಮ್ಮೆ ಎಣ್ಣೆ ಪಾರ್ಟಿ ಜಾಸ್ತಿ ಆಯ್ತಾ ಅಂತ ಅನ್ನಿಸುತ್ತೆ ಆದರೆ ಆ ಸನ್ನಿವೇಶಕ್ಕೆ ಅದು ಅಗತ್ಯ ಅನ್ನಿಸುತ್ತದೆ. ‘ ಬಂದರು ಬಂದರು ಬಾವ ಬಂದರು…’ ಅಂತ ಮದುವೆ ಮನೆಗೆ ಬರುವ ಬಾವ(ಪುಷ್ಪರಾಜ್ ಬೋಳಾರ್) ಕುಡಿದು ಎಂಜಲೆಳೆಯ ಮೇಲೆ ಬೀಳುವುದು ಎಲ್ಲವೂ ಎಲ್ಲೋ ಒಂದು ಕಡೆ ನಾವು ನೀವು ನೋಡಿದ್ದೆ ಅನ್ನಿಸುತ್ತದೆ. ಇದರಿಂದಲೇ ಸಿನಿಮಾ ನಮಗೆ ಮತ್ತಷ್ಟು ಆಪ್ತವಾಗುತ್ತದೆ. ಸಿನಿಮಾದಲ್ಲಿ ಬಹುತೇಕ ಕಲಾವಿದರು ಬಣ್ಣ ಹಚ್ಚದೆ ನಟಿಸಿದ್ದಾರೆ. ಕಣ್ಣು ಕುಕ್ಕಿಸುವ ಕಾಸ್ಟ್ಯೂಮ್ ಇಲ್ಲದೆ ನಾವು ನೀವು ನಿಜ ಜೀವನದಲ್ಲಿ ಹೇಗಿರುತ್ತೇವೊ ಅದೇ ರೀತಿಯಲ್ಲಿ ಸಿನಿಮಾವನ್ನು ನಿರ್ದೇಶಕರು ತೆರೆಯ ಮುಂದಿಟ್ಟಿದ್ದಾರೆ.


