ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ 8 ಕೋಟಿ ಅನುದಾನ: ಶಾಸಕ ಅಶೋಕ್ ರೈ
ಪುತ್ತೂರು: ಶಾಸಕನಾದ ಬಳಿಕ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಒಟ್ಟು 8 ಕೋಟಿ ಅನುದಾನವನ್ನು ನೀಡಿದ್ದೇನೆ. ಇದರ ಜೊತೆಗೆ ಇತರ ಧರ್ಮೀಯರ ಧಾರ್ಮಿಕ ಕೇಂದ್ರಗಳಿಗೂ ಅನುದಾನವನ್ನು ನೀಡಿದ್ದೇವೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶಾರದೋತ್ಸವ ಸಮಿತಿ ಹಾಗೂ ಸುಙದರ ಯಕ್ಷಕಲಾ ವೇದಿಕೆ ವತಿಯಿಂದ ನಡೆದ ಕೊಳ್ತಿಗೆ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಎಲ್ಲರಿಗೂ ಒಳಿತನ್ನು ಬಯಸಬೇಕು, ಕೆಡುಕನ್ನು ಯಾರಿಗೂ ಬಯಸಬಾರದು. ಕೆಟ್ಟ ಕೆಲಸ ಮಾಡಿದರೆ ದೇವರು ಸುಮ್ಮನೆ ಬಿಡುವುದಿಲ್ಲ ಈಗ ದೇವರ ಶಿಕ್ಷೆಯೂ ಥಟ್ಟನೆ ಸಿಗ್ತದೆ ಎಂದು ಹೇಳಿದ ಶಾಸಕರು ನಾವು ಜಾತಿ, ಮತ, ಧರ್ಮ ಭೇದ-ಭಾವವಿಲ್ಲದೆ ಎಲ್ಲರಿಗೂ ಒಳಿತನ್ನು ಬಯಸಬೇಕು ಆಗ ಮಾತ್ರ ನಾವು ದೇವರಿಗೆ ಹತ್ತಿರವಾಗಲು ಸಾಧ್ಯ ಎಂದು ಹೇಳಿದರು.
ಹೆತ್ತವರನ್ನೇ ಆಶ್ರಮಕ್ಕೆ ದಾಖಲಿಸುವ ಕಾಲದಲ್ಲಿ ನಾವಿದ್ದೇವೆ..
ಹೆತ್ತು, ಹೊತ್ತು ಸಾಕಿದ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವ ಮಕ್ಕಳು ಇರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ತಂದೆ ತಾಯಿಯೇ ದೇವರು ಎಂದು ಗೌರವಿಸುವ ಸಂಸ್ಕಾರ ನಮ್ಮದು. ಆದರೆ ವಯಸ್ಸಾದಾಗ ಅದೇ ದೇವರನ್ನು ನಾವು ಆಶ್ರಮಕ್ಕೆ ಸೇರಿಸುವುದು ಎಷ್ಟು ಸರಿ? ಯಾವ ಮಕ್ಕಳೂ ಕೊನೆಗಾಲದಲ್ಲಿ ತಂದೆ ತಾಯಿಯ ಆಶೀರ್ವಾದ ಪಡೆದವರ ಪಟ್ಟಿಯಲ್ಲಿ ನಾವು ಇರಬೇಕು ಅಂಥ ಮನಸ್ಸು ನಮ್ಮದಾಗಬೇಕು ಎಂದು ಹೇಳಿದರು.
ಧರ್ಮ ಬದುಕು ಕಲಿಸುತ್ತದೆ;
ಧರ್ಮಗಳು ಬದುಕನ್ನು ಕಲಿಸುತ್ತದೆ. ನಾವು ಹೇಗೆ ಜೀವನ ನಡೆಸಬೇಕು, ಹೇಗೆ ಸಮಾಜದಲ್ಲಿ ಇರಬೇಕು ಎಂಬುದನ್ನು ಧರ್ಮ ನಮಗೆ ಕಲಿಸುತ್ತದೆ. ಆ ಪ್ರಕಾರ ನಾವು ಬದುಕು ನಡೆಸಿದರೆ ನಾವು ಎಲ್ಲರ ಸಂಪ್ರೀತಿಗೆ ಪಾತ್ರರಾಗಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದು ಶಾಸಕರು ಹೇಳಿದರು.
ಗ್ಯಾರಂಟಿಯನ್ನು ಸರಕಾರ ಮಹಿಳೆಗೇ ಕೊಟ್ಟಿದ್ದು ಯಾಕೆ?
ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ಮಹಿಳೆಯರಿಗೆ ನೀಡಿದೆ ಯಾಕೆಂದರೆ ಮಹಿಳೆ ಕುಟುಂಬದ ಆಧಾರ ಸ್ತಂಬ, ಮಹಿಳೆ ಕುಟುಂಬವನ್ನು ನಡೆಸುವ ದೇವಿಯಾಗಿದ್ದಾಳೆ. ಈ ಕಾರಣಕ್ಕೆ ಸರಕಾರ ಮಹಿಳೆಯರಿಗೆ ಗೌರವ ನೀಡುವ ಉದ್ದೇಶದಿಂದ ಗ್ಯಾರಂಟಿಯನ್ನು ನೀಡಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಗೆ ಕೊಟ್ಟ ಕಾರಣ ಇಂದು ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
ಶಾರದೋತ್ಸವ ಸಮಿತಿ ಅಧ್ಯಕ್ಷ ಅಮಲರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ವಸಂತ ಕುಮಾರ್, ವೆಂಕಟ್ರಮಣ ಆಚಾರ್ಯ, ಪವನ್ ಕುಮಾರ್, ಲಕ್ಷ್ಮಣ ಗೌಡ ಕುಂಟಿಕಾನ ತೀರ್ತಾನಂದ ಗೌಡ ದುಗ್ಗಳ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಪ್ರಮೋದ್ ಕೆ ಎಸ್ ಸ್ವಾಗತಿಸಿದರು. ವಿನೋದ್ ರೈ ಕೊಳ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾರದಾ ಪೂಜೆ, ಸನ್ಮಾನ ನಡೆಯಿತು.