





ಹಿರೇಬಂಡಾಡಿ: ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.


ಕ್ರೀಡಾ ಧ್ವಜಾರೋಹಣವನ್ನು ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷರಾದ ಸದಾನಂದ ಶೆಟ್ಟಿ ನೆರವೇರಿಸಿದರು. ಕ್ರೀಡಾಪಥ ಸಂಚಲನದ ವಂದನೆಯನ್ನು ನಿಕಟಪೂರ್ವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ ಸ್ವೀಕರಿಸಿದರು. ಕ್ರೀಡಾಕೂಟ ಉದ್ಘಾಟಿಸಿದ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ಶ್ರೀಧರ ಭಟ್ ಮಾತನಾಡಿ, ಕ್ರೀಡೆಯು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಶಿಸ್ತು, ಸಂಯಮ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದರು.





ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷರಾದ ರವೀಂದ್ರ ಪಟಾರ್ತಿ ಮಾತನಾಡಿ, ಹಿರೇಬಂಡಾಡಿ ಶಾಲೆಯ ಕ್ರೀಡಾಂಗಣದಲ್ಲಿ ಸ್ಪರ್ಧಿಸುವ ಕ್ರೀಡಾ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲೂ ಮಿನುಗುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಉಲಹನ್ನನ್, ಜನಾರ್ದನ ಗೌಡ ನೆಲ್ಯಾಡಿ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ವಲಯದ ನೋಡಲ್ ದೈಹಿಕ ಶಿಕ್ಷಣ ಅಧಿಕಾರಿಗಳಾದ ಕುಶಾಲಪ್ಪ ಗೌಡ, ಗಂಗಾಧರ ಬಾರ್ಲ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ಗೌಡ ಬಂಡಾಡಿ, ಹಿರೇಬಂಡಾಡಿ ಗ್ರಾ.ಪಂ.ಸದಸ್ಯ ಹಮ್ಮಬ್ಬ ಶೌಕತ್ ಅಲಿ, ಕ್ರೀಡಾ ಪ್ರೋತ್ಸಾಹಕ ಶ್ರೀಧರ ಮಠಂದೂರು, ಗ್ರಾ.ಪಂ.ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಸೈಂಟ್ ಮೇರಿಸ್ ಶಾಲಾ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ನ ಮೂಲಕ ಉಪ್ಪಿನಂಗಡಿ ವಲಯದ ವಿವಿಧ ಶಾಲೆಗಳ ಕ್ರೀಡಾ ತಂಡಗಳ ಪಥಸಂಚಲನ ಕ್ರೀಡಾಕೂಟಕ್ಕೆ ವಿಶೇಷ ಮೆರುಗನ್ನು ನೀಡಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ. ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಉಷಾಕಿರಣ ರೈ ಡಿ. ವಂದಿಸಿದರು. ಶಿಕ್ಷಕಿ ಲಲಿತ ಚಕ್ರಪಾಣಿ ಬಾಕಿಲ ಸಭಾ ಕಾರ್ಯಕ್ರವ ನಿರ್ವಹಿಸಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಿದರು.
ಸನ್ಮಾನ
ಕ್ರೀಡಾಕೂಟ ಆಯೋಜನೆಗೆ ಪ್ರೋತ್ಸಾಹ ಮತ್ತು ಯಶಸ್ವಿಗೆ ಕಾರಣಕರ್ತರಾದ ನಿವೃತ್ತ ಮುಖ್ಯಶಿಕ್ಷಕ ಶ್ರೀಧರ್ ಭಟ್ ಮತ್ತು ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಫಿಲೋಮಿನಾ ಇವರನ್ನು ಉಪ್ಪಿನಂಗಡಿ ವಲಯದ ದೈಹಿಕ ಶಿಕ್ಷಣ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು.









