ಲೋಕಾಯುಕ್ತ ಪ್ರಕರಣ:ಪುತ್ತೂರು ತಹಸಿಲ್ದಾರ್ ಎಸ್.ಬಿ.ಕೂಡಲಗಿಯವರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ

0

ಪುತ್ತೂರು:ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ತಾಲೂಕು ಕಚೇರಿಯ ಭೂಮಿ ಶಾಖೆಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ,ತಮ್ಮ ಮೇಲೂ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಜಮೀನಿನ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಆ.28ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪುತ್ತೂರು ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುನಿಲ್ ಕುಮಾರ್ ಎಸ್.ಎಮ್.ಮತ್ತು ತಹಸಿಲ್ದಾರ್ ಎಸ್.ಬಿ.ಕೂಡಲಗಿ ವಿರುದ್ಧ ಕಲಂ 7(ಎ),7(ಸಿ),12, ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ 1988(ತಿದ್ದುಪಡಿ ಕಾಯ್ದೆ 2018)ರಡಿ ಪ್ರಕರಣ(ಅಪರಾಧ ಕ್ರಮಾಂಕ 09/2025)ದಾಖಲಾಗಿರುತ್ತದೆ.

ಬಳಿಕ ಲೋಕಾಯುಕ್ತ ಪೊಲೀಸರು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆ ಸಮಯದಲ್ಲಿ ಸುನಿಲ್ ಕುಮಾರ್ ಎಸ್.ಎಮ್.ಅವರನ್ನು ದಸ್ತಗಿರಿ ಮಾಡಲಾಗಿತ್ತು.ತಹಸಿಲ್ದಾರ್ ನಾಪತ್ತೆಯಾಗಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಪ್ರಥಮ ದರ್ಜೆ ಸಹಾಯಕ ಸುನಿಲ್ ಕುಮಾರ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ತಲೆಮರೆಸಿಕೊಂಡಿದ್ದ ತಹಸಿಲ್ದಾರ್ ಎಸ್.ಬಿ.ಕೂಡಲಗಿಯವರು ನಿರೀಕ್ಷಣಾ ಜಾಮೀನು ಕೋರಿ ಮಂಗಳೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸುನೀತಾ ಎಸ್.ಜಿ.ರವರು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದಾರೆ.ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ರವೀಂದ್ರ ಮುನ್ನಿಪ್ಪಾಡಿರವರು ವಾದಿಸಿದ್ದರು.

LEAVE A REPLY

Please enter your comment!
Please enter your name here