ಸಿನಿಮಾದಲ್ಲಿ ಬರುವ ರವಿಯಣ್ಣ(ಶನಿಲ್ ಗೌತಮ್) ಸಿನಿಮಾ ಮುಗಿದ ಮೇಲೂ ಕಣ್ಣು ಮುಂದೆ ಉಳಿದು ಬಿಡುತ್ತಾರೆ. ಅಶೋಕ( ಜೆ.ಪಿ.ತೂಮಿನಾಡು)ನ ಮೈಮೇಲೆ ಯಾವಾಗ ಸುಲೋಚನಳ ಪ್ರೇತ ಆವರಿಸಿಕೊಳ್ಳುತ್ತದೊ ಆ ಮೇಲೆ ಪ್ರೇಕ್ಷಕರು ಕೂಡ ನಗುವಿನಿಂದ ಚಡಪಡಿಸಲು ಆರಂಭಿಸುತ್ತಾರೆ. ಪ್ರೇತವನ್ನು ಬಿಡಿಸಲು ಬರುವ ಗುರೂಜಿ( ರಾಜ್ ಬಿ.ಶೆಟ್ಟಿ)ಯ ಅವತಾರ ಹೇಗಿರುತ್ತೆ ಅಂತ ಸಿನಿಮಾ ನೋಡಿಯೇ ಗೊತ್ತಾಗಬೇಕು. ನಗುವಿನ ನಡುವಿನಲ್ಲೆ ನಿರ್ದೇಶಕ ಒಂದು ಭಾವನಾತ್ಮಕ ಸಂಗತಿಯನ್ನು ಕೂಡ ಹೇಳ ಹೊರಟಿದ್ದಾರೆ ಅದೇ ಭಾನುರವರ ಜೀವನದ ಕಥೆ. ಸುಲೋಚನಾರವರ ಮಗಳಾಗಿ ಕಾಣಿಸಿಕೊಳ್ಳುವ ಭಾನು( ಸಂದ್ಯಾ ಅರಕೆರೆ) ತನ್ನ ತಾಯಿ ತೀರಿ ಹೋದ ಬಳಿಕ ಅವರು ಪಡುವ ಕಷ್ಟ, ಸಮಾಜದ ಜನರು ನೋಡುವ ದೃಷ್ಟಿಕೋನ ಎಲ್ಲವನ್ನು ತೆರೆಯ ಮೇಲೆ ತೋರಿಸಿದ್ದಾರೆ. ಇದು ಕೂಡ ಎಲ್ಲೋ ಈ ಸಮಾಜದಲ್ಲಿ ನಡೆಯುವ ಕಥೆಗಳೇ ಆಗಿಹೋಗಿವೆ. ಸೋಮೇಶ್ವರದ ಮರ್ಲೂರು ಎಂಬ ಕರಾವಳಿ ಭಾಗದಲ್ಲಿ ನಡೆಯುವ ಕಥೆ ಇದಾಗಿದ್ದು ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ನಗೆಕಡಲಲ್ಲಿ ತೇಲಿಸುತ್ತಾ ಹೋಗುವ ಸುಫ್ರಮ್‌ಸೋ ಒಂದು ಅಪರೂಪದ ಹಾರರ್ ಸಿನಿಮಾವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಸ್ಯ ಹಾಗೇ ರೋಮಾಂಚನಕಾರಿ ಸನ್ನಿವೇಶಗಳೊಂದಿಗೆ ಅದ್ಭುತವಾಗಿ ಮೂಡಿಬಂದಿರುವ ಸಿನಿಮಾ ಈಗಾಗಲೇ ಚಿತ್ರರಂಗದಲ್ಲೇ ಧೂಳೆಬ್ಬಿಸುತ್ತಿದೆ. ರಾಜ್ ಬಿ.ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ರವಿ ರೈ ಕಳಸ ನಿರ್ಮಾಣದಲ್ಲಿ ಎಸ್. ಚಂದ್ರಶೇಖರನ್‌ರವರ ಛಾಯಾಗ್ರಹಣ. ಚಿತ್ರದಲ್ಲಿ ಸಂದ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್ ಮತ್ತಿತರರು ನಟಿಸಿದ್ದಾರೆ.

ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದ ಚಿತ್ರಗಳು
ಸುಫ್ರಮ್‌ಸೋ, ಸ್ಕೂಲ್ ಲೀಡರ್

ಕನ್ನಡ ಚಿತ್ರಗಳನ್ನು ನೋಡುವವರಿಲ್ಲ ಜನ ಥಿಯೇಟರ್‌ಗೆ ಬರ‍್ತಿಲ್ಲ ಎಂಬ ಕೂಗು ಕೇಳಿಬರುತ್ತಿತ್ತು ಆದರೆ ಯಾವಾಗ ಕರಾವಳಿಯ ಕಲಾವಿದರು ಸೇರಿಕೊಂಡು ಸಿನಿಮಾ ಮಾಡಲು ಹೊರಟರೊ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಶಹಬ್ಬಾಸ್ ಎನ್ನುತ್ತಿದ್ದಾರೆ. ಜೆ.ಪಿ ತೂಮಿನಾಡ್‌ರವರ ಸುಫ್ರಮ್‌ಸೋ ಹಾಗೇ ರಝಾಕ್ ಪುತ್ತೂರುರವರ ಸ್ಕೂಲ್ ಲೀಡರ್ ಜನ ಮೆಚ್ಚಿಕೊಂಡಿರುವುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ.

ಭಾರತ್ ಸಿನೇಮಾಸ್‌ನಲ್ಲಿ ಭರ್ಜರಿ ಪ್ರದರ್ಶನ
ಸುಫ್ರಮ್‌ಸೋ ಪುತ್ತೂರು ಜಿಎಲ್1 ಮಾಲ್‌ನಲ್ಲಿರುವ ಭಾರತ್ ಸಿನೇಮಾಸ್‌ನಲ್ಲಿ ಬೆಳಿಗ್ಗೆ 10/10.30/11/12,30/1.30/2/3/4.15/4.45/5.30/7.30/8/9.45/10/10.30 ದೇಖಾವೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.

LEAVE A REPLY

Please enter your comment!
Please enter your name here