ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ನೇರ್ಲ ಇಚ್ಲಂಪಾಡಿ ಇವುಗಳ ಸಹಭಾಗಿತ್ವದಲ್ಲಿ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27ರಂದು ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಅರ್ಚಕ ಹರೀಶ್ ಭಟ್ ಕೋಡಿಂಬಾಳ ಇವರ ವೈದಿಕ ನೇತೃತ್ವದಲ್ಲಿ ನಡೆಯಿತು.

ಆ.26ರಂದು ಸಂಜೆ ಶ್ರೀ ಗಣಪತಿ ದೇವರ ವಿಗ್ರಹ ತರಲಾಯಿತು. ಆ.27ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಹೋಮ ನಡೆದು 7.40ರ ಸಿಂಹ ಲಗ್ನದ ಮುಹೂರ್ತದಲ್ಲಿ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ ಮಾಡಲಾಯಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆ
ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಧಾರ್ಮಿಕ ಉಪನ್ಯಾಸ ನೀಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅವಿನಾಶ್ ಕಟ್ಟತ್ತಂಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿದ್ದ ಇಚ್ಲಂಪಾಡಿ-ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಾಕರ ಹೆಗ್ಗಡೆ ಶುಭಹಾರೈಸಿದರು. ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಅಕ್ಷಯ್ ನೇರ್ಲ, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಇಚ್ಲಂಪಾಡಿ ಒಕ್ಕೂಟದ ಅಧ್ಯಕ್ಷ ಚೆನ್ನಪ್ಪ ಗೌಡ ಕುಡಾಲ, ಪದಕ ಕುರಿಯಾಳಕೊಪ್ಪ ಗೆಳೆಯರ ಬಳಗದ ಅಧ್ಯಕ್ಷ ಹುಕ್ರಪ್ಪ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಡೀಕಯ್ಯ ಪೊಜ್ಜಾಲು ಸುಬೇದಾರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಾರೀರಿಕ ನಿರ್ದೇಶಕ ಪುರುಷೋತ್ತಮ ಪೂಜಾರಿ ಬದನೆ ಅವರ ಪರವಾಗಿ ರೂಪೇಶ್ ಬದನೆ ಅವರು ಸನ್ಮಾನ ಸ್ವೀಕರಿಸಿದರು. ರಾಧಾಕೃಷ್ಣ ಕೆರ್ನಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯಕುಮಾರ್ ಹೊಸಮನೆ ವಂದಿಸಿದರು. ಶ್ರೀನಿವಾಸ ಪೂಜಾರಿ ನಿಡ್ಯಡ್ಕ ನಿರೂಪಿಸಿದರು. ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಇಚ್ಲಂಪಾಡಿ ನೇರ್ಲ ಸರಕಾರಿ ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಊರವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಶೋಭಾಯಾತ್ರೆ
ಸಂಜೆ ಶ್ರೀ ಮಹಾಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಚಿಣ್ಣು ಗೊಂಬೆ ಬಳಗ ವಿಟ್ಲ ಇವರಿಂದ ಗೊಂಬೆ ಕುಣಿತ, ಎಂಎಫ್‌ಸಿ ಇಚ್ಲಂಪಾಡಿ ಇವರಿಂದ ನಾಸಿಕ್ ಬ್ಯಾಂಡ್ ನಡೆಯಿತು. ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಗೌರವಾಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯತ್ತಡ್ಕ ಹಾಗೂ ಪದಾಧಿಕಾರಿಗಳು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿ ಸಂಚಾಲಕರು, ಸದಸ್ಯರು ಪಾಲ್ಗೊಂಡಿದ್ದರು.