ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮೂಡಿಸಬೇಕು: ಲಕ್ಷ್ಮೀಶ ತೋಳ್ಪಾಡಿ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶುಕ್ರವಾರ ನಡೆದ ನೂತನ ಅಂತಸ್ತಿನ ಲೋಕಾರ್ಪಣೆ ಹಾಗೂ ಕಾಂಪೋಸಿಟ್ ಲ್ಯಾಬ್ನ ಉದ್ಘಾಟನೆ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ವೇ.ಮೂ.ಪುರೋಹಿತ ನಾಗರಾಜ ಭಟ್ಟರ ನೇತೃತ್ವದಲ್ಲಿ ಗಣಪತಿಹೋಮ ನಡೆದು, ಬಳಿಕ ನೂತನ ಅಂತಸ್ತು ಹಾಗೂ ಕಾಂಪೋಸಿಟ್ ಲ್ಯಾಬ್ ಅನ್ನು ಉದ್ಘಾಟಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ, ಶಿಕ್ಷಣವನ್ನು ಇದು ಹೀಗೆಯೇ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅದನ್ನು ಸಾಕಾರಗೋಳಿಸುತ್ತಾ, ಆಳ ಅಗಲವನ್ನು ತಿಳಿಯುತ್ತಾ ಮುಂದೆ ಸಾಗಬೇಕು. ಆದರೆ ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮೂಡಿಸಬೇಕು. ನಿಜವಾದ ಮನುಷ್ಯರೆನಿಸುವುದಕ್ಕೆ ಬೇಕಾದ ಮೂಲಭೂತ ಸಂಗತಿಗಳನ್ನು ಶಿಕ್ಷಣ ಒದಗಿಸಿಕೊಡಬೇಕು ಎಂದು ಹೇಳಿದರು.
ಸಮಾಜದಲ್ಲಿ ಶಿಕ್ಷಿತರೇ ಸುಳ್ಳನ್ನಾಡುವ, ಧರ್ಮದ ತಳಹದಿಯಲ್ಲಿ ಅಧರ್ಮವನ್ನು ಸಾಧಿಸುವ ಮಂದಿಯನ್ನು ಕಾಣುತ್ತಿದ್ದೇವೆ. ಚೆನ್ನಾಗಿ ಮಾತನಾಡಲು ಬಲ್ಲವನೇ ಸತ್ಯವನ್ನಾಡದಿರುವುದು ಶಿಕ್ಷಣವನ್ನು ಅನುಮಾನಿಸುವಂತೆ ಮಾಡುತ್ತಿದೆ. ಹಾಗಾದರೆ ನಾವು ನೀಡುತ್ತಿರುವ ಶಿಕ್ಷಣದಲ್ಲಿ ಯಾವುದು ಕೊರತೆಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ. ತಪ್ಪುಗಳ ವಿಪರ್ಯಾಸಗಳನ್ನು ಗುರುತಿಸುವ, ಪ್ರಶ್ನೆಗಳನ್ನು ಧೈರ್ಯದಿಂದ ಕೇಳುವಂತೆ ಮಾಡುವ ಮನಃಸ್ಥಿತಿಯನ್ನು ಶಿಕ್ಷಣದ ಮೂಲಕ ಒದಗಿಸಿಕೊಡಬೇಕಿದೆ ಎಂದರು.
ಕಳೆದ ವರ್ಷ ಆಚರಿಸಲಾದ ಅಂಬಿಕಾ ವಿದ್ಯಾಲಯದ ಹತ್ತನೆಯ ವರ್ಷದ ಸಂಭ್ರಮಾಚರಣೆ ದಶಾಂಬಿಕೋತ್ಸವದ ಸವಿನೆನಪಿಗಾಗಿ ರೂಪಿಸಿರುವ ನೂತನ ಅಂತಸ್ತು ಹಾಗೂ ಕಾಂಪೋಸಿಟ್ ಲ್ಯಾಬ್ ಅನ್ನು ಉದ್ಘಾಟಿಸಿದ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಟಾನದ ಸಂಚಾಲಕ ವೇ.ಮೂ.ಪುರೋಹಿತ ನಾಗರಾಜ ಭಟ್ ಮಾತನಾಡಿ ಆಧುನಿಕ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಸಂಸ್ಥೆಯಲ್ಲಿ ದೊರಕುವ ಪ್ರಯೋಗಾಲಯಗಳಂತಹ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಪೋಸಿಟ್ ಲ್ಯಾಬ್ನಂತಹ ಸೌಲಭ್ಯಗಳು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೇದಮೂರ್ತಿ ಪುರೋಹಿತ ನಾಗರಾಜ ಭಟ್ಟರನ್ನು ಸನ್ಮಾನಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಜಾತಿ ಮತಗಳ ಹಂಗಿಲ್ಲದೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಾಧ್ವ ಪರಂಪರೆಯ ವಾದಿರಾಜ ಶ್ರೀಗಳು ಶತಮಾನಗಳ ಹಿಂದೆಯೇ ಸಾಮಾಜಿಕ ಕ್ರಾಂತಿಯನ್ನು ಹುಟ್ಟುಹಾಕಿದವರು. ಅಂತಹ ಕೈಂಕರ್ಯ ವೇದಮೂರ್ತಿ ನಾಗರಾಜ ಭಟ್ಟರ ಮುಖೇನ ಈಗ ಮತ್ತೊಮ್ಮೆ ಸಾಧಿತವಾಗುತ್ತಿದೆ. ಧರ್ಮದ ಉಳಿವಿಗಾಗಿ ಭಟ್ಟರು ವಿನಿಯೋಗಿಸುತ್ತಿರುವ ಶ್ರಮ ಶ್ಲಾಘನೀಯ ಎಂದರು.
ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ ಅಂಬಿಕಾ ವಿದ್ಯಾಲಯ ಎರಡು ಕೊಠಡಿಗಳಿಂದ ಪ್ರಾರಂಭಗೊಂಡು ಇದೀಗ ಮೂರು ಅಂತಸ್ತಿನವರೆಗೆ ಬೆಳೆದುನಿಂತಿರುವುದು ಸನಿಹದಿಂದ ನೋಡುತ್ತಿರುವವರಲ್ಲಿ ಒಂದು ವಿಸ್ಮಯದ ಬೆರಗನ್ನು ಮೂಡಿಸುತ್ತಿದೆ. ಇಂದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅತ್ಯುತ್ತಮ ಕ್ಯಾಂಪಸ್ ಎರಡನ್ನೂ ಒದಗಿಸುವ ತಾಣವಾಗಿ ಅಂಬಿಕಾ ರೂಪುಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.
ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ಸ್ವಾಗತಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಪ್ರಸ್ತಾವನೆಗೈದರು. ಸಂಸ್ಕೃತ ಉಪನ್ಯಾಸಕ ನಾರಾಯಣ ವೈಲಾರ ವಂದಿಸಿದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪುರೋಹಿತ ನಾಗರಾಜ ಭಟ್ಟರ ಬಗೆಗಿನ ಸನ್ಮಾನ ಪತ್ರ ವಾಚಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.