ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ, ತಾಲೂಕು ಇವುಗಳ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ ಕಾರ್ಯಕ್ರಮ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.2ರಂದು ನಡೆಯಿತು.
ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್. ರೈ ಕಾರ್ಯಕ್ರಮ ಉದ್ಘಾಟಿಸಿ, ಮಾದಕ ವ್ಯಸನದಿಂದಾಗುವ ಸಮಸ್ಯೆ ಮತ್ತು ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ. ಸವಣೂರು ಮಾತನಾಡಿ, ವಿದ್ಯಾರ್ಥಿ ಜೀವನವು ಚಿನ್ನದಂತಹ ಬದುಕು ಅಂತಹ ಬದುಕು ಸಣ್ಣ ಪುಟ್ಟ ಆಸೆಗಳು ಮತ್ತು ವ್ಯಸನಗಳಿಂದ ನಾಶವಾಗಬಾರದು. ಸಮಾಜವು ನಿಮ್ಮ ತಪ್ಪುಗಳನ್ನು ಒತ್ತಿಹೇಳುತ್ತಾರೆಯೇ ಹೊರತು ಅದನ್ನು ಸರಿ ಪಡಿಸಲು ಪ್ರಯತ್ನಿಸುವುದಿಲ್ಲ, ತಪ್ಪನ್ನು ತಿದ್ದುವ ಸರಿಪಡಿಸುವ ಕೆಲಸವನ್ನು ಹೆತ್ತವರು ಮತ್ತು ಶಿಕ್ಷಕರು ಮಾತ್ರ ಮಾಡುತ್ತಾರೆ.ಯಾವುದೇ ಕಾರಣಕ್ಕೂ ಜಾಹಿರಾತುಗಳನ್ನು ಅನುಕರಣೆ ಮಾಡಬಾರದು, ಅದರಿ೦ದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತರಾಗಬೇಕು ಎಂದರು.
ಪುತ್ತೂರು ತಾಲೂಕು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾಗಿದ್ದ ದಿನೇಶ್ ಮೆದು ಮಾತನಾಡಿ, ಭಾರತ ದೇಶವು ಏಕತೆಗೆ ಹೆಸರುವಾಸಿಯಾಗಿದೆ. ಯುವ ಸಮೂಹವು ಹಲವು ಕಾರಣಗಳಿಂದ ವಿವಿಧ ರೀತಿಯ ಒತ್ತಡಕ್ಕೆ ಒಳಗಾಗಿ ಅದರಿಂದ ಹೊರಬರಲು ಮಾದಕ ವ್ಯಸನಗಳ ಹಿಂದೆ ಹೋಗುವ ಅಲೋಚನೆಗೊಳಗಾಗುತ್ತಾರೆ. ಜೀವನದಲ್ಲಿ ಒಳ್ಳೆಯ ಸಂಸ್ಕೃತಿ ಮತ್ತು ಸಭ್ಯತೆಯನ್ನು ಅಳವಡಿಸಿಕೊಂಡರೆ ಮಾತ್ರ ಸಾರ್ಥಕ ಬದುಕು ಆಗುತ್ತದೆ ಎಂದು ನುಡಿದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ್ ಸುಲಾಯ ಮಾತನಾಡಿ, ವಿದ್ಯಾರ್ಥಿಗಳ ಮುಖ್ಯ ಲಕ್ಷಣ ಮಾತುಗಳನ್ನು ಕೇಳಿಸಿಕೊಳ್ಳುವುದು ಮತ್ತು ಅತ್ಯುತ್ತಮ ಮಾತುಗಾರ ಸದೃಢ ಯುವ ಪೀಳಿಗೆಯನ್ನು ಹುಟ್ಟು ಹಾಕಬಲ್ಲ. ಈಗಿನ ಯುವ ಸಮಾಜದ ಅಜಾಗರೂಕತೆ ಯಿಂದಾಗಿ ವಂಚನೆಗೆ ಒಳಗಾಗುತ್ತಾರೆ. ತಿನ್ನುವುದು ಹವ್ಯಾಸವಾಗಿ ದುಶ್ಚಟವಾಗಿ ಪರಿಣಮಿಸಿ, ಪ್ರಚೋದನೆ ಮಾಡುವ ರಾಸಾಯನಿಕಗಳು ಇರುತ್ತವೆ. ಇವುಗಳು ವ್ಯಸನಗಳಿಗೆ ಬಲಿಯಾಗುವಂತೆ ಮಾಡುತ್ತದೆ.ಇದಕ್ಕೆ ದೈಹಿಕ ಸ್ವಾಸ್ಥ್ಯ ಮತ್ತು ಮಾನಸಿಕ ಸ್ವಾಸ್ಥ್ಯ ಅತೀ ಮುಖ್ಯವಾಗುತ್ತದೆ ಎಂದು ಹೇಳಿದರು.
ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಇವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸತತ ಕಾರ್ಯೋನ್ಮುಖರಾಗಿದ್ದರೆ ಯಾವುದೇ ದುಶ್ಚಟಗಳಿಗೆ
ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು. ಅದು ಭವ್ಯ ಬಾರತದ ನಿರ್ಮಾಣಕ್ಕೆ ಸಹಾಯವಾಗುತ್ತದೆ ಎಂದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಮತ್ತು ಸವಣೂರು ಪ್ರಗತಿ ಬಂಧು ಸ್ವಸಹಾಯ ಸಂಘದ ಅಧ್ಯಕ್ಷ ಹೊನ್ನಪ್ಪ ಗೌಡ ಪರಣೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆಯಿಷತ್ ಹನ್ನ ಇವರು ಸ್ವಾಗತಿಸಿ, ಹೆಚ್.ಎಸ್. ಶ್ರುತ ಜೈನ್ ಮತ್ತು ತಂಡದವರು ಪ್ರಾರ್ಥಿಸಿ, ಅವನಿ ರೈ. ಸಂವಿಧಾನದ ಪೀಠಿಕೆ ವಾಚಿಸಿದರು ಫಾತಿಮತ್ ಶಬೀಬ ಕಾರ್ಯಕ್ರಮ ನಿರೂಪಿಸಿ, ಖದೀಜತ್ ಅಝೀಲ ಎ.ಎಸ್ ವಂದಿಸಿದರು.