1971ರ ಭಾರತ-ಪಾಕಿಸ್ತಾನ ಸಮರದ ಅನುಭವ : ನಿವೃತ್ತ ಸೇನಾಧಿಕಾರಿ ಮನದ ಮಾತು

0

ನಮ್ಮ ಭಾರತ ದೇಶ ಸ್ವಾತಂತ್ರ್ಯದ ಹೊಸ್ತಿಲಿನಲ್ಲಿರುವ ಸಮಯ 7 -8-1947ರಂದು ನನ್ನ ಜನನ. ಎರಡನೇ ಮಹಾಯುದ್ಧದ ಸಮಯದಲ್ಲಿ ಸೇನೆಗೆ ಸೇರಿ ಸೇವೆಯಲ್ಲಿದ್ದ ನನ್ನ ಸೋದರ ಮಾವನನ್ನು ನೋಡುತ್ತ ಅವರಂತೆ ಮುಂದಕ್ಕೆ ಸೇನೆಗೆ ಸೇರಬೇಕೆಂಬ ಹಂಬಲದೊಂದಿಗೆ ಬೆಳೆದವ. ಪ್ರಯತ್ನದ ಫಲವಾಗಿ 06 -09-1965 ಸೇನೆಗೆ ಸೇರ್ಪಡೆಯಾಗಿ Corps of Engineers(Madras Engineer Group) ನಲ್ಲಿ ತರಬೇತಿಗಾಗಿ ರಹದಾರಿಯೊಂದಿಗೆ ಹಾಜರು. ಎರಡು ವರ್ಷದ ತರಬೇತಿ ಮುಗಿಸಿ 1967 ಸಪ್ಟೆಂಬರ್ ತಿಂಗಳು ಪೂರ್ವೊತ್ತರ NEFA(North East Frontier Agency) ಈಗಿನ ಅರುಣಾಚಲ ಪ್ರದೇಶಕ್ಕೆ  ಮೊದಲ ವರ್ಗಾವಣೆ. ಮುಂದಕ್ಕೆ ಮೂರು ವರ್ಷಗಳ ಸೇವೆಯ ನಂತರ ಮೊದಲ ಮುಂಬಡ್ತಿಯೊಂದಿಗೆ HQ 8 Engineer Regiment ಗೆ ವರ್ಗಾವಣೆಯೊಂದಿಗೆ 1975 ರ ವರೆಗೆ ನಿರಂತರ ಸೇವೆಯಲ್ಲಿರುವ ಸಮಯದಲ್ಲಿ  1971ರ ಸಮರದಲ್ಲಿ  ರೆಜಿಮೆಂಟಿನೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ.

ಅದು 1971ರ ಮಧ್ಯಭಾಗ. ಆಗ ತಾನೇ ನಮ್ಮ ರೆಜಿಮೆಂಟು ಅಸ್ಸಾಮಿನ ತಿನ್ಸುಕಿಯಾದಿಂದ ಸ್ಥಳಾಂತರಗೊಂಡು ಡೆಹ್ರಾಡೂನಿನ ಹತ್ತಿರ ಕ್ಲೆಮೆಂಟ್ ಟೌನಿನಲ್ಲಿ ನೆಲೆಯೂರಿ ಆರೆಂಟು ತಿಂಗಳಾಗಿತ್ತಷ್ಟೆ.  ಆಗಿನ ಪೂರ್ವ ಪಾಕಿಸ್ತಾನ(ಈಗಿನ ಬಾಂಗ್ಲಾದೇಶ) ಹಾಗೂ ಈಗಿನ ಪಾಕಿಸ್ತಾನದ ಆಂತರಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ, ನಮ್ಮ ದೇಶದ ಮಧ್ಯ ಪ್ರವೇಶದ ಆವಶ್ಯಕತೆ ತಲೆದೋರಿತ್ತು.  ಈ ಸಮಯದಲ್ಲಿ ನಮ್ಮ ರೆಜಿಮೆಂಟು 14ನೇ ಇನ್ಪೆಂಟರಿ ಡಿವಿಷನ್ನಿನ ಇಂಜಿನೀಯರ್ ಸಪೋರ್ಟಿನ ಒಂದು ಭಾಗವಾಗಿ ಯುದ್ಧ ತಯಾರಿಯ ಕೆಲಸಗಳನ್ನು ನೆರವೇರಿಸುತ್ತಿತ್ತು. ಈ ಸಮಯದಲ್ಲಿ  ನಾನು ರೆಜಿಮೆಂಟಿನ ಕಮಾಂಡಿಂಗ್ ಆಫೀಸರುಗಳ ಗುಪ್ತ ವಿಚಾರಗಳ ಆಫೀಸು ಕೆಲಸಗಳನ್ನು ನಿಭಾಯಿಸುವ ಜವಾಬ್ದಾರಿಯಿತ್ತು. ಅದಕ್ಕಾಗಿ ನನ್ನ ಪೂರ್ವಾಪರದ ವಿಚಾರ ತಿಳಿಯುವುದಕ್ಕಾಗಿ ಪೋಲಿಸ್ ವೆರಿಪಿಕೇಶನ್ ನಡೆಸಿ ನನ್ನನ್ನು ನಿಯೋಜಿಸಲಾಗಿತ್ತು.  ಯುದ್ಧ ಸಮಯದ ಸ್ಟಾಂಡರ್ಡ್ ಅಪರೇಟಿಂಗ್ ಪ್ರೊಸೀಜರ್(SOP) ಪ್ರಕಾರ ಯೋಜನೆ ನಡೆಯುತ್ತಿತ್ತು. ಯುದ್ಧಕ್ಕೆ ಪೂರ್ವ ತಯಾರಿ ಕೆಲಸಗಳಿಗೆ ಮುಂಚಿತವಾಗಿ ನಮ್ಮ ಇಂಜಿನಿಯರ್ ಕಂಪನಿಗಳು ನಿಗದಿತ ಸ್ಥಳಗಳಿಗೆ ತಲುಪಿ ಭರದ ಸಿದ್ಧತೆ ನಡೆಯುತಿತ್ತು.  ನಮ್ಮ ರೆಜಿಮೆಂಟಿನ ಯೋಧರನ್ನು ಮೆಡಿಕಲ್ ಕಂಡೀಶನಿನ ಅನುಗುಣವಾಗಿ  ಪೋರ್ರ್ವಡ್ ,  ಕಾನ್ಸಂಟ್ರೇಸನ್ ಹಾಗೂ ಬೇಸ್ ಎಂಬ ಮೂರು ಭಾಗಗಳಾಗಿ ವಿಂಗಡಿಸಿ ನಿಯೋಜಿಸಲಾಗಿತ್ತು. ಕಮಾಂಡಿಂಗ್ ಆಫೀಸರು,  ಆಫೀಸು ಎಲ್ಲ ಕಾನ್ಸಂಟ್ರೇಸನ್ ಏರಿಯಾ ಬಾರ್ಡರ್ ನ ಕೆಲವೇ ಕಿ.ಮಿ ಅಂತರದಲ್ಲಿ  ಕೆಲಸ ನಿರ್ವಹಿಸುವ ವ್ಯವಸ್ಥೆ  ರೂಪಿಸಲಾಗಿತ್ತು.  ನಿಗದಿಯಾಗಿದ್ದ ದಿನ  17-10-1971 ರಂದು ನಮ್ಮ ವಾಹನಗಳ ಕಾನ್ವಾಯಿ(Convoy) ಮೂಲಕ ಕ್ಲಮೆಂಟ್ ಟೌನ್ ನಿಂದ ಹೊರಟು ರಾತ್ರಿ ಮಾತ್ರ ಪ್ರಯಾಣ ಬೆಳೆಸಿ ಮರುದಿನ ಬೆಳಗ್ಗೆ ಅಂಬಾಲ ತಲುಪಿ, ಹಗಲು ಹೊತ್ತು ವಿಶ್ರಾಂತಿ ಪಡೆದು ರಾತ್ರಿ ಮರು ಪ್ರಯಾಣ ಮುಂದುವರಿಸಿ ಬೆಳಗ್ಗಿನ ಜಾವ ಫರೀದ್ ಕೋಟ್ ಮಹಾರಾಜರ ಕಾಡು ಪ್ರದೇಶಕ್ಕೆ ತಲುಪಿ ಬಂಕರುಗಳನ್ನು ತೋಡಿ ಅದರೊಳಗೆ ಆಫೀಸು, ವಾಸಸ್ಥಳಗಳನ್ನು ನಿರ್ಮಾಣ ಮಾಡಿ ಅವೆಲ್ಲವನ್ನೂ ಮರೆಮಾಡಿ,  ಎಯರ್ ರೈಡ್ ಸಮಯದಲ್ಲಿ ಅಡಗಿ ಕೂರಲು ಟ್ರಂಚ್ ಗಳನ್ನು ನಿರ್ಮಿಸಿ ತಮ್ಮ ಮುಂದಿನ ಜವಾಬ್ಧಾರಿ ಬಗ್ಗೆ  ಕರ್ತವ್ಯ ನಿರ್ವಹಿಸಲು ಪ್ರಾರಂಭ.

ಮುಂದಿನ ಸರಿಸುಮಾರು ಒಂದೂವರೆ ತಿಂಗಳು ಗೂಢಾಚಾರಿಕೆ ಕೆಲಸ ಎರಡೂ ಕಡೆಯಿಂದ ನಡೆಯುತಿತ್ತು. ಈ ಕೆಲಸದಲ್ಲಿ ತೊಡಗಿದ್ದ  ಇಬ್ಬರು ಪಾಕ್ ಸೈನಿಕರನ್ನು ಸೆರೆ ಹಿಡಿದು ನಮ್ಮ ಹತ್ತಿರದ ಡಿವಿಜನ್ HQ ಗೆ ತಂದು ಟೆಂಟ್ ನಲ್ಲಿ ಇರಿಸಿ ಹಿಂಬದಿಗೆ ಕೈಗಳನ್ನು ಕಟ್ಟಿ ವಿಚಾರಣೆ ನಡೆಸುವಾಗ ಅದನ್ನು ನೋಡಿದ ನಮಗೆ ನಮ್ಮ ಸೈನಿಕರು ಕೈದಿಗಳಾದಾಗ ಅವರು ಕೂಡಾ ಈ ಪರಿಸ್ಥಿತಿ ಅನುಭವಿಸಬೇಕಲ್ಲಾ ಎಂಬುದಾಗಿ ನೆನೆದು ವಿಚಲಿತರಾದೆವು. ಈ ಸಮಯದಲ್ಲಿ ಒಮ್ಮೊಮ್ಮೆ  ವೈರಿ ಪಡೆಯ ವಿಮಾನಗಳು ಗೋಚರವಾಗಿ ಸೈರನ್ ಮೊಳಗಿದಾಗ ನಮ್ಮ ನಮ್ಮ ಆಯುಧಗಳೊಂದಿಗೆ ಓಡಿ ಹೋಗಿ ಟ್ರಂಚ್ ನಲ್ಲಿ  ಕೂತು ಮುಂದಿನ ಸೈರನ್ ಗೆ ಕಾಯುತಿದ್ದೆವು. ನಮ್ಮ ರೆಜಿಮೆಂಟಿನ ಕಂಪನಿಗಳು ನಿಯೋಜಿತ ಪ್ರದೇಶಗಳಲ್ಲಿ  ಬ್ರಿಡ್ಜ್ ಕನಸ್ಟ್ರಕ್ಷನ್, ನೆಲಬಾಂಬು ಹೂತಿಟ್ಟು ವೈರಿ ಪಡೆ ಒಳ ನುಸುಳುವ ಪ್ರದೇಶಗಳ ರಕ್ಷಣೆ ಕಾರ್ಯ ಪೂರ್ಣಗೊಳಿಸುವ ಕೆಲಸದಲ್ಲಿ  ನಿರತವಾಗಿದ್ದವು. ನೋಡನೋಡುತಿದ್ದಂತೆ 1971ರ ಡಿಸೆಂಬರ್ 3ರ ಸಂಜೆ ಹೊತ್ತು ವೈರಿ ಪಡೆಯ ವಿಮಾನ ದಾಳಿ. ನಮ್ಮ ನೆಲೆಯ ಹತ್ತಿರದ ಏರ್ ಫೋರ್ಟಿನಲ್ಲಿ ಬೆಂಕಿ ಅವಘಡ. ರಾತ್ರಿಯಿಡಿ ಆರ್ಟಿಲ್ಲರಿ ಗನ್ನಿನ ಗುಡುಗು. ಮುಂದಿನ 14 ದಿನಗಳನ್ನು ಬೂಟ್ ಕಾಲಿನೊಂದಿಗೆ ಬಂಕರ್ ನಲ್ಲಿ ಕಳೆದ ಸಮಯ. ಡಿಸೆಂಬರ್ 16 ರಂದು ಪೂರ್ವ ಪಾಕಿಸ್ತಾನದ ಆರ್ಮಿ ಕಮಾಂಡರ್ ಲೆ। ಜನರಲ್ ಏಏಕೆ ನಿಯಾಜಿ ತನ್ನ 93,000 ಪಡೆಯೊಂದಿಗೆ ಪೂರ್ವ ಕಮಾಂಡಿನ ಮುಖ್ಯಸ್ಥರಾದ ಲೆ। ಜನರಲ್ ಜೆ ಯಸ್ ಅರೋರ ಅವರ ಮುಂದೆ ಶರಣಾಗತಿ. ಸೀಸ್ಪಯರ್ ಘೋಷಣೆ.  ಇದೆಲ್ಲ ಎಲ್ಲಾ ಕಡೆ ದಾಖಲಾಗಿ ಎಲ್ಲರಿಗೂ ತಿಳಿದಿರುವ ವಿಚಾರಗಳು. ಆದರೆ ನಮ್ಮ ಇಂಜಿನಿಯರ್ ರೆಜಿಮೆಂಟಿಗೆ ತಾವು ನೆರವೇರಿಸಿದ ವೈರಿ ಪಡೆಯನ್ನು ತಡೆಯಲು ಮಾಡಿದ ಕೆಲಸವನ್ನು ಪೂರೈಸಲು ಹರಸಹಾಸಪಡಬೇಕಾದ ಪರಿಸ್ಥಿತಿ.  ನೆಲಬಾಂಬುಗಳನ್ನು ಹೂತಿಡುವುದು ಸುಲಭವಾದರೂ ಅದನ್ನು ತಗೆಯಲು ಪ್ರಾಣವನ್ನೇ ಓತ್ತೆ ಇಡಬೇಕಾಗುತ್ತದೆ. ಇದರಿಂದಾಗಿ ನಮ್ಮ ರೆಜಿಮೆಂಟಿನ ಎರಡು NCOs ಹಾಗೂ ಓರ್ವ JCO ಕ್ರಮವಾಗಿ ಜನವರಿ 5, 1972 ಹಾಗೂ ಮಾರ್ಚ್ 3, 1972 ರಂದು ಹುತಾತ್ಮರಾದರು. ಈಗಿರುವ ರೀತಿಯಲ್ಲಿ  ಪಾರ್ಥೀವ ಶರೀರವನ್ನು ಆ ಕಾಲದಲ್ಲಿ  ಹುತಾತ್ಮರ ಊರಿಗೆ ಕಳುಹಿಸಿ ಕೊಡುವ ಪದ್ದತಿ ಇರದ ಕಾರಣ ಅವರವರ ಯುದ್ಧ ನೆಲೆಯಲ್ಲಿಯೇ ವಿಧಿವಿಧಾನಗಳ ಪ್ರಕಾರ ಅಂತ್ಯ ಕಾರ್ಯ ನೆರವೇರಿಸಿದುದು ಮರೆಯಲಾಗದ ನೆನಪುಗಳು.  ಒಬ್ಬರು ಲೇನ್ಸ್ ನಾಯಕ್ ವೆಂಕಟಾದ್ರಿ,  ಆಂಧ್ರದವರು.ಅವರ ಪತ್ನಿ ಆಗ ಗರ್ಭಿಣಿಯಾಗಿದ್ದರು. ಇದಲ್ಲದೆ 17 ಇತರ Battle Casualty ಯು ಸಂಭವಿಸಿದೆ.  ಯುದ್ಧದ ನಂತರ ಗಡಿ ಭಾಗದಲ್ಲಿ ನಾವು ಕಂಡದ್ದು ಮುರಿದು ಬಿದ್ದ ಸೇತುವೆ, ಛಿಧ್ರವಾದ ಕಟ್ಟಡಗಳು ಹಾಗೂ ನೀರವ ಮೌನ॥  ಮುಂದಕ್ಕೆ ಎಲ್ಲಾ ಕೆಲಸ ಮುಗಿಸಿ ನಮ್ಮ ರೆಜಿಮೆಂಟ್  ಕ್ಲೆಮೆಂಟ್ ಟೌನ್ ಗೆ ವಾಪಾಸಾದುದು 1972 ಸಪ್ಟೆಂಬರ್ ತಿಂಗಳಲ್ಲಿ . 1971 ಜನವರಿ 28 ರಂದು ತವರೂರು ಬಿಟ್ಟವ ಮರಳಿ ಮನೆಗೆ ತಾಯಿ, ತಂದೆ , ಸಹೋದರ, ಸಹೋದರಿಯರು ಹಾಗೂ ಕುಟುಂಬ ಸದಸ್ಯರನ್ನು ಸೇರಿದ್ದು 20 ತಿಂಗಳ ನಂತರ 1972 ಸಪ್ಟೆಂಬರ್ ತಿಂಗಳಲ್ಲಿ.

ನನ್ನ ಈ ಸೇವಾನುಭವ ಎಂದಿಗೂ ಮರೆಯಲಾಗದ ಒಂದು ಕಾಲ ಘಟ್ಟ. ಮುಂದಕ್ಕೆ ನನ್ನ ಸೇವೆಯನ್ನು ಮುಂದುವರಿಸಿ, ಕಾಲಕಾಲಕ್ಕೆ ಪದೋನ್ನತಿ ಪಡೆದು 30 ಸೆಪ್ಟೆಂಬರ್ 1993 ರಂದು ಗೌರವ ಕ್ಯಾಪ್ಟನ್ ಪದವಿಯೊಂದಿಗೆ ನಿವೃತ್ತನಾಗಿ -ವಿಶ್ರಾಂತಿ ಜೀವನ ನಡೆಸುತ್ತಿರುವ ನನಗೆ ಜೀವನದಲ್ಲಿ ಪೂರ್ಣ ನೆಮ್ಮದಿಯಿದೆ.

✍🏻 ಕ್ಯಾಪ್ಟನ್ ಚಿದಾನಂದ ನಾಡಾಜೆ , ನಿವೃತ್ತ ಸೇನಾಧಿಕಾರಿ

LEAVE A REPLY

Please enter your comment!
Please enter your name here