ಸಾಮೆತ್ತಡ್ಕ: ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳ ರಾಶಿ : ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ

0


ಪುತ್ತೂರು: ಪುತ್ತೂರು ನಗರ ಬೆಳೆಯುತ್ತಿದೆ. ಜಿಲ್ಲಾ ಕೇಂದ್ರವಾಗಿ ಮಾರ್ಪಡಲಿದೆ ಎಂಬ ಮಾತಿಗೆ ವಿರುದ್ಧ ಎಂಬಂತೆ ಪುತ್ತೂರು ನಗರಸಭೆಗೊಳಪಟ್ಟ ಸಾಮೆತ್ತಡ್ಕ ರಸ್ತೆಯನ್ನೊಮ್ಮೆ ಗಮನಿಸಿ. ರಸ್ತೆಯ ಇಕ್ಕೆಲಗಳಲ್ಲೂ ಎತ್ತರಕ್ಕೆ ಬೆಳೆದ ಗಿಡಗಂಟಿಗಳಿಂದ ಕೂಡಿದ ಪೊದೆಗಳ ರಾಶಿಯಿಂದಾಗಿ ವಾಹನ ಸವಾರರು ಜೊತೆಗೆ ಪಾದಚಾರಿಗಳು ಕೂಡ ಪರದಾಡುವಂತಾಗಿದೆ.


ಡ್ರೈನೇಜ್ ಕಾಣುತ್ತಿಲ್ಲ ಮಾರ್ರೆ
ಗಿಡಗಂಟಿಗಳ ರಾಶಿಯಿಂದಾಗಿ ಈ ರಸ್ತೆಯಲ್ಲಿ ಸರಿಯಾಗಿ ಎರಡು ಚತುಷ್ಚಕ್ರ ಚಾಹನಗಳು ಚಲಿಸುವಂತಿಲ್ಲ. ಹಗಲು ಹೊತ್ತಿನಲ್ಲಿ ಏನಾದರೂ ಮಾಡಬಹುದು ಆದರೆ ರಾತ್ರಿ ಹೊತ್ತಿನಲ್ಲಿ ಇಲ್ಲಿ ಸಂಚರಿಸಲು ಅಸಾಧ್ಯ ಎಂಬಂತಿದೆ. ರಸ್ತೆಯ ಬಲಬದಿಗೆ ಡ್ರೈನೇಜ್ ವ್ಯವಸ್ಥೆಯನ್ನು ನಗರಸಭೆ ಮಾಡಿದೆ. ಆದರೆ ಈ ಪೊದೆಗಳ ರಾಶಿಯಿಂದಾಗಿ ಡ್ರೈನೇಜ್ ಗೋಚರಿಸುತ್ತಿಲ್ಲ. ಸ್ಥಳೀಯರಿಗೆ ಇಲ್ಲಿ ಡ್ರೈನೇಜ್ ಇದೆ ಎಂದು ಗೊತ್ತಾಗುತ್ತದೆ ಆದರೆ ಹೊರಗಿನಿಂದ ಬರುವ ವಾಹನ ಸವಾರರಿಗೆ ಇದು ಗೊತ್ತಾಗದೆ ಅಪಾಯ ಸಂಭವಿಸುವುದೇ ಹೆಚ್ಚು. 


ಬೀದಿ ದೀಪದ ಕೊರತೆ
ಜೊತೆಗೆ ಈ ಗಿಡಗಂಟಿಗಳ ರಾಶಿಯಿಂದಾಗಿ ಗಿಡಗಂಟಿ ರಾಶಿಯೊಳಗೆ ವಿಷಜಂತುಗಳು ಇವೆಯೋ ಎಂಬುದೂ ಗೊತ್ತಾಗದು ಮಾತ್ರವಲ್ಲ ಈ ಭಾಗದಲ್ಲಿ ಬೀದಿ ದೀಪ ಇಲ್ಲದಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತಿದೆ. ರಾತ್ರಿ ಹೊತ್ತು ಪೊದೆ ಹಿಂದುಗಡೆ ವಾಹನ ಪಾರ್ಕಿಂಗ್ ಮಾಡಿದ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಇಲ್ಲಿ ವಾಹನವೊಂದು ಪಾರ್ಕಿಂಗ್ ಮಾಡಲಾಗಿದೆ ಎಂಬುದು ತಿಳಿಯದೆ ಅಪಘಾತಕ್ಕೆ ಕಾರಣವಾಗಿ ವಾಹನಗಳಿಗೆ ಹಾನಿಯಾದರೆ ಅಥವಾ ಮನುಷ್ಯನ ಜೀವಕ್ಕೆ ಆಪತ್ತು ಕಾದರೆ ಯಾರು ಹೊಣೆ ಎಂಬುದು ಕೂಡ ನಾಗರಿಕರ ಪ್ರಶ್ನೆಯಾಗಿದೆ.


ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ
ಕೇವಲ ಈ ರಸ್ತೆ ಬದಿ ಮಾತ್ರವಲ್ಲ, ಸಾಮೆತ್ತಡ್ಕ ಪರಿಸರವಾಗಲಿ ಅಥವಾ ಪುತ್ತೂರು ನಗರಸಭೆಗೆ ಸಂಬಂಧಪಟ್ಟ ಎಲ್ಲಾ ವಾರ್ಡ್ ಗಳ ರಸ್ತೆಗಳ ಪರಿಸ್ಥಿತಿ ಇದೇ ಇರಬಹುದು. ಆದ್ದರಿಂದ ನಗರಸಭೆಯು ರಸ್ತೆ ಬದಿಯ ಗಿಡಗಂಟಿಗಳನ್ನು ಆದಷ್ಟು ಬೇಗ ತೆರವುಗೊಳಿಸಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here