ಸೆ.30: ಕುಂಬ್ರದಲ್ಲಿ ಮಾರ್ನೆಮಿದ ಗೌಜಿ- ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ

0

ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಬಾಂತಲಪ್ಪು ಜನ ಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ ಕುಂಬ್ರದ ಮಾರ್ನೆಮಿದ ಗೌಜಿ ಆಯ್ದ ಸ್ಥಳಿಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ ಸೆ.30 ರಂದು ಸಂಜೆ ಕುಂಬ್ರ ಜಂಕ್ಷನ್‌ನಲ್ಲಿ ( ಕುಂಬ್ರ ಚೆನ್ನಪ್ಪ ರೈ ಮತ್ತು ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ) ನಡೆಯಲಿದೆ.

ಇದು ಆಯ್ದ ಸ್ಥಳಿಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯಾಗಿದ್ದು ಇದರಲ್ಲಿ ವಿಜೇತರಾದವರಿಗೆ ಪ್ರಥಮ 2 ಮುಡಿ ಅಕ್ಕಿ, ರನ್ನರ್ ಪ್ರಥಮ ಮತ್ತು ದ್ವಿತೀಯ ತಲಾ 1 ಮುಡಿ ಅಕ್ಕಿ ಹಾಗೂ ಶಾಶ್ವತ ಫಲಕ ಹಾಗೇ ವಿಶೇಷವಾಗಿ ಮಾರ್ನೇಮಿಯ ವಿವಿಧ ಗುಂಪು ಹಾಗೂ ವೈಯಕ್ತಿಕ ವೇಷಗಳಿಗೂ ಪ್ರತ್ಯೇಕ ಸ್ಪರ್ಧೆ ನಡೆಸಿ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ.


ಸಂಜೆ ಉದ್ಘಾಟನೆ:
ಸೆ.30 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ನೆಮಿದ ಗೌಜಿ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸಭಾಧ್ಯಕ್ಷತೆ ವಹಿಸಲಿದ್ದು ಬಂಟರ ಸಂಘದ ತಾಲೂಕು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆಶಯ ಮಾತುಗಳನ್ನಾಡಲಿದ್ದಾರೆ. ಸಾಧಕರಿಗೆ ಸನ್ಮಾನ ನಡೆಯಲಿದ್ದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮತ್ತು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರಿದ ಅಧ್ಯಕ್ಷ ಭರತ್ ಮುಂಡೋಡಿ ಸನ್ಮಾನ ನಡೆಸಿಕೊಡಲಿದ್ದಾರೆ. ಹಲವು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಬಾಂತಲಪ್ಪು ಜನ ಸೇವಾ ಸಮಿತಿಯ ಅಧ್ಯಕ್ಷ ಎ.ರಕ್ಷಿತ್ ರೈ ಮುಗೇರು, ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟರ್ ಪೂರ್ಣಿಮಾ ಹಾಗೂ ಬಾಂತಲಪ್ಪು ಜನ ಸೇವಾ ಸಮಿತಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೇ ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.


ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ವೇಷ ಸ್ಪರ್ಧೆ
ಸಂಸ್ಕೃತಿ ