ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ನಾದಸ್ವರ, ಸ್ಯಾಕ್ಸೋಫೋನ್ ವಾದಕ ಸುರೇಂದ್ರ ದೇವಾಡಿಗರಿಗೆ ಬೇಕು ನೆರವಿನ ಹಸ್ತ

0

ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನದ ಕಾರ್ಯಕ್ರಮಗಳಲ್ಲಿ, ಇತರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾದಸ್ವರ, ಸ್ಯಾಕ್ಸೋಫೋನ್, ಟ್ರಂಪೇಟ್ ಅನ್ನು ಸುಶ್ರಾವ್ಯವಾಗಿ ನುಡಿಸುತ್ತಿದ್ದು ಇದೀಗ ಕಿಡ್ನಿ ವೈಫಲ್ಯಕ್ಕೊಳಗಾಗಿ ಡಯಾಲಿಸಿಸ್ ಗೆ ಒಳಗಾಗಿರುವ ಸುರೇಂದ್ರ ದೇವಾಡಿಗರವರ ವೈದ್ಯಕೀಯ ಚಿಕಿತ್ಸೆಗೆ ಹೃದಯವಂತ ದಾನಿಗಳಿಂದ ಬೇಕಾಗಿದೆ ನೆರವಿನ ಹಸ್ತ.


ವಾರಕ್ಕೆ 3 ಬಾರಿ ಡಯಾಲಿಸಿಸ್:
ಕೆಮ್ಮಾಯಿ ಮೂಡಾಯೂರುಗುತ್ತು ಆರಿಗೋ ನಿವಾಸಿಯಾಗಿರುವ ಸುರೇಂದ್ರ ದೇವಾಡಿಗರವರು ತನ್ನ ಪತ್ನಿ ಮೋಹಿನಿಯವರೊಂದಿಗೆ ಜೀವನ ಸಾಗಿಸುತ್ತಿದ್ದು ದಂಪತಿಗೆ ಮಕ್ಕಳಿಲ್ಲ ಎಂಬ ಕೊರಗು ಮತ್ತೊಂದೆಡೆ. ಮನೆಯಂಗಳದಲ್ಲಿ ಸಣ್ಣದಾದ ಹೊಸಮ್ಮ ಸ್ಟೋರ್ ಅಂಗಡಿಯನ್ನು ಪತ್ನಿ ಮೋಹಿನಿಯವರು ಮುನ್ನೆಡೆಸುತ್ತಿದ್ದು ತಮ್ಮ ದಿನನಿತ್ಯದ ಖರ್ಚಿಗೆ ಕೊಂಚ ಮಟ್ಟಿಗೆ ಆಸರೆಯಾಗಿದೆ. ಕಳೆದ ಐದು ವರ್ಷಗಳಿಂದ ಸುರೇಂದ್ರ ದೇವಾಡಿಗರವರು ಕಿಡ್ನಿ ವೈಫಲ್ಯತೆಗೆ ಒಳಗಾಗಿದ್ದು, ಜೊತೆಗೆ ಸರಿಯಾಗಿ ಕಣ್ಣು ಕಾಣದಿರುವುದು ಇವರಿಗೆ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಇವರನ್ನು ಕರೆದೊಯ್ಯಲು ಆಟೋ ರಿಕ್ಷಾ ಬಾಡಿಗೆ, ಔಷಧ ವೆಚ್ಚ, ತಿಂಗಳ ಮನೆ ಖರ್ಚು ಹೊಂದಿಸಲು ಕುಟುಂಬಕ್ಕೆ ಈ ಸಣ್ಣ ಅಂಗಡಿಯಿಂದ ಅಸಾಧ್ಯವೆನಿಸಿದೆ.

ಕೊಡುಗೈ ದಾನಿಗಳಿಂದ ಬೇಕಾಗಿದೆ ನೆರವು:
ಕಿಡ್ನಿ ರೋಗದಿಂದ ಬಳಲುತ್ತಿರುವ ಸುರೇಂದ್ರ ದೇವಾಡಿಗರವರು ತನ್ನ ವೃತ್ತಿಯ ಜೊತೆಗೆ ಬಲ್ನಾಡು ಉಳ್ಳಾಲ್ತಿ ದೇವಸ್ಥಾನ ಹಾಗೂ ಇತರ ದೇವಸ್ಥಾನಗಳಲ್ಲಿ ಚಾಕರಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಕುಟುಂಬ ಸುರೇಂದ್ರ ದೇವಾಡಿಗರವರ ಆದಾಯದಿಂದ ಸಾಧಾರಣ ಮಟ್ಟಿಗೆ ನಡೆಯುತ್ತಿದ್ದರೂ ಇದೀಗ ಇವರ ಅನಾರೋಗ್ಯ ಮತ್ತಷ್ಟು ಕಂಗೆಡುವಂತೆ ಮಾಡಿದೆ. ಸ್ಥಳೀಯರಾದ ನರೇಂದ್ರ ಪಡಿವಾಳ್, ಸಂಕಪ್ಪ ರೈಯವರು ಈ ಕುಟುಂಬದ ನೆರವಿಗೆ ನಿಂತಿದ್ದು ಇದೀಗ ಸಂಘ-ಸಂಸ್ಥೆಗಳು, ಕೊಡುಗೈ ದಾನಿಗಳು ಮುಂದೆ ಬಂದು ನೆರವಿನ ಹಸ್ತ ಚಾಚಬೇಕಾಗಿದೆ.

