ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ವಂ| ಫಾ| ಲಾರೆನ್ಸ್ ಮಸ್ಕರೇನ್ಹಸ್ರವರು ಮಾತನಾಡಿ ಶಿಕ್ಷಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಅವರು ಜ್ಙಾನದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಹುರಿದುಂಬಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿನಿಯರಲ್ಲಿ ಮಾನವೀಯತೆಯ ಬೀಜವನ್ನು ಬಿತ್ತಿ ಸತ್ಪ್ರಜೆಗಳನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಾರೆ ಅವರ ಸೇವೆ ಅಭಿನಂದನಾರ್ಹ ಎಂದು ಹೇಳಿದರು.
ಮಾಯ್ ದೆ ದೇವುಸ್ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಮಾತನಾಡಿ ಶಿಕ್ಷಕರು ಬದುಕಿಗೆ ದಾರಿ ತೋರಿಸುವ ದಾರಿ ದೀಪವಾಗಿದ್ದಾರೆ. ಅವರು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಬೋಧಿಸಿ ವಿದ್ಯಾರ್ಥಿಗಳನ್ನು ಸತ್ಫ್ರಜೆಗಳನ್ನಾಗಿ ರೂಪಿಸಿರುತ್ತಾರೆ ಎಂದು ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ವೇತಾ ಕೆ. ಮಾತನಾಡಿ ತಾಯಿಯಿಂದ ಉಸಿರು, ತಂದೆಯಿಂದ ಹೆಸರು ಬರುತ್ತದೆ ಗುರುಗಳಿಂದ ಜೀವನ ನಡೆಸಲು ಅಗತ್ಯವಾದ ವಿದ್ಯಾಭ್ಯಾಸ ದೊರೆಯುತ್ತದೆ. ಶಿಕ್ಷಕ ವೃತ್ತಿ ಅತ್ಯಂತ ಮಹತ್ವಪೂರ್ಣವಾದದ್ದು, ನವ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ತರವಾದದ್ದು ಎಂದು ಹೇಳಿ ಶಿಕ್ಷಕರಿಗೆ ಶುಭಾಶಯ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ಮಾತನಾಡಿ ಶ್ರದ್ಧೆ, ಶಿಸ್ತು, ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶದ ಗುರುದಕ್ಷಿಣೆಯನ್ನು ಕೊಡಬೇಕಾಗಿ ತಿಳಿಸಿ ಶುಭಹಾರೈಸಿದರು.
ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಾಲಾ ಸಂಚಾಲಕರನ್ನು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳನ್ನು ಕಿರಿಕಾಣಿಕೆ ನೀಡಿ ಅಭಿನಂದಿಸಲಾಯಿತು. ಶಾಲಾ ನಾಯಕಿ ಮಾನ್ಯ ಸ್ವಾಗತಿಸಿ, ಯಸ್ವಿತ ವಂದಿಸಿದರು. ದೀಕ್ಷಾ ಮತ್ತು ದೃತಿ ಸಭಾಕಾರ್ಯಕ್ರಮ ಹಾಗೂ ರಿಂಶ ಆಲಿ ಮತ್ತು ಚಾರುಲಿಶ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಕಾರ್ಯಕ್ರಮ ನಡೆಸಿಕೊಟ್ಟರು.