ಜಾತಿ, ರಾಜಕೀಯದಿಂದ ಮುಕ್ತವಾದಾಗ ಹಿಂದೂ ಸಮಾಜ ಬಲಾಢ್ಯ: ಡಾ. ರವೀಶ್ ಪಡುಮಲೆ
ಉಪ್ಪಿನಂಗಡಿ: ಜಾತಿ ಮತ್ತು ರಾಜಕೀಯದಿಂದ ಧಾರ್ಮಿಕ ಶೃದ್ಧಾ ಕೇಂದ್ರಗಳು ಮುಕ್ತವಾಗಬೇಕು. ಶೃದ್ಧಾ ಕೇಂದ್ರಗಳಿಗೆ ಬರುವ ನಮ್ಮ ಮಾನಸಿಕತೆಯೂ ಜಾತಿ ಮತ್ತು ರಾಜಕೀಯದಿಂದ ಹೊರಗಿರಬೇಕು ಆಗ ಮಾತ್ರ ಹಿಂದೂ ಸಮಾಜ ಬಲಾಢ್ಯವಾಗಲು ಸಾಧ್ಯ ಎಂದು ಉಜಿರೆ ಶ್ರೀ ಧರ್ಮಸ್ಥಳ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ತಿಳಿಸಿದರು.
ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 49ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಎರಡನೇ ದಿನವಾದ ಆ.28ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು.
ಎಲ್ಲಾ ಧರ್ಮಗಳ ಮೂಲ ಬೇರು ಸನಾತನ ಹಿಂದೂ ಧರ್ಮವಾಗಿದ್ದು, ಬದುಕಿನ ಅರ್ಥ, ಬದುಕಲು ಬೇಕಾದ ಆಚಾರ, ವಿಚಾರ, ಸಂಸ್ಕೃತಿ ಹಿಂದೂ ಧರ್ಮದಲ್ಲಿದೆ. ಆದರೆ ಜಾತಿ ಮತ್ತು ರಾಜಕೀಯವನ್ನು ಬದಿಗಿಟ್ಟು ನಾವೆಲ್ಲಾ ಒಂದೇ ತಾಯಿಯ ಮಕ್ಕಳೆಂಬಂತೆ ಬದುಕುವ ಮಾನಸಿಕತೆಯು ನಮ್ಮಲ್ಲಿ ಬರಬೇಕಿದೆ. ಇಂತಹ ಸಾಮರಸ್ಯದ ಬದುಕು ನಮ್ಮದಾದಾಗ ಹಿಂದೂ ಸಮಾಜ ಸದೃಢವಾಗುವುದಲ್ಲದೆ, ಭಾರತವು ವಿಶ್ವಗುರುವಾಗಲಿದೆ. ತುಳುನಾಡಿನಲ್ಲಿ ನಮ್ಮ ಹಿರಿಯರು ಗಣಪತಿಯನ್ನು ಭಾಮಕುಮಾರ ಎಂದು ಆರಾಧಿಸಿಕೊಂಡು ಬರುತ್ತಿದ್ದರು. ಇದಕ್ಕೆ ಸಂಬಂಧಿಸಿ ಸಂಧಿ ಪಾಡ್ದನಗಳು ಇದ್ದವು. ಗಣಪತಿ ಕೋಲದ ಕಟ್ಟು ಕಟ್ಟಳೆಯೂ ಇದೆ ಎಂದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ಮಾತನಾಡಿ, ಅಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಮನೆಯೊಳಗೆ ಪೂಜೆಗೊಳ್ಳುತ್ತಿದ್ದ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಆರಾಧಿಸಿದರೆ, ಇಂದು ಇದು ನಮ್ಮ ಹಿಂದೂ ಸಮಾಜದ ಒಗ್ಗಟ್ಟಿಗೆ ಕಾರಣವಾಗಿದೆ. ಗಣೇಶೋತ್ಸವದ ಮೂಲಕ ಧರ್ಮ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಉಳಿಸುವ ಕಾರ್ಯವಾಗುತ್ತಿದೆ. ನಮಗೆ ದೇವರ ಭಕ್ತಿಯೊಂದಿಗೆ ದೇಶ ಭಕ್ತಿಯೂ ಇರಬೇಕು ಎಂದರು.
ಟೀಮ್ ದಕ್ಷಿಣ ಕಾಶಿಯ ಅಧ್ಯಕ್ಷರಾದ ಪ್ರಸನ್ನ ಪೆರಿಯಡ್ಕ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಪಡೆದು ರಾಜ್ಯದಲ್ಲಿ 5ನೇ ರ್‍ಯಾಂಕ್ ಪಡೆದ ಉಪ್ಪಿನಂಗಡಿಯ ನಿಹಾಲ್ ಎಚ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ವಿಶ್ವಹಿಂದೂ ಪರಿಷದ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷರಾದ ಸುದರ್ಶನ್ ಎಂ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ಧನ್ಯಕುಮಾರ್ ರೈ, ಕರುಣಾಕರ ಸುವರ್ಣ, ವಿದ್ಯಾಧರ ಜೈನ್, ಕೃಷ್ಣ ಕೋಟೆ, ಜಗದೀಶ ಶೆಟ್ಟಿ ಕೆ., ಶೀಲಾ ಶೆಟ್ಟಿ, ಉಷಾ ಮುಳಿಯ, ಸುರೇಶ್ ಅತ್ರೆಮಜಲು, ಗೋಪಾಲ ಹೆಗ್ಡೆ, ಪುರುಷೋತ್ತಮ ಮುಂಗ್ಲಿಮನೆ, ವಿಜಯಕುಮಾರ್ ಕಲ್ಲಳಿಕೆ, ವಿಶ್ವನಾಥ ಶೆಟ್ಟಿ ಕಂಗ್ವೆ, ರಾಜಗೋಪಾಲ ಭಟ್ ಕೈಲಾರ್, ಸ್ವರ್ಣೇಶ ಗಾಣಿಗ, ಸಮಿತಿಯ ಕೋಶಾಧಿಕಾರಿ ಚಂದ್ರಹಾಸ್ ಹೆಗ್ಡೆ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಶೆಟ್ಟಿ ಕೊಲ, ಸಮಿತಿಯ ಶಶಿಧರ ಶೆಟ್ಟಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಹರಿರಾಮಚಂದ್ರ, ಗಂಗಾಧರ ಟೈಲರಚ್, ಹರೀಶ್ ನಾಯಕ್ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ವಂದಿಸಿದರು. ಪತ್ರಕರ್ತ ಉದಯಕುಮಾರ್ ಯು.ಎಲ್. ಕಾರ್ಯಕ್ರಮ ನಿರೂಪಿಸಿದರು.