ಪೆರಾಬೆ: ಕುಂತೂರು ಸರಕಾರಿ ಶಾಲಾ ಕಟ್ಟಡ ಕಳೆದ ಮಳೆಗಾಲದಲ್ಲಿ ಕುಸಿತಗೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ತರಗತಿ ನಡೆಯುತ್ತಿದೆ. ಹೀಗಿದ್ದರೂ ಸದ್ರಿ ಶಾಲೆಯ ಬಗ್ಗೆ ಶಿಕ್ಷಣ ಇಲಾಖೆಗೆ ಕಾಳಜಿ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ ಘಟನೆ ಪೆರಾಬೆ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಆ.25ರಂದು ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಡಬ ಪಶುಸಂಗೋಪನಾ ಇಲಾಖೆ ಪಶುವೈದ್ಯಾಧಿಕಾರಿ ಡಾ.ಅಜಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಿಆರ್ಪಿ ಪ್ರಕಾಶ್ ಬಾಕಿಲ ಅವರು ಮಾಹಿತಿ ನೀಡಿ, ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯ ಕಟ್ಟಡವೊಂದು ಕಳೆದ ಮಳೆಗಾಲದಲ್ಲಿ ಕುಸಿತಗೊಂಡಿತ್ತು. ಇಲ್ಲಿಗೆ ಶಿಕ್ಷಣ ಇಲಾಖೆಯಿಂದ ಎರಡು ಕೊಠಡಿ ಮಂಜೂರುಗೊಂಡಿದ್ದು ಕಾಮಗಾರಿ ನಡೆಯುತ್ತಿದೆ. ಇನ್ನೂ ಎರಡು ಕೊಠಡಿಗೆ ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದ್ದು ಈ ವರ್ಷದ ಕ್ರೀಯಾ ಯೋಜನೆಯಲ್ಲಿ ಮಂಜೂರು ಮಾಡುವುದಾಗಿ ಬಿಇಒ ತಿಳಿಸಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಪ್ರಭಾಕರ ಶೆಟ್ಟಿ ಕೇವಳಪಟ್ಟೆ ಅವರು, ಗ್ರಾಮಸ್ಥರು ಸರಕಾರಿ ಶಾಲೆಯ ಉಳಿವಿಗೆ ಪ್ರಯತ್ನಿಸುತ್ತಿದ್ದೇವೆ. ಆದರೆ ಸದ್ರಿ ಶಾಲೆಯ ಬಗ್ಗೆ ಶಿಕ್ಷಣ ಇಲಾಖೆ ಮುತುವರ್ಜಿ ತೆಗೆದುಕೊಳ್ಳುತ್ತಿಲ್ಲ. ಬಿಇಒ ಅವರಿಗೆ ಸದ್ರಿ ಶಾಲೆಯ ಬಗ್ಗೆ ಕಾಳಜಿಯೇ ಇಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ಬಾಕಿಲ ಅವರು, ನಮ್ಮ ಹಂತದಲ್ಲಿ ಆಗುವ ಕೆಲಸ ಮಾಡುತ್ತಿದ್ದೇವೆ. ಕಟ್ಟಡ ಮಂಜೂರಾತಿಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಗ್ರಾಮಸ್ಥ ಅಯ್ಯೂಬ್ ಯು.ಕೆ.ಮಾತನಾಡಿ, ಇಲ್ಲಿರುವ ಬಹುತೇಕ ಗ್ರಾ.ಪಂ.ಸದಸ್ಯರೂ ಇದೇ ಶಾಲೆಯಲ್ಲಿ ಕಲಿತವರಾಗಿದ್ದಾರೆ. ಶಾಲೆಯ ಕಟ್ಟಡ ಬಿದ್ದು 1 ವರ್ಷ ಆದರೂ ಹೊಸ ಕೊಠಡಿ ಆಗುತ್ತಿಲ್ಲ. ಈ ಬಗ್ಗೆ ಗ್ರಾ.ಪಂ.ಏನು ಕ್ರಮ ಕೈಗೊಂಡಿದೆ, ಮುಂದೆ ಏನು ಮಾಡುತ್ತೀರಿ ಎಂದು ತಿಳಿಸಬೇಕು ಎಂದರು.
ಸಂಸದರಿಗೂ ಮನವಿ:
ಸಂಸದರಿಗೆ 20 ಶಾಲೆಗಳಿಗೆ ಕೊಠಡಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತಿದೆ ಎಂಬ ಮಾಹಿತಿ ತಿಳಿದು ಕುಂತೂರು ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಅನುದಾನ ಕೋರಿ ಸಂಸದರಿಗೆ ಮನವಿ ಮಾಡುವಂತೆ ಬಿಇಒ, ಡಿಡಿಪಿಐ ಅವರಿಗೆ ಪತ್ರ ಬರೆದು ಕೇಳಿಕೊಂಡಿದ್ದೇವೆ. ಆದರೆ ಇದಕ್ಕೆ ಬಿಇಒ, ಡಿಡಿಪಿಐ ಅವರಿಂದ ಕಳಿಸಿದ್ದೇವೆ ಎಂಬ ಉತ್ತರ ಸಿಗುತ್ತಿದೆಯೇ ಹೊರತು ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ ಎಂದು ಎಸ್ಡಿಎಂಸಿ ಮಾಜಿ ಅಧ್ಯಕ್ಷ ಹರೀಶ್ ಬಾಣಬೆಟ್ಟು ಹೇಳಿದರು.
ಜಾಗದ ಗಡಿಗುರುತು ಮಾಡಿ;
ಕುಂತೂರು ಸರಕಾರಿ ಶಾಲೆಯ ಜಾಗದ ಸರ್ವೆ ನಡೆಸಿ ಗಡಿಗುರುತು ಮಾಡಿಕೊಡುವಂತೆ ಕಂದಾಯ ಇಲಾಖೆಗೆ ವರ್ಷದ ಹಿಂದೆಯೇ ಮನವಿ ಮಾಡಿದ್ದೇವೆ. ಕಳೆದ ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದು ಕಂದಾಯ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಗಿದೆ. ಆದರೆ ಈ ತನಕವೂ ಸರ್ವೆ ಆಗಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಸಿಗಲು ಕ್ಷೇತ್ರ ಶಿಕ್ಷಣಾಧಿಕಾರಿಯವರೇ ಗ್ರಾಮಸಭೆಗೆ ಬರಬೇಕು ಎಂದು ಹರೀಶ್ ಬಾಣಬೆಟ್ಟು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಅವರು, ಗ್ರಾಮಸಭೆಗೆ ಗ್ರಾಮ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಒಂದು ವೇಳೆ ತಾಲೂಕುಮಟ್ಟದ ಅಧಿಕಾರಿಗಳು ಬರಬೇಕು ಎಂದಾದಲ್ಲಿ ವಾರ್ಡ್ಸಭೆಯಲ್ಲಿ ನಿರ್ಣಯ ಮಾಡಿ ಕಳಿಸಬೇಕಿತ್ತು. ವಾರ್ಡ್ ಸಭೆಯಲ್ಲಿ ಈ ವಿಚಾರ ಬಂದಿಲ್ಲ ಎಂದರು. ಚರ್ಚೆಯ ನಡುವೆ ಶಾಲೆಯ ಜಾಗದ ಗಡಿ ಗುರುತು ಮಾಡುವವರು ಯಾರು ? ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ನೋಡೆಲ್ ಅಧಿಕಾರಿ ಡಾ.ಅಜಿತ್ ಅವರು, ಶಾಲೆಯ ಜಾಗದ ಸರ್ವೆ ಮಾಡಿ ಗಡಿಗುರುತು ಶಿಕ್ಷಣ ಇಲಾಖೆಯೇ ಮಾಡಿಸಿಕೊಳ್ಳಬೇಕೆಂದು ಹೇಳಿದರು. ಗ್ರಾಮ ಆಡಳಿತಾಧಿಕಾರಿ ಶ್ರುತಿ ಅವರು ಮಾತನಾಡಿ, ಸದ್ರಿ ಜಾಗದ 1 ಟು 5 ಆಗದೇ ಇದ್ದಲ್ಲಿ ಮಾಡಿಕೊಡುತ್ತೇವೆ. ಮುಂದೆ ಪ್ಲಾಟಿಂಗ್ಗೆ ಸರ್ವೆ ಇಲಾಖೆಯವರು ಬರುತ್ತಾರೆ ಎಂದರು.

ಹೊಳೆಗೆ ತ್ಯಾಜ್ಯ ಎಸೆಯದಂತೆ ಕ್ರಮ ವಹಿಸಿ;
ಪೆರಾಬೆ ಸೇತುವೆ ಬಳಿ ಪ್ಯಾಂಪರ್ಸ್ ಸೇರಿದಂತೆ ಇತರೇ ತ್ಯಾಜ್ಯವನ್ನು ಹೊಳೆ ನೀರಿಗೆ ಎಸೆಯಲಾಗುತ್ತಿದೆ. ಅದನ್ನು ನಾಯಿಗಳು ತಂದು ತೋಟದಲ್ಲಿ ಹಾಕುತ್ತಿವೆ. ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ತಂದು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹರೀಶ್ ಕುಂತೂರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸಂಧ್ಯಾ ಕೆ.ಅವರು ತ್ಯಾಜ್ಯ ಎಸೆಯುವವರ ಬಗ್ಗೆ ಪಂಚಾಯತ್ಗೆ ಮಾಹಿತಿ ನೀಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಿಡಿಒ ಶಾಲಿನಿ ಅವರು ಮಾತನಾಡಿ, ಸಿಸಿ ಕ್ಯಾಮರಾಕ್ಕೆ ಪಂಚಾಯತ್ ಅನುದಾನದಿಂದಲೇ ಖರ್ಚು ಮಾಡಬೇಕಾಗುತ್ತದೆ. ಸಿಸಿ ಕ್ಯಾಮರಾ ಹಾಕಿದರೂ ಮಳೆ ಅಥವಾ ಇನ್ನಿತರ ಕೆಲವೊಂದು ಸಂದರ್ಭಗಳಲ್ಲಿ ಅದು ವರ್ಕ್ ಆಗುವುದಿಲ್ಲ. ತ್ಯಾಜ್ಯ ನಿರ್ವಹಣೆ, ಪರಿಸರ ಸ್ವಚ್ಛತೆ ಗ್ರಾಮಸ್ಥರ ಜವಾಬ್ದಾರಿಯೂ ಆಗಿದೆ. ಆದ್ದರಿಂದ ತ್ಯಾಜ್ಯ ಎಸೆಯುವವರ ಬಗ್ಗೆ ಮಾಹಿತಿ ನೀಡಿ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ನಿರಂಜನ ಅವರು, ನಾವು ಮಾಹಿತಿ ನೀಡಿದಲ್ಲಿ ನಮ್ಮೊಳಗೆ ವೈಯಕ್ತಿಕ ದ್ವೇಷ ಹುಟ್ಟಿಕೊಳ್ಳುತ್ತದೆ. 15 ದಿನದ ಮಟ್ಟಿಗೆ ಸಿಸಿ ಕ್ಯಾಮರಾ ಇಟ್ಟು ನೋಡಿ ಎಂದರು. ಪಿಡಿಒ ಶಾಲಿನಿ ಅವರು ಮತ್ತೆ ಮಾತನಾಡಿ, ತ್ಯಾಜ್ಯ ಸಂಗ್ರಹಕ್ಕೆ ತಿಂಗಳಿಗೆ ೩೦ ರೂ.ಶುಲ್ಕ ಇರುವುದು. ಆದರೂ ತ್ಯಾಜ್ಯ ಸಂಗ್ರಹಕ್ಕೆ ಹೋದ ವೇಳೆ ಮನೆಗೆ ಬಾಗಿಲು ಹಾಕಿ ಕುಳಿತುಕೊಳ್ಳುವವರೇ ಹೆಚ್ಚು ಎಂದರು.
ಕುಂತೂರು-ಬೇಳ್ಪಾಡಿ ರಸ್ತೆ ದುರಸ್ತಿಗೊಳಿಸಿ;
ಕುಂತೂರು-ಬೆಳ್ಪಾಡಿ ರಸ್ತೆ ಕಾಂಕ್ರಿಟೀಕರಣಗೊಳಿಸಬೇಕೆಂದು ಗ್ರಾಮಸ್ಥ ಸಿದ್ದೀಕ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮೋಹನದಾಸ ರೈ ಅವರು, ಸದ್ರಿ ರಸ್ತೆ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ಗ್ರಾ.ಪಂ.ನಲ್ಲಿ ಇಲ್ಲ. ಶಾಸಕರು, ಸಂಸದರಿಗೆ ಕಾಂಕ್ರಿಟೀಕರಣಕ್ಕೆ ಮನವಿ ಮಾಡಲಾಗುವುದು ಎಂದರು. ಗ್ರಾಮಸ್ಥ ಅಯ್ಯೂಬ್ ಅವರು ಮಾತನಾಡಿ, ಸದ್ರಿ ರಸ್ತೆ ಎಲ್ಲರಿಗೂ ಉಪಯೋಗದ ರಸ್ತೆಯಾಗಿದೆ. ಆದರೂ ಈ ತನಕ ಅಭಿವೃದ್ದಿಯಾಗಿಲ್ಲ. ಆದಷ್ಟೂ ಬೇಗ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿದರು. ಪೂಂಜ ರಸ್ತೆಯನ್ನೂ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಕಜೆ ಕುಮೇರು ರಸ್ತೆಗೆ 10 ಲಕ್ಷ ರೂ.ಪ್ರಸ್ತಾವನೆ;
ಕಜೆಕುಮೇರು ರಸ್ತೆ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಫಯಾಜ್ ಅವರು, ಸದ್ರಿ ರಸ್ತೆಗೆ ಶಾಸಕರ ಮೂಲಕ ಅಲ್ಪಸಂಖ್ಯಾತ ಇಲಾಖೆಯಿಂದ 10 ಲಕ್ಷ ರೂ.ಅನುದಾನಕ್ಕೆ ಪ್ರಸ್ತಾವನೆ ಹೋಗಿದೆ. ಇಂಜಿನಿಯರ್ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಸಕರ ಮೂಲಕ ಫಾಲೋಅಪ್ ಮಾಡುತ್ತಿದ್ದೇವೆ ಎಂದರು.
ಪೆರಾಬೆ-ಪಟ್ಟೆ ರಸ್ತೆ ಕಾಂಕ್ರೀಟ್ ಮಾಡಿಸಿ;
ಗ್ರಾಮ ಪಂಚಾಯತ್ ಮುಂಭಾಗದಿಂದ ಹಾದು ಹೋಗುವ ಪೆರಾಬೆ-ಪಟ್ಟೆ ರಸ್ತೆಯನ್ನು ಸುಮಾರು 50 ಮನೆಯವರು ಬಳಕೆ ಮಾಡುತ್ತಿದ್ದಾರೆ. 250ಕ್ಕೂ ಹೆಚ್ಚು ಜನ ಓಡಾಟ ಮಾಡುತ್ತಿರುತ್ತಾರೆ. ಆದರೆ ಸದ್ರಿ ರಸ್ತೆ 350 ಮೀ.ಕಾಂಕ್ರಿಟೀಕರಣ ಆಗಿದೆ. ಉಳಿದ ಭಾಗವನ್ನೂ ಕಾಂಕ್ರೀಟೀಕರಣ ಮಾಡಿ ಎಂದು ಗ್ರಾಮಸ್ಥ ಹನೀಫ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಫಯಾಜ್ ಅವರು, ಸದ್ರಿ ರಸ್ತೆಯನ್ನು 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿ ಮಾಡಿದ್ದೇವೆ. ಹೆದ್ದಾರಿಯಲ್ಲಿ ಒಂದು ಕಡೆ ಮೋರಿ ಇದ್ದು ಅಲ್ಲಿ ಸ್ಲ್ಯಾಬ್ ಅಳವಡಿಸಬೇಕಾಗಿದೆ. ಅನುದಾನವಿದ್ದು ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದರು. ಗಡಿಯಾರ್ನಡ್ಕ-ಬಾಚಡ್ಕ ರಸ್ತೆ ಕಾಂಕ್ರಿಟೀಕರಣಕ್ಕೂ ಗ್ರಾಮಸ್ಥರು ಮನವಿ ಮಾಡಿದರು.
ಕುಂತೂರು-ಬೇಳ್ಪಾಡಿ ರಸ್ತೆ ಕೆಸರುಮಯ;
ಕುಂತೂರು-ಬೇಳ್ಪಾಡಿ ರಸ್ತೆಯ ಬೀಜದಗುಂಡಿ ಎಂಬಲ್ಲಿ ರಸ್ತೆ ಕೆಸರುಮಯ ಆಗಿದ್ದು ಅಲ್ಲಿ ಚರಳು ಹಾಕಿ ಸರಿಪಡಿಸಬೇಕೆಂದು ಗ್ರಾಮಸ್ಥ ನಿರಂಜನ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸಂಧ್ಯಾ ಕೆ.ಅವರು ಅನುದಾನ ಲಭ್ಯವಿದ್ದಲ್ಲಿ ಕಾಮಗಾರಿ ನಿರ್ವಹಿಸುತ್ತೇವೆ ಎಂದರು. ಮತ್ತೆ ಮಾತನಾಡಿದ ಗ್ರಾಮಸ್ಥ ನಿರಂಜನ್ ಅವರು, ಪಂಚಾಯತ್ಗೆ ಬಂದ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ವಿವೇಚನೆ ಜನಪ್ರತಿನಿಧಿಗಳಿಗೆ ಇರಬೇಕೆಂದು ಹೇಳಿದರು. ಸದಸ್ಯೆ ಮಮತಾ ಅಂಬರಾಜೆ ಪ್ರತಿಕ್ರಿಯಿಸಿ, ಸದ್ರಿ ರಸ್ತೆಯಲ್ಲಿ 50 ಸಾವಿರ ರೂ.ಅನುದಾನದಲ್ಲಿ ಚರಂಡಿ ದುರಸ್ತಿ ಮಾಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ 30 ಸಾವಿರ ರೂ.ಅನುದಾನದ ಕೆಲಸವೂ ಆಗಿದೆ. ಮಳೆಗಾಲದಲ್ಲಿ ಕೆಲಸ ಆಗಿರುವುದರಿಂದ ರಸ್ತೆ ಕೆಸರುಮಯ ಆಗಿದೆ. ಈಗಾಗಲೇ ಅಲ್ಲಿಗೆ 80 ಸಾವಿರ ರೂ.ಖರ್ಚು ಮಾಡಿರುವುದರಿಂದ ಮತ್ತೆ ಚರಳು ತಂದು ಹಾಕಲು ಅನುದಾನದ ಲಭ್ಯತೆ ಬಗ್ಗೆಯೂ ನೋಡಿಕೊಳ್ಳಬೇಕಾಗುತ್ತದೆ. ಇವತ್ತೇ ಚರಳು ತಂದು ಹಾಕುತ್ತೇವೆ ಎಂದು ಹೇಳುವುದಿಲ್ಲ. ಅಲ್ಲಿಗೆ ಚರಳು ತಂದು ಹಾಕುತ್ತೇವೆ ಎಂದರು.
ಪದವು-ಆಲಂಗಪೆ ರಸ್ತೆಯೂ ಕೆಸರುಮಯ;
ಪದವು-ಆಲಂಗಪೆ ರಸ್ತೆ ಕೆಸರುಮಯವಾಗಿದ್ದು ನಡೆದುಕೊಂಡು ಹೋಗಲು ಆಗುತ್ತಿಲ್ಲ. ಆದ್ದರಿಂದ ಕೆಸರು ತೆಗೆದು ಚರಳು ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. 34 ಸಾವಿರ ರೂ. ಅನುದಾನವಿದ್ದು ಚರಳು ತಂದು ಹಾಕುತ್ತೇವೆ ಎಂದು ಸದಸ್ಯ ರಾಜು ಹೇಳಿದರು.
ಬಸ್ಸ್ಟ್ಯಾಂಡ್ಗೆ ಮನವಿ;
ಕುಂತೂರು ಕೆಳಗಿನ ಪೇಟೆಯಲ್ಲಿ ರಸ್ತೆಯ ಒಂದು ಬದಿ ಬಸ್ಸ್ಟ್ಯಾಂಡ್ ಇದೆ. ಇನ್ನೊಂದು ಬದಿ ಇಲ್ಲ. ಇದರಿಂದ ಜನರಿಗೆ ಸಮಸ್ಯೆ ಆಗಿದೆ. ಈ ಹಿಂದೆ ಬಸ್ಸ್ಟ್ಯಾಂಡ್ ಇತ್ತು. ಈಗ ಅದರಲ್ಲಿ ಅಂಗಡಿ ಕೋಣೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಫಯಾಜ್ ಅವರು ಸದ್ರಿ ಅಂಗಡಿ ಕಟ್ಟಡದ ಏಲಂ ಅವಧಿ ಮುಗಿದ ಬಳಿಕ ಬಸ್ಸ್ಟ್ಯಾಂಡ್ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಲಯ ಮೇಲ್ವಿಚಾರಕಿ ಭವಾನಿ, ಮೆಸ್ಕಾಂ ಆಲಂಕಾರು ಶಾಖಾ ಜೆಇ ಪ್ರೇಮ್ಕುಮಾರ್, ಸಿಆರ್ಪಿ ಪ್ರಕಾಶ್ ಬಾಕಿಲ, ವೈದ್ಯಾಧಿಕಾರಿ ಡಾ.ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ಶ್ರುತಿ, ಕೃಷಿ ಇಲಾಖೆಯ ಸೀಮಾ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ರಾಧಾಕೃಷ್ಣ ಅವರು ಇಲಾಖಾವಾರು ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಮೋಹನ್ದಾಸ್ ರೈ, ಸುಶೀಲ, ಸಿ.ಯಂ.ಫಯಾಜ್, ಕಾವೇರಿ, ಮೇನ್ಸಿ ಸಾಜನ್, ಸದಾನಂದ ಕುಂಟ್ಯಾನ, ಲೀಲಾವತಿ, ಚಂದ್ರಶೇಖರ ರೈ, ಬಿ.ಕೆ.ಕುಮಾರ, ಮಮತಾ, ಪಿ.ಜಿ.ರಾಜು, ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ. ಸ್ವಾಗತಿಸಿ, ವರದಿ ವಾಚಿಸಿದರು. ಕಾರ್ಯದರ್ಶಿ ಶಾರದಾ ಪಿ.ಎ.ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ತೆರಿಗೆ ಸಂಗ್ರಹದಲ್ಲಿ ಶೇ.93ರಷ್ಟು ಪ್ರಗತಿ
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸಂಧ್ಯಾ ಕೆ.ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ 2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹದಲ್ಲಿ ಶೇ.93ರಷ್ಟು ಪ್ರಗತಿ ಸಾಧಿಸಿದ್ದೇವೆ. ಗ್ರಾ.ಪಂ.ನ ಸ್ವಂತ ಅನುದಾನ ಹಾಗೂ ಸರಕಾರದಿಂದ ಬರುವ ಅನುದಾನ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.