ಲಿಟ್ಲ್ ಫ್ಲವರ್ ಶಾಲೆಯಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದ ಸಮಾರೋಪ

0

ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಕ್ರೀಡಾಂಗಣದಲ್ಲಿ ಸೆ.9ರಂದು ಅದ್ದೂರಿಯಾಗಿ ನಡೆದ ಪ್ರೊ ಕಬಡ್ಡಿ ಮಾದರಿಯ 14ರ ವಯೋಮಾನದ ಬಾಲಕ-ಬಾಲಕಿಯರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವು ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆಯೊಂದಿಗೆ ಸಂಪನ್ನಗೊಂಡಿತು.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇದರ ಆಶ್ರಯದಲ್ಲಿ ನಡೆದ ಪಂದ್ಯಾಟದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ 5 ವಲಯಗಳ 10 ಬಾಲಕರ ಮತ್ತು 10 ಬಾಲಕಿಯರ ತಂಡು ಸೇರಿದಂತೆ ಒಟ್ಟು 20 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದೆ. ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ವಿನ್ನರ್, ಕಬಡದ ಕೊಣಾಲು ಸರಕಾರಿ ಪ್ರಾಥಮಿಕ ಶಾಲೆ ರನ್ನರ್ ಆಗಿದೆ. ಬಾಲಕಿಯರ ವಿಭಾಗದಲ್ಲಿ ಪುತ್ತೂರಿನ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ವಿನ್ನರ್ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ರನ್ನರ್ ಆಗಿದೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡದ ಕುಶನ್ ಬೆಸ್ಟ್ ಆಲ್‌ರೌಂಡರ್, ಲತೇಶ್ ಬೆಸ್ಟ್ ಡಿಫೆಂಡರ್, ತರುಣ್ ಕೃಷ್ಣ ಪಂದ್ಯಾಕೂಟದ ವಿನ್ನರ್, ಕೊಣಾಲು ಸರಕಾರಿ ಪ್ರೌಢಶಾಲೆಯ ಶುಭಕರ ಬೆಸ್ಟ್ ರೈಡರ್ ಹಾಗೂ ಮನೋಜ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡರು. ಬಾಲಕಿಯ ವಿಭಾಗದಲ್ಲಿ ಬೆಥನಿ ಶಾಲಾ ತಂಡದ ಜ್ಯುವೆನ್ನಾ ಡ್ಯಾಝಲ್ ಕುಟಿನ್ಹಾ ಬೆಸ್ಟ್ ಆಲ್‌ರೌಂಡರ್, ಜೆನಿಟಾ ಸಿಂದ ಪಸನ್ನ ಬೆಸ್ಟ್ ಡಿಫೆಂಡರ್, ಸನ್ನಿಧಿ ಬೆಸ್ಟ್ ಪ್ಲೇಯರ್, ಹಾರ್ದಿಕಾ ಪಂದ್ಯಾಟಕೂಟದ ವಿನ್ನರ್ ಪ್ರಶಸ್ತಿ, ವಿವೇಕಾನಂದ ಶಾಲಾ ತಂಡದ ದಿವ್ಯಾ ಬೆಸ್ಟ್ ರೈಡರ್ ಹಾಗೂ ದೀಕ್ಷಿತಾ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡರು.


ರಾಜ್ಯ ಮಟ್ಟದ ಮಾದರಿಯಲ್ಲಿ ಆಯೋಜನೆ ಗಣ್ಯರ ಪ್ರಶಂಸೆ
ಪಂದ್ಯಾಟದಲ್ಲಿ ಬೃಹತ್ ವೇದಿಕೆ, ಮಳೆಯಿಂದ ರಕ್ಷಣೆಗಾಗಿ ಛಾವಣಿ ಅಳವಡಿಸಿದ ವಿಶಾಲ ಕ್ರೀಡಾಂಗಣ, ಮ್ಯಾಟ್ ಅಂಕಣ, ಸಾರ್ವಜನಿಕರಿಗೆ ಪಂದ್ಯಾಟ ವೀಕ್ಷಣೆ ಗ್ಯಾಲರಿ ಮಾದರಿ ವ್ಯವಸ್ಥೆ, ಪಂದ್ಯಾಟದ ನಿರ್ವಹಣೆ, ಊಟ, ಉಪಾಹಾರ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲಿಯೂ ಅಚ್ಚು ಕಟ್ಟಾಗಿ, ಶಿಸ್ತು ಬದ್ದ ಹಾಗೂ ವ್ಯವಸ್ಥಿತವಾಗಿ ಪಂದ್ಯಾಟವು ಆಯೋಜನೆಗೊಂಡಿದ್ದು ಅತಿಥಿ, ಗಣ್ಯರಿಂದ ಮೆಚ್ಚುಗೆ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ. ಶಿಸ್ತು ಬದ್ದವಾಗಿ ನಡೆದ ಪಂದ್ಯಾಟವು ರಾಜ್ಯ ಮಟ್ಟದ ಮಾದರಿಯಲ್ಲಿ ಸಂಯೋಜನೆಗೊಂಡಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಈಶ್ವರ ಭಟ್ ಪಂಜಿಗುಡ್ಡೆ, ಜಯಂತ ನಡುಬೈಲು ಸಹಿತಿ ಹಲವು ಅತಿಥಿಗಳು ಪ್ರಶಂಸೆ ವ್ಯಕ್ತಪಡಿಸಿದರು.


ನಗದು ಪುರಸ್ಕಾರ
ಪಂದ್ಯಾ ಕೂಟದಲ್ಲಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ, ನಗರ ಠಾಣಾ ಎಸ್.ಐ ಆಂಜನೇಯ ರೆಡ್ಡಿ, ಅಂಕಲ್ ಸ್ವೀಟ್ಸ್‌ನ ಮ್ಹಾಲಕ ಕುಶಾಲಪ್ಪ ಗೌಡ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾರವರು ವೈಯಕ್ತಿಕ ನಗದು ಪುರಸ್ಕಾರ ನೀಡಿ ವಿಜೇತರನ್ನು ಅಭಿನಂದಿಸಿದರು.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ನಗರ ಠಾಣಾ ಎಸ್‌ಐ ಆಂಜನೇಯ ರೆಡ್ಡಿ ಮಾತನಾಡಿ, ಕ್ರೀಡೆಯು ಮನುಷ್ಯ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಪರಸ್ಪರ ಸ್ನೇಹದ ಭಾವ ವೈದ್ಧಿಯಾಗುತ್ತದೆ. ತಾಲೂಕು ಮಟ್ಟದ ಪಂದ್ಯಾಟವು ಅದ್ದೂರಿಯಾಗಿ ನಡೆದಿದ್ದು ರಾಜ್ಯ ಮಟ್ಟದಲ್ಲಿ ಇಂತಹ ಪಂದ್ಯಗಳು ನಡೆಯುವುದು ಅಸಾಧ್ಯ. ಇಲ್ಲಿನ ವಿದ್ಯಾರ್ಥಿಗಳು ಮುಂದೆ ಪ್ರೊ ಕಬಡ್ಡಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಯೋಗ ದೊರೆಯಲಿ ಎಂದು ಹಾರೈಸಿದರು.


ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಮಾತನಾಡಿ, ತಾಲೂಕು ಮಟ್ಟದ ಪಂದ್ಯಾಟವು ಯಾವುದೇ ಚ್ಯುತಿಯಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿಗಳ ತಂಡವು ಎರಡು ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿತ್ತು. ಈ ಬಾರಿ ಮತ್ತೆ ಆಯ್ಕೆಯಾಗಿ ಪ್ರಥಮ ಸ್ಥಾನ ಪಡೆದ ಬರುವಾಗ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದ ಅವರು ಜಿಲ್ಲಾ ಮಟ್ಟದ ಪಂದ್ಯಾಟವು ಬಂಟ್ವಾಳ ಹಾಗೂ ಮೈಸೂರು ವಿಭಾಗ ಮಟ್ಟದ ಪಂದ್ಯಗಳು ರಾಮಕುಂಜದಲ್ಲಿ ನಡೆಯಲಿದೆ. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್ ಮಾತನಾಡಿ, ತಾಲೂಕು ಮಟ್ಟದ ಪಂದ್ಯಾಟವು ಯಶಸ್ವಿಯಾಗಿ ನಡೆಯಲು ಸರ್ವ ರೀತಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ನಯಾ ಚಪ್ಪಲ್ ಬಜಾರ್‌ನ ಮ್ಹಾಲಕ ಎಂ.ಜಿ ರಫೀಕ್ ಮಾತನಾಡಿ ಶುಭಹಾರೈಸಿದರು.


ನಗರ ಸಭಾ ಸದಸ್ಯ ಯೂಸುಫ್ ಡ್ರೀಮ್, ತಾಲೂಕು ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ರೈ, ಜಿಲ್ಲಾ ಕಾರ್ಯಾಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ನಗರ ವಲಯದ ಕ್ರೀಡಾಕೂಟದ ನೋಡೆಲ್ ಅಧಿಕಾರಿಗಳಾದ ನರೇಶ್ ಲೋಬೋ, ಕುಸುಮಾವತಿ, ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಪಿ.ವಿ ರಾಘವನ್, ನಾರಾಯಣನ್, ರಝಾಕ್ ಬಪ್ಪಳಿಗೆ, ಚಂದ್ರಪ್ರಭಾ ಗೌಡ, ಶಾಲಾ ನಿಯೋಜಿತ ಮುಖ್ಯಗುರು ಐರಿನ್ ವೇಗಸ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಮಾಜಿ ಅಧ್ಯಕ್ಷ ರಾಮಚಂದ್ರ ಭಟ್, ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಮೊಟ್ಟೆತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪಾಣಾಜೆ ಸುಭೋದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ವಿಜೇತ ಪಟ್ಟಿ ವಾಚಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ವಂದಿಸಿದರು. ಪ್ರವೀಣ್ ಮಡ್ಯಂಗಲ, ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಜನಾರ್ದನ ಪೂಜಾರಿ, ಸುಂದರ ಪೂಜಾರಿ, ಮಂಜುನಾಥ, ಸಭ್ಯಾ ಮಡ್ಯಂಗಳ, ರೇಣುಕಾ, ನಯನಾ, ಚಂದ್ರಕಲಾ, ರತ್ನಾವತಿ, ಕೃಷ್ಣಪ್ಪ, ಕೋಸ್ಟಲ್ ಹೋಮ್‌ನ ಸಂದೇಶ್ ರೈ ಸಂಪ್ಯ, ಚೇತನ್ ರೈ ಸಂಪ್ಯ, ಪ್ರಸಾದ್, ನಿಶ್ವಾಲ್, ಸನತ್, ಹಿರಿಯ ವಿದ್ಯಾರ್ಥಿಗಳಾದ ಸುಚೇತ್, ಗುರುಪ್ರಸಾದ್, ಅಜಿತ್ ಹಾಗೂ ಶಾಲಾ ಶಿಕ್ಷಕರು ಬೋಧಕೇತರ ವೃಂದದವರು ಪಂದ್ಯಾಟದ ಯಶಸ್ಸಿನಲ್ಲಿ ಸಹಕರಿಸಿದರು.


ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಕೂಟವು ಯಶಸ್ವಿಯಾಗಿ ಆಯೋಜನೆಗೊಂಡಿದೆ. ಇದರ ಹಿಂದೆ ಹಲವು ದಾನಿಗಳ ಕೊಡುಗೆ, ಹಲವು ಮಂದಿಯ ಪರಿಶ್ರಮವಿದೆ. ಜಾಹಿರಾತು ನೀಡಿ ಪ್ರೋತ್ಸಾಹಿಸಿದ್ದಾರೆ. ಶಿಕ್ಷಣ, ಪೊಲೀಸ್ ಹಾಗೂ ಇತರ ಇಲಾಖೆಗಳು, ಶಾಲಾ ಆಡಳಿತ ಮಂಡಳಿಯ ಸಹಕಾರವಿದೆ. ಶಾಲಾ ರಕ್ಷಕ-ಶಿಕ್ಷಕ ಸಂಘ, ಸುರಕ್ಷಾ ಸಮಿತಿ, ಪೋಷಕರು, ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳ ಏಕ ಮನಸ್ಸಿನ ಪರಿಶ್ರಮವಿದೆ. ಹಿರಿಯ ವಿದ್ಯಾರ್ಥಿಗಳ ಸಹಕಾರಿವಿದೆ ಎಂದು ಪಂದ್ಯಾಕೂಟದ ಸಂಘಕರಾಗಿರುವ ಬಾಲಕೃಷ್ಣ ರೈ ಪೋರ್ದಾಲ್ ತನ್ನ ಸಾರ್ಥಕತೆಯ ಮಾತುಗಳನ್ನಾಡಿದಾಗ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಭಿಕರಿಂದ ದೊಡ್ಡ ಮಟ್ಟದಲ್ಲಿ ಕರತಾಡನ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here