ಇದು ರಾಜ್ಯದಲ್ಲೇ ಪ್ರಥಮ ಕೇಂದ್ರವಾಗಿದೆ: ಜಯರಾಮ್ ಕೆ ಇ.
ಈ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ಕೇಂದ್ರ ನೆರವಾಗಲಿ: ಸುದೀಪ್ ಕುಮಾರ್ ಶೆಟ್ಟಿ
ವಿಟ್ಲ : ದೀನ್ ದಯಾಳ್ ಅಂತ್ಯೋದಯ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ , ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ಹಾಗೂ ಮಾಣಿ ಗ್ರಾಮಪಂಚಾಯತ್ ನ ಆಶ್ರಯದಲ್ಲಿ ಮಾಣಿ ಗ್ರಾಮಪಂಚಾಯತ್ ಸಭಾಭವನದಲ್ಲಿ ಆರಂಭಗೊಂಡ ರಾಜ್ಯದ ಪ್ರಪ್ರಥಮ ಸಾವಿತ್ರಿಬಾಯಿ ಫುಲೆ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಜಿಲ್ಲಾಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಕೆ ಇ. ರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಾವಿತ್ರಿ ಬಾಯಿ ಫುಲೆ ಕೌಶಲ್ಯಾಭಿವೃದ್ಧಿ ಕೇಂದ್ರವು ಮಾಣಿಯಲ್ಲಿ ರಾಜ್ಯದಲ್ಲಿ ಪ್ರಥಮಬಾರಿಗೆ ಉದ್ಘಾಟನೆಗೊಂಡಿದೆ. ಪುರುಷ ಪ್ರಧಾನ ವ್ಯವಸ್ಥೆಯ ನಡುವೆ , ಲಿಂಗತಾರತಮ್ಯವನ್ನು ದೂರಮಾಡಿ, ಸಮಾನತೆ ಬೇಕು. ಪ್ರತಿಯೊಬ್ಬ ಮಹಿಳೆಯರ ಕೌಶಲ್ಯವನ್ನು ಗುರುತಿಸುವ ಉದ್ದೇಶಕ್ಕೆ ಸಂಜೀವಿನಿ ಅಭಿಯಾನ ಆರಂಭಗೊಂಡು, ಮಹಿಳಾ ಸಬಲೀಕರಣಕ್ಕೆ ಕಾರಣವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಯವರು ಮಾತನಾಡಿ, ಮಾಣಿ ಮಾತ್ರವಲ್ಲದೆ ಆಸುಪಾಸಿನ ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ಕೌಶಲ್ಯಾಭಿವೃದ್ಧಿ ಕೇಂದ್ರ ನೆರವಾಗಲಿ ಎಂದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ ಸಂಸ್ಥೆಯು ಗ್ರಾಮೀಣ ಜನತೆಯ ಕೌಶಲ್ಯಗಳನ್ನು ಗುರುತಿಸಿ ,ವ್ಯಾಪಾರ ಅಭಿವೃದ್ಧಿಗೆ ಪೂರಕ ತರಬೇತಿಗಳನ್ನು ನೀಡುತ್ತಾ ಬಂದಿದೆ, ಸ್ವ ಉದ್ಯೋಗಕ್ಕೆ ಪೂರಕವಾದ ಕೇಂದ್ರಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವಂತೆ ಅವರು ಹೇಳಿದರು.
ಇದೇ ವೇಳೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಮಾಣಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಮಾಣಿಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಾಣಿ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ 15 ದಿನಗಳ ಕಾಲ ನಡೆದ ಎಂಬ್ರಾಯ್ಡರಿ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು, ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ , ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ, ಗ್ರಾ.ಪಂ.ಉಪಾಧ್ಯಕ್ಷೆ ಸುಜಾತ, ಮಾಣಿಕ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ, ಮಾಣಿ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಅಭಿಲಾಷ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಿರಿಜ , ತರಬೇತುದಾರರಾದ ಮೀನಾಕ್ಷಿ, ದೀಕ್ಷಾ, ಅಕ್ಷಿತಾ, ಎಂ.ಬಿ.ಕೆ ಸ್ವಾತಿ ಹಾಗೂ ಮಾಣಿ ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ವ್ಯವಸ್ಥಾಪಕಿ ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮುದಾಯ ಸಂಪನ್ಮೂಲ ವ್ಯಕ್ತಿ ಲೈಲಾ ಸ್ವಾಗತಿಸಿ, ವಂದಿಸಿದರು. ಮಾಣಿ ಗ್ರಾ.ಪಂ.ಸದಸ್ಯ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ.ಸಿಬ್ಬಂದಿಗಳಾದ ದೀಕ್ಷಿತಾ, ಸಾಂಘವಿ ಸಹಕರಿಸಿದರು.