ಧಾರ್ಮಿಕ ನಂಬಿಕೆ ಗಟ್ಟಿಯಾದಾಗ ದೇಶವೂ ಬಲಿಷ್ಠವಾಗುತ್ತದೆ: ಪ್ರಸಾದ್ ಕುಮಾರ್ ರೈ ಪುಣಚ
ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿ ಕಲಿಸಿದ ದೇಶ ಭಾರತ: ಗಣರಾಜ ಭಟ್ ಕೆದಿಲ
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ 44 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಿಂದ ಆರಂಭಗೊಂಡು ಆ.29ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದ್ದು ಆ.27ರಂದು ಬೆಳಿಗ್ಗೆ ಅರ್ಚಕರಾದ ಪ್ರಕಾಶ್ ನಕ್ಷತ್ರಿತ್ತಾಯ ಕೊಡ್ಲಾರುರವರ ನೇತೃತ್ವದಲ್ಲಿ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆಯಿತು. ಬಳಿಕ ಶ್ರೀ ಗಣಪತಿ ಹೋಮ ನಡೆದು ಮಧ್ಯಾಹ್ನ ಶ್ರೀ ಗಣೇಶ ದೇವರಿಗೆ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಪ್ರೋಫೆಸರ್ ಡಾ| ಸತ್ಯವತಿ ಆರ್.ಆಳ್ವ ಮುಗೇರುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ‘ ಧಾರ್ಮಿಕ ನಂಬಿಕೆ ಮತ್ತು ಸಾಮಾಜಿಕ ಬದಲಾವಣೆ’ ಎಂಬ ವಿಷಯದಲ್ಲಿ ವಕೀಲರಾದ ಪ್ರಸಾದ್ ಕುಮಾರ್ ರೈ ಪುಣಚ ಉಪನ್ಯಾಸ ನೀಡುತ್ತಾ, ಭಾರತ ದೇಶವು ನಂಬಿಕೆಯ ತಳಹದಿಯ ಮೇಲೆ ನಿಂತಿದೆ ಎಂದರೆ ತಪ್ಪಾಗಲಾರದು ದೇಶದ ಮೇಲೆ ದಾಳಿ ಮಾಡಿದಂತಹ ಮೊಗಲರು, ಬ್ರಿಟೀಷರು ಇವರೆಲ್ಲರೂ ಕೂಡ ಜನರ ನಂಬಿಕೆಯ ಮೇಲೆ ದಾಳಿ ಮಾಡ ತೊಡಗಿದರು ಏಕೆಂದರೆ ನಂಬಿಕೆಯ ಮೇಲೆ ದಾಳಿ ಮಾಡಿದರೆ ದೇಶವನ್ನು ಒಡೆಯಬಹುದು ಎಂಬುದು ಅವರುಗಳ ಕನಸಾಗಿತ್ತು ಆದರೆ ಅದ್ಯಾವುದೂ ಸಾಧ್ಯವಾಗಲೇ ಇಲ್ಲ ಧರ್ಮ, ನಂಬಿಕೆ ಇವೆರಡು ಗಟ್ಟಿಯಾದಾಗ ನಮ್ಮ ದೇಶ ಕೂಡ ಗಟ್ಟಿಯಾಗಲು ಸಾಧ್ಯವಿದೆ ಆದ್ದರಿಂದ ನಾವು ಧಾರ್ಮಿಕ ನಂಬಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಅಗತ್ಯ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಮಿಷನ್‌ಮೂಲೆ, ಬೆಂಗಳೂರು ಗ್ಲೋಬಲ್ ಎಚ್.ಆರ್.ಡೈರೆಕ್ಟರ್ ಸಸ್‌ಮೊಸ್ ಕೋರಿಕ್ಕಾರು ರಾಜಶೇಖರ ರೈ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರೊಫೆಸರ್ ನೀಮಾ ಪ್ರಕಾಶ್ ಗೌಡ ನರಿಮೊಗ್ರು, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರುಗಳದ ಉಮೇಶ್ ಕುಮಾರ್ ಬರಮೇಲು ಮತ್ತು ವಿಶ್ವನಾಥ ರೈಕೋಡಿಬೈಲು ಉಪಸ್ಥಿತರಿದ್ದರು. ಉಷಾ ನಾರಾಯಣ್ ಪ್ರಾರ್ಥಿಸಿದರು. ಭಜನಾ ಮಂದಿರದ ಆಡಳಿತ ಸಮಿತಿ ಉಪಾಧ್ಯಕ್ಷ ರತನ್ ರೈ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮುಗೇರು ಸ್ವಾಗತಿಸಿದರು. ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ಅಂಕಿತ್ ರೈ ಕುಯ್ಯಾರು ವಂದಿಸಿದರು. ಬೆಳಿಗ್ಗೆ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ, ಹೂ ಕಟ್ಟುವ ಸ್ಪರ್ಧೆ, ಮಧ್ಯಾಹ್ನ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ರಸಪ್ರಶ್ನೆ ನಡೆಯಿತು. ರಾತ್ರಿ ಭಜನೆ, ಸ್ಥಳೀಯ ಮಕ್ಕಳಿಂದ ಕುಣಿತ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವ ಭಾರತಿ ಕಲಾವಿದರು ಕುಂಬ್ರ ಇವರಿಂದ ‘ ಒಂಜಿ ಕೋರಿದ ಕಥೆ’ ತುಳು ನಾಟಕ ಪ್ರದರ್ಶನಗೊಂಡಿತು.
ಆ.೨೮ ರಂದು ರಂದು ಬೆಳಿಗ್ಗೆ ಗಣಪತಿ ಹೋಮ, ವಾಗ್ದೇವಿ ಸಂಗೀತ ಶಾಲೆಯ ಗುರುಗಳಾದ ಸವಿತಾ ಪುತ್ತೂರು ಇವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀರಾ ಮೋಹನ್ ರೈ ಓಲೆಮುಂಡೋವುರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಸಭಾಧ್ಯಕ್ಷತೆ ವಹಿಸಿದ್ದ ಕಾರ್ಪಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲುರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿಯವರು ಮಾತನಾಡಿ, ಜೀವನದಲ್ಲಿ ನಾವು ಮಾಡುವ ಕೆಲಸ ಇದು ತಪ್ಪು ಎಂದು ನಮಗೆ ಯಾವಾಗ ಅರಿವಾಗುತ್ತದೋ ಆಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯವಿದೆ ಎಂದರು.
ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಎಂಬ ವಿಷಯದ ಮೇಲೆ ಧಾರ್ಮಿಕ ಚಿಂತಕ ಗಣರಾಜ ಭಟ್ ಕೆದಿಲರವರು ಉಪನ್ಯಾಸ ನೀಡುತ್ತಾ, ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿದಂತಹ ದೇಶವೊಂದಿದ್ದರೆ ಅದು ಭಾರತ ಆಗಿದೆ. ಸನಾತನ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಉಳಿದೆಲ್ಲವೂ ಪಂಥಗಳಾಗಿವೆ. ಇಂತಹ ದೇಶ ಮತ್ತು ಧರ್ಮದ ಮೇಲೆ ನಿಂತಿರುವ ನಮ್ಮದು ಮಾತೃ ಪ್ರಧಾನ ಸಂಸ್ಕಾರ ಮತ್ತು ಸಂಸ್ಕೃತಿ ಆಗಿದೆ ಎಂದರು. ಜನನಿಯಿಂದ ಪಾಠ ಕಲಿತ ಜನರು ಮಾತ್ರ ಧನ್ಯರು ಆದ್ದರಿಂದ ತಾಯಿಯಿಂದ ಮಾತ್ರ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಪಾಠ ಕಲಿಸಲು ಸಾಧ್ಯ. ನಾವೆಲ್ಲರೂ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಅರಿತುಕೊಂಡು ಜೀವನ ಮಾಡಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಮಾಡಾವು ಶ್ರೀ ದೇವಿ ಇಲೆಕ್ಟ್ರಿಕಲ್ಸ್ ಮಾಲಕ, ವಿದ್ಯುತ್ ಗುತ್ತಿಗೆದಾರ ಸುಬ್ರಾಯ ಗೌಡ, ಜಿಂದಾಲ್ ಸ್ಟೀಲ್ ಪ್ಲಾಂಟ್ ಬಳ್ಳಾರಿ ಇದರ ಗುತ್ತಿಗಾರ ನಾಗೇಶ ರೈ ಕನ್ನಡಮೂಲೆ, ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಅರುಣ್ ರೈ ಬಿಜಳ ಅಲ್ಲದೆ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಪ್ರ.ಕಾರ್ಯದರ್ಶಿ ಹರೀಶ್ ರೈ ಮುಗೇರು, ಗಣೇಶೋತ್ಸವ ಸಮಿತಿ ಸಂಚಾಲಕ ಅಂಕಿತ್ ರೈ ಕುಯ್ಯಾರು ಉಪಸ್ಥಿತರಿದ್ದರು. ಅನಿತಾ ಮತ್ತು ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿದರು. ಗಣೇಶೋತ್ಸವ ಸಮಿತಿ ಸಂಚಾಲಕರುಗಳಾದ ರತನ್ ರೈ ಕುಂಬ್ರ ಸ್ವಾಗತಿಸಿ, ರಾಜೇಶ್ ರೈ ಪರ್ಪುಂಜ ವಂದಿಸಿದರು. ಯುವರಾಜ್ ಪೂಂಜಾ ಮತ್ತು ದೇವಿ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಮೆಹಂದಿ, ಬರ್ತ್‌ಡೇ ಪಾರ್ಟಿಯಿಂದಲೇ ಕುಡಿತ ಆರಂಭವಾಗುತ್ತದೆ….!?
ನಾವು ಮಾಡುವ ಬರ್ತ್‌ಡೇ, ಮೆಹಂದಿ ಕಾರ್ಯಕ್ರಮಗಳಿಂದಲೇ ಈ ಕುಡಿತ ಅನ್ನೊ ದುರಭ್ಯಾಸ ಆರಂಭವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಡಿ.ಜೆ ಹಾಕಿಕೊಂಡು ಕುಣಿಬೇಕಾದರೆ ಕುಡಿತ ಬೇಕು, ಈ ಡಿ.ಜೆ ಹಾಕಿಕೊಂಡು ಕುಣಿಯುವುದು ನಮ್ಮ ಸಂಸ್ಕಾರವೂ ಅಲ್ಲ ಸಂಸ್ಕೃತಿಯೂ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಗಣರಾಜ ಭಟ್ ಕೆದಿಲ ಹೇಳಿದರು.
ಡಿ.ಜೆ ಹಾಕಿ ಕುಣಿದು ಬೇರೆಯವರ ಶಾಪಕ್ಕೆ ಗುರಿಯಾಗಬೇಡಿ…
ಒಂದು ಕಡೆಯಲ್ಲಿ 10 ದಿನದ ಹಸುಗೂಸೊಂದು ಸಾವನ್ನಪ್ಪುತ್ತದೆ ಕಾರಣ ಇಷ್ಟೇ ಮೇಲಿನ ಮನೆಯಲ್ಲಿ ಡಿ.ಜೆ ಹಾಕಿ ಕುಣಿಯುತ್ತಿದ್ದರೆ ಅದರ ಶಬ್ದಕ್ಕೆ ಮಗುವಿಗೆ ಹೃದಯಾಘಾತವಾಗಿ ಸಾಯುತ್ತದೆ. ಆಗ ತಾಯಿ ಮಗುವಿನ ಶವವಿಟ್ಟುಕೊಂಡು ಆ ಮನೆಯವರಿಗೆ ಶಾಪ ಹಾಕುತ್ತಾಳೆ ಇದು ನಾನು ಕಣ್ಣಾರೆ ಕಂಡ ದೃಶ್ಯ ಎಂದ ಗಣರಾಜ ಭಟ್ ಕೆದಿಲರವರು ನಾವು ಡಿ.ಜೆ ಹಾಕಿಕೊಂಡು ಕುಣಿಯವುದರಿಂದ ಅದೆಷ್ಟೋ ಮಂದಿಗೆ ತೊಂದರೆಯಾಗುತ್ತದೆ ಅವರ ಶಾಪ ನಮ್ಮ ಮೇಲೆ ಬೀಳುತ್ತದೆ. ಇಂತಹ ಶಾಪ ನಮಗೆ ಬೇಕೆ? ಎಂದ ಭಟ್‌ರವರು ಡಿ.ಜೆ ನಮ್ಮ ಸಂಸ್ಕಾರವೂ ಅಲ್ಲ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.