ಗಣೇಶೋತ್ಸವದಿಂದ ಐಕ್ಯಮತ್ಯ- ನಳಿನ್ ಕುಮಾರ್ ಕಟೀಲ
ಪುತ್ತೂರು: 43 ವರ್ಷಗಳ ಹಿಂದೆ ಸವಣೂರಿನಲ್ಲಿ ಪ್ರಾರಂಭಗೊಂಡ, ಗಣೇಶೋತ್ಸವ ಈ ಭಾಗದಲ್ಲಿ ಜನರನ್ನು ಒಗ್ಗೂಡಿಸಿ, ಎಲ್ಲರಲ್ಲೂ ಐಕ್ಯಮತ್ಯವನ್ನು ಬೆಳೆಸಿದ ಪರಿಣಾಮ, ಸವಣೂರು ಪ್ರಗತಿಯನ್ನು ಕಂಡಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಆ. 27ರಂದು ಸವಣೂರಿನಲ್ಲಿ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಬೆಳ್ಳಿಕಿರೀಟ ಸಮರ್ಪಣಾಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಅನ್ನಪೂರ್ಣ ಅನ್ನಛತ್ರವನ್ನು ಲೋಕರ್ಪಣೆಗೊಳಿಸಿ, ಮಾತನಾಡಿ ಸವಣೂರು ಈ ಹಿಂದೆ ನಾಲ್ಕು ಐದು ಅಂಗಡಿಗಳನ್ನು ಹೊಂದಿದ್ದ ಸಣ್ಣ ಊರಾಗಿತ್ತು, ಇಲ್ಲಿ ಸವಣೂರು ಸೀತಾರಾಮ ರೈಯವರು 25 ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಗಳನ್ನು, ವಾಣಿಜ್ಯ ಮಳಿಗೆಯನ್ನು ಸ್ಥಾಪಿಸಿ, ಸವಣೂರಿನ ಅಭಿವೃದ್ದಿಗೆ ಸಹಕಾರಿಯಾದರು, ವ್ಯಾಪಾರದಲ್ಲಿ ಯಶಸ್ಸು ಕಂಡ ಸುಂದರ ರೈಯವರು ಇಂದು ಗಣಪನಿಗೆ ಬೆಳ್ಳಿಯ ಕಿರೀಟವನ್ನು ಸಮರ್ಪಣೆ ಮಾಡುವ ಮೂಲಕ, ಊರಿಗೆ ಮಾದರಿಯಾಗಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು- ಸೀತಾರಾಮ ರೈ
ಸವಣೂರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ 43 ವರ್ಷಗಳ ಹಿಂದೆ ಕೆ.ಎಸ್.ಎನ್.ನಿಡ್ವಣ್ಣಾಯ ಮತ್ತು ಚಂದ್ರಹಾಸ್ ರೈ ಕೊಲರವರು ಸವಣೂರಿನಲ್ಲಿ ಗಣೇಶೋತ್ಸವವನ್ನು ಪ್ರಾರಂಭಮಾಡಿದರು. ಸುಂದರವಾದ ವಿನಾಯಕ ಸಭಾಭವನವನ್ನು ನಿರ್ಮಿಸಲಾಗಿದೆ. ಇದೀಗ ಭೋಜನ ಶಾಲೆಯನ್ನು ಮಾಡಲಾಗಿದೆ. ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ, ಉದ್ಯಮಿ ಸವಣೂರು ಸುಂದರ ರೈ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಾಲೂಕು ಕೃಷಿಕ ಸಮಾeದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾದ ಅಶ್ವಿನ್ ಶೆಟ್ಟಿ, ಗಂಗಾಧರ್ ಪೆರಿಯಡ್ಕ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಬಾಲಚಂದ್ರ ರೈ ಕೆರೆಕ್ಕೋಡಿ, ಕೋಶಾಧಿಕಾರಿ ರಾಮಕೃಷ್ಣ ಪ್ರಭು ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್ ಬಲ್ಯಾಯ ವಂದಿಸಿದರು. ಪೂರ್ವಹ್ನ ಶಿವಕುಮಾರ್ ಭಟ್ ಎಡಮಂಗಲ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ಜರಗಿತು. ಗಣೇಶ ವಿಂಬ ಪ್ರತಿಷ್ಠಾಪನೆ ಮತ್ತು ಬೆಳ್ಳಿ ಕಿರೀಟ ಸಮರ್ಪಣೆ ಹಾಗೂ 12 ತೆಂಗಿನಕಾಯಿಯ ಗಣಪತಿ ಹೋಮ ಜರಗಿತು. ಮಧ್ಯಾಹ್ನ ಅನ್ನಸಂತರ್ಪಣೇ, ಸಂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಅಧಿಕಾರ ಇಲ್ಲದಿದ್ದರೂ, ನಿಮ್ಮ ಬೆಂಬಲ ಕಂಡು ಖುಷಿಯಾಗಿದೆ.ನನಗೆ ಈಗ ಯಾವುದೇ ಅಧಿಕಾರದ ಹುದ್ದೆ ಇಲ್ಲ, ಆದರೂ ಸವಣೂರಿನ ಜನರು ನನ್ನನು ಅಕ್ಕರೆಯಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ
– ನಳಿನ್ ಕುಮಾರ್ ಕಟೀಲ್
ಮಾಜಿ ಸಂಸದರು
ಸುಂದರ ರೈಯವರಿಂದ1.50 ಲಕ್ಷ ರೂ ವೆಚ್ಚದಲ್ಲಿ ಬೆಳ್ಳಿಯ ಕಿರೀಟ
ಉದ್ಯಮಿ ಸವಣೂರು ಸುಂದರ ರೈಯವರು ಸವಣೂರಿನ ಗಣಪತಿ ದೇವರಿಗೆ 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳ್ಳಿಯ ಕಿರೀಟವನ್ನು ಸಮರ್ಪಣೆ ಮಾಡಿದ್ದಾರೆ.