ಅಶಕ್ತ ಕಲಾವಿದರಿಗೆ ಪಟ್ಲ ಫೌಂಡೇಶನ್ ನೆರವು:
ಈ ಸಂದರ್ಭದಲ್ಲಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಕಾರ್ಯದರ್ಶಿ ಚಂದ್ರಹಾಸ ರೈ ಬಿ.ರವರು, ಜಾನಪದ ಕ್ಷೇತ್ರದಲ್ಲಿ ವಾದ್ಯ ಸೇವೆ ಮಾಡುತ್ತಿರುವ ಸುರೇಂದ್ರ ದೇವಾಡಿಗರವರ ಅನಾರೋಗ್ಯದ ಕುರಿತು ಯಕ್ಷಧ್ರುವ ತಾಲೂಕು ಘಟಕಕ್ಕೆ ಮನವಿ ಬಂದಿದ್ದು, ಕೂಡಲೇ ಮಾತೃ ಘಟಕದೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾದೆವು. ಶೀಘ್ರವೇ ಸುರೇಂದ್ರ ದೇವಾಡಿಗರವರ ಆರೋಗ್ಯ ಸುಧಾರಿಸಲಿ ಎಂಬುದೇ ಹಾರೈಕೆ. ಪಟ್ಲ ಫೌಂಡೇಶನ್ ಅಶಕ್ತ ಕಲಾವಿದರಿಗೆ ವರ್ಷಕ್ಕೆ ಕೋಟಿಯಷ್ಟು ಮೊತ್ತವನ್ನು ವ್ಯಯಿಸುತ್ತಿರುವುದು ಅಭಿಮಾನದ ಸಂಗತಿಯಾಗಿದ್ದು ಜೊತೆಗೆ ಯಕ್ಷಕಲೆ ಶಿಕ್ಷಣಕ್ಕೂ ನೆರವಾಗುತ್ತಿದೆ ಎಂದರು.

ಅನಾರೋಗ್ಯದಿಂದ ಬಳಲುತ್ತಿರುವ ಸುರೇಂದ್ರ ದೇವಾಡಿಗರವರ ಚಿಕಿತ್ಸೆಗೆ ನೆರವಾಗುವವರು ಸುರೇಂದ್ರ ದೇವಾಡಿಗರವರ ಸಹೋದರನ ಪುತ್ರ ವೇಣುಗೋಪಾಲ ದೇವಾಡಿಗರವರ 8762211034 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸುರೇಂದ್ರ ದೇವಾಡಿಗರವರ ಪತ್ನಿ ಮೋಹಿನಿರವರು ವಿನಂತಿಸಿದ್ದಾರೆ.

ಪಟ್ಲ ಫೌಂಡೇಶನ್ ನಿಂದ ರೂ.25 ಸಾವಿರ..
ಮೂಡಾಯೂರುಗುತ್ತು ಸ್ಥಳೀಯರಾದ ನರೇಂದ್ರ ಪಡಿವಾಳ್ ಹಾಗೂ ಸಂಕಪ್ಪ ರೈಯವರು ಸುರೇಂದ್ರ ದೇವಾಡಿಗರ ಆರೋಗ್ಯದ ಕುರಿತು ಯಕ್ಷಧ್ರುವ ಪಟ್ಲ ಫೌಂಡೇಶನ್ ತಾ|ಘಟಕದ ಅಧ್ಯಕ್ಷ ಕರುಣಾಕರ್ ರೈ, ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿರವರ ಗಮನಕ್ಕೆ ತಂದಿದ್ದರು. ಕೂಡಲೇ ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾತೃ ಘಟಕದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿರವರ ಗಮನಕ್ಕೆ ತಂದು ಕೂಡಲೇ ರೂ.25 ಸಾವಿರ ನೀಡುವುದೆಂದು ತೀರ್ಮಾನಿಸಿ ಯಕ್ಷಧ್ರುವ ತಾಲೂಕು ಘಟಕದ ಅಧ್ಯಕ್ಷ ಕರುಣಾಕರ್ ರೈ, ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಪ್ರೊ•ದತ್ತಾತ್ರೇಯ ರಾವ್, ನರೇಂದ್ರ ಪಡಿವಾಳ್, ಸಂಕಪ್ಪ ರೈರವರು ಮೊತ್ತವನ್ನು ಸುರೇಂದ್ರ ದೇವಾಡಿಗರವರ ಪತ್ನಿ ಮೋಹಿನಿರವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here