ಪುತ್ತೂರು: ಉತ್ತಮ ಬದುಕಿಗೆ ವಿಜ್ಞಾನ ಶೀರ್ಷಿಕೆಯಡಿಯಲ್ಲಿ ಸೆ.4ರಂದು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಹಾಗೂ ಭುವನ ಇಕೋ ಕ್ಲಬ್ ಸಹಯೋಗದೊಂದಿಗೆ ಸರ್ವೆ ಎಸ್.ಜಿ.ಎಂ. ಪ್ರೌಢಶಾಲೆಯಲ್ಲಿ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ ಏರ್ಪಡಿಸಲಾಯಿತು.
ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ವಿಜ್ಞಾನ ಮಾದರಿಗಳನ್ನು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು ವೀಕ್ಷಿಸಿ, ವಿಜೇತರನ್ನು ಗುರುತಿಸಿ, ಬಹುಮಾನ ವಿತರಿಸಿದರು. ಪ್ರಥಮ ಸ್ಥಾನವನ್ನು 10ನೇ ತರಗತಿಯ ವಿದ್ಯಾರ್ಥಿ ವಂದಿತ್, ದ್ವಿತೀಯ ಸ್ಥಾನವನ್ನು 10ನೇ ತರಗತಿಯ ವಿದ್ಯಾರ್ಥಿನಿ ಕೃತಿಕಾ ಹಾಗೂ ತೃತೀಯ ಸ್ಥಾನವನ್ನು 9ನೇ ತರಗತಿಯ ವಿದ್ಯಾರ್ಥಿ ಶ್ರವಣ್ ಕುಮಾರ್ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ 1೦೦೦, ದ್ವಿತೀಯ 75೦, ತೃತೀಯ 5೦೦ ರೂ. ನಗದು, ಪದಕ ಹಾಗೂ ಪ್ರಶಸ್ತಿಪತ್ರ ನೀಡಲಾಯಿತು. ಭಾಗವಹಿಸಿದ ಏಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಬಹುಮಾನ ಗಳಿಸಿದ ಮೂರೂ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಟ್ರಸ್ಟ್ನ ಪ್ರಾಜೆಕ್ಟ್ ಮ್ಯಾನೇಜರ್ ಹೇಮಂತ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯ ಶಶಿಧರ್ ಎಸ್. ಡಿ. ಮಾತನಾಡಿ ಶುಭಹಾರೈಸಿದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಅನನ್ಯ ಹಾಗೂ ಪ್ರಜ್ಞಾ, ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಶೇಖರ್, ವಿಜ್ಞಾನ ಶಿಕ್ಷಕ ಮೋಹನ್ ಕುಮಾರ್ ಹಾಗೂ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸೋಮಶೇಖರ್ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ವಂದಿಸಿದರು. ವಿಜ್ಞಾನ ಶಿಕ್ಷಕ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.