ಮಕ್ಕಳ ಪೋಷಕರು, ಗ್ರಾಮಸ್ಥರಿಂದ ಸಭೆ – ಸಾಂಕೇತಿಕ ಪ್ರತಿಭಟನೆ
ಪುತ್ತೂರು: ದೈಹಿಕ ಶಿಕ್ಷಣ ಶಿಕ್ಷಕರ ಸಹಿತ ಇಬ್ಬರು ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಶಿಕ್ಷಣ ಇಲಾಖೆಯು ಅವರನ್ನು ವರ್ಗಾವಣೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು, ಈ ಕ್ರಮವನ್ನು ಖಂಡಿಸಿರುವ ಶಾಲಾ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಸಭೆ ನಡೆಸಿ ಬಳಿಕ ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆ ಆ.28ರಂದು ಕೊಡಿಪಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದಿದೆ.
ಕೊಡಿಪಾಡಿ ಶಾಲೆಯಲ್ಲಿ ಒಂದನೇ ತರಗತಿಯಿದ 8ನೇ ತರಗತಿಯ ವರೆಗೆ ಸುಮಾರು 76ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಒಟ್ಟು ಐವರು ಶಿಕ್ಷಕರಿದ್ದಾರೆ. ಈ ಪೈಕಿ ಹೆಚ್ಚುವರಿ ಎಂಬಂತೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ ಹಾಗೂ ಸಹಶಿಕ್ಷಕ ಗಣೇಶ್ ರವರ ಹೆಸರನ್ನು ಶಿಕ್ಷಣ ಇಲಾಖೆಯು ವರ್ಗಾವಣೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಆದರೆ ಶತಮಾನ ಕಂಡ ಈ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸಹಿತ ಪ್ರತೀ ತರಗತಿಗೆ ಓರ್ವ ಶಿಕ್ಷಕರನ್ನು ನೀಡಬೇಕು ಮಾತ್ರವಲ್ಲದೆ ಮುಂದಿನ ವರುಷದಿಂದ ಇಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿ ಮಕ್ಕಳ ಸಂಖ್ಯೆ ಯನ್ನು ಹೆಚ್ಚಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ವರ್ಗಾವಣೆ ಪಟ್ಟಿಯಲ್ಲಿ ಶಿಕ್ಷಣ ಇಲಾಖೆಯು ಸೇರ್ಪಡೆಗೊಳಿಸಿರುವ ಶಿಕ್ಷಕರ ಹೆಸರನ್ನು ಕೈಬಿಡಬೇಕಂದು ಮಕ್ಕಳ ಪೋಷಕರ ಸಹಿತ ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೊಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಪ್ಪ ಪೂಜಾರಿ ಓಜಾಲ, ಸದಸ್ಯರಾದ ಗಿರಿಧರ ಗೌಡ ಗೋಮುಖ, ಮಾಜಿ ಎಸ್. ಡಿ. ಎಮ್. ಸಿ. ಅಧ್ಯಕ್ಷರಾದ ರಾಮ ಜೋಯಿಸ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ದಿನೇಶ್ ಗೌಡ ಗೋಮುಖ. ಉಪಾಧ್ಯಕ್ಷರು ಸಫಾನ. ಸದಸ್ಯರಾದ ಅಬ್ದುಲ್ ರಹಿಮಾನ್ ಮಾರಗುರಿ. ಪ್ರಮುಖರಾದ ಮಹಾಬಲ ಗೌಡ ಗಡಿಮಾರು, ಅಬ್ದುಲ್ ಖಾದರ್ ಆನಾಜೆ, ಅಬ್ದುಲ್ ರಹಿಮಾನ್ ಆನಾಜೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿರಿದ್ದರು.