ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತವು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿ ನಮ್ಮದೇ ಆದ ಆಡಳಿತ ವ್ಯವಸ್ಥೆಗಾಗಿ ಸಂವಿಧಾನವನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ. ವಿವಿಧ ಧರ್ಮ, ಭಾಷೆ ,ಜಾತಿ ,ಆಹಾರ ಪದ್ಧತಿ ಇದ್ದರೂ ನಾವೆಲ್ಲರೂ ಭಾರತೀಯರು. ನಮ್ಮ ಪೂರ್ವಜರು ಗಳಿಸಿದ ಸ್ವಾತಂತ್ರ್ಯವನ್ನು ನಾವು ಉಳಿಸುವುದು ನಮ್ಮ ಕರ್ತವ್ಯ ಎನ್ನುತ್ತಾ ದಿನದ ಶುಭ ಸಂದೇಶವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾರತೀಯ ಭೂಸೈನ್ಯದ ನಿವೃತ್ತ ಹವಾಲ್ದಾರ್ ಸುಂದರ ಗೌಡ ನಡುಬೈಲು ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶ ನಮ್ಮದು. ಸ್ವಾತಂತ್ರ್ಯ ನಂತರ ನಮ್ಮ ದೇಶದ ಮೇಲೆ ನೆರೆ ದೇಶಗಳು ಅನೇಕ ಬಾರಿ ದಾಳಿ ಮಾಡಿದರೂ ,ನಮ್ಮ ಸೈನಿಕರು ಸಮರ್ಥವಾಗಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ದೇಶಕ್ಕೆ ಹೊರಗಿನ ವೈರಿಗಳಿಗಿಂತ ದೇಶದೊಳಗಿನ ವೈರಿಗಳು ಅಪಾಯ, ಹಾಗಾಗಿ ನಾವೆಲ್ಲರೂ ಪ್ರಾದೇಶಿಕತೆ, ಧರ್ಮ ಕೋಮು ,ಭಾಷೆ ಇತ್ಯಾದಿಗಳನ್ನು ಬದಿಗೊತ್ತಿ ನಾವೆಲ್ಲರೂ ಈ ದೇಶದ ಸತ್ಪ್ರಜೆಗಳಾಗಿ ಬದುಕಬೇಕು ಎನ್ನುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಆಡಳಿತ ಸಮಿತಿಯ ನಿರ್ದೇಶಕ ರಾಮಣ್ಣಗೌಡ ಹಲಂಗ, ಶಾಲಾ ಸಂಚಾಲಕ ಎ. ವಿ ನಾರಾಯಣ, ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ, ಶಾಲೆಯ ಉಪಾಧ್ಯಕ್ಷ ಉಮೇಶ್ ಮಲುವೇಳು ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸೌಮ್ಯಶ್ರೀ ಹೆಗಡೆ, ಮತ್ತು ಸಂಸ್ಥೆಯ ಪ್ರಾಂಶುಪಾಲ ಅಮರನಾಥ ಪಟ್ಟೆ ಉಪಸ್ಥಿತರಿದ್ದು, ಸ್ವಾತಂತ್ರ್ಯದ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹವಾಲ್ದಾರ್ ಸುಂದರ ಗೌಡ ನಡುಬೈಲು ಇವರನ್ನು ಸನ್ಮಾನಿಸಲಾಯಿತು. ಬಳಿಕ ಪುಟಾಣಿಗಳಿಂದ ಮುದ್ದು ಕೃಷ್ಣ ವೇಷ, ರಾಷ್ಟ್ರೀಯ ನಾಯಕರ ಪೋಷಾಕುಧಾರಣೆ, ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಡಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರುಗಳು, ಪೋಷಕರು ಬೋಧಕ -ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡರು. ವಿದ್ಯಾರ್ಥಿನಿಯರಾದ ವಿಕಾ.ಪೈ,ಶಿವಾನಿ, ಸುವಿಕ್ಷ ಪ್ರಾರ್ಥಿಸಿದರು. ಶಿಕ್ಷಕಿಯಾರಾದ ರೀಮಾಲೋಬೊ ಸ್ವಾಗತಿಸಿ, ರಾಧಾ.ಪಿ ಮತ್ತು ಕುಮಾರಿ ಪ್ರಕ್ಷುತ ವಂದಿಸಿದರು. ಸವಿತಾ ಕೆ ಅತಿಥಿಗಳ ಪರಿಚಯವನ್ನು ಮಾಡಿ, ಹಿತಾಶ್ರೀ ಮತ್ತು ಶ್ವೇತ .ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಯಶುಭ ರೈ, ಸುಚಿತ, ಹರ್ಷಿತ, ರಂಜಿತ ರೈ, ತೀರ್ಥಶ್ರೀ, ಚಂದ್ರಿಕಾ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದರು.