ರಾಷ್ಟ್ರೀಯ ಭಾವೈಕ್ಯತೆ ಪಠ್ಯಕ್ಕಷ್ಟೇ ಸೀಮಿತವಾಗಿರಬಾರದು-ಸೀತಾರಾಮ ಕೇವಳ
ಪುತ್ತೂರು:ರಾಷ್ಟ್ರೀಯ ಭಾವೈಕ್ಯತೆ ಎಂಬುದು ಬದುಕಿನಲ್ಲಿ ನಿತ್ಯ ಅಳವಡಿಸಿಕೊಳ್ಳಬೇಕಾದ ಮಹತ್ವದ ಸಂಗತಿ. ಅದು ಕೇವಲ ಪಠ್ಯಕ್ಕೆ ಸೀಮಿತವಾಗಿರಬಾರದು ಎಂದು ನ್ಯೂಸ್ ಪುತ್ತೂರಿನ ಅಧ್ಯಕ್ಷ ಸೀತಾರಾಮ ಕೇವಳ ಹೇಳಿದರು.
ವಜ್ರ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಪುತ್ತೂರು ರೋಟರಿ ಕ್ಲಬ್ ನಲ್ಲಿ ರಾಷ್ಟ್ರೀಯ ಭಾವೈಕ್ಯತೆ ಎಂಬ ವಿಚಾರವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು. ನಂಬಿಕೆ, ಆತ್ಮೀಯತೆ ಮತ್ತು ಸಹಿಷ್ಣುತೆ, ಭಾವೈಕ್ಯತೆಯನ್ನು ಕಾಪಾಡಿಕೊಳ್ಳುವಲ್ಲಿನ ಮಹತ್ವದ ಸಂಗತಿಗಳು. ಪರಸ್ಪರರನ್ನು ಅರಿತು ಬೆರೆತು ಬಾಳುವ ಸಹಜೀವನ ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿ. ನಾನು ಭಾರತೀಯ ಎನ್ನುವಾಗ ಜಾತಿ-ಮತ-ವೇಷ- ಭಾಷೆಗಳನ್ನು ಮೀರಿದ ಅದ್ಭುತ ಅನುಭವ ನಮ್ಮದಾಗುತ್ತದೆ .ನಾವು ಮೊದಲು ಭಾರತೀಯರು ಎಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು ಎಂದರು .
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ಮಾತನಾಡಿ, “ಮನುಜ ಮತ ವಿಶ್ವಪಥ” ಎಂಬ ಕವಿವಾಣಿಯ ಉದಾತ್ತ ನಿಲುವನ್ನು ಸಾಕಾರಗೊಳಿಸಬೇಕಾದ ಇಂದಿನ ಅಗತ್ಯದ ಬಗ್ಗೆ ಕಿವಿಮಾತು ಹೇಳಿದರು .
ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಅಂತರಾಷ್ಟ್ರೀಯ ಮನ್ನಣೆ ಗಳಿಸಿದ ಪಿಡಿಜಿ ರಂಜನ್ ಕಿಣಿಯವರ ಸಂಸ್ಮರಣೆ ನಡೆಸಲಾಯಿತು ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್, ನಿಯೋಜಿತ ಅಧ್ಯಕ್ಷ ಪ್ರೊ| ದತ್ತಾತ್ರೇಯ ರಾವ್ ಉಪಸ್ಥಿತರಿದ್ದರು. ಕಾರ್ಯದರ್ಶಿ, ಪ್ರೊ| ಸುಬ್ಬಪ್ಪ ಕೈಕಂಬ ವರದಿ ಮಂಡಿಸಿದರು .ಅನೆಟ್ ಆರಾಧನಾ ದೇಶಭಕ್ತಿ ಗೀತೆ ಹಾಡಿದರು. ಸತೀಶ್ ತುಂಬ್ಯ ಅತಿಥಿಗಳ ಪರಿಚಯ ಮಾಡಿದರು.ಡಾ. ಸುಧಾ ಎಸ್ ರಾವ್ ವಂದಿಸಿದರು.