ಬೆಳ್ಳಾರೆ : ಸೆ.9 ರಂದು ರಾತ್ರಿ ಬೆಳ್ಳಾರೆಯ ಕೊಳಂಬಳದಲ್ಲಿ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಿಕ್ಷಾ ಚಾಲಕ ಅಬ್ದುಲ್ ಮಸೂದ್ ಹಾಗೂ ಇಸುಬು ಚೆನ್ನಾವರ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೆ.9ರಂದು ಬೆಳ್ಳಾರೆ ಗ್ರಾಮದ ಕೊಳಂಬಳ ಎಂಬಲ್ಲಿಂದ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬೆಳ್ಳಾರೆ ಠಾಣಾ ಎಸೈ ಡಿ.ಎನ್.ಈರಯ್ಯ ಅವರು ಸಿಬ್ಬಂದಿಗಳೊಂದಿಗೆ ಕೊಳಂಬಳ- ದಾಸನಮಜಲು ರಸ್ತೆಯಲ್ಲಿ ಗಸ್ತು ನಿರತರಾಗಿದ್ದ ವೇಳೆ ಆಟೋರಿಕ್ಷಾವೊಂದು ಬರುತ್ತಿರುವುದನ್ನು ನೋಡಿ ಆಟೋರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆಯನ್ನು ನೀಡಿದಾಗ ಅದರ ಚಾಲಕನು ಆಟೋರಿಕ್ಷಾವನ್ನು ನಿಲ್ಲಿಸುತ್ತಿದ್ದಂತೆ ಆಟೋರಿಕ್ಷಾದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಆಟೋರಿಕ್ಷಾದಿಂದ ಇಳಿದು ಓಡಿ ಹೋಗಿದ್ದ, ಬಳಿಕ ಆಟೋರಿಕ್ಷಾವನ್ನು ಪರಿಶೀಲಿಸಲಾಗಿ ಆಟೋರಿಕ್ಷಾದ ಪ್ರಯಾಣಿಕರ ಸೀಟಿನ ಹಿಂಭಾಗದಲ್ಲಿ ಟಾರ್ಪಾಲಿನಿಂದ ಮುಚ್ಚಿದ್ದು, ಆಟೋರಿಕ್ಷಾದೊಳಗೆ ಪ್ರಯಾಣಿಕರ ಸೀಟಿನ ಮುಂಭಾಗದಲ್ಲಿ ಹೋರಿಯೊಂದನ್ನು ಕಟ್ಟಿ ಹಾಕಿರುವುದು ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ರಿಕ್ಷಾ ಚಾಲಕನನ್ನು ಬಂಧಿಸಿ ಪರಾರಿಯಾದ ಆರೋಪಿಯ ಮಾಹಿತಿ ಕೇಳಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಪರಾರಿಯಾದ ಆರೋಪಿ ಇಸುಬು ಚೆನ್ನಾವರ ಎಂಬಾತನನ್ನು ಸೆ.11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ಕುರಿತಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ 2020ಯಂತೆ ಪ್ರಕರಣ (ಅ.ಕ್ರ: 38/2025) ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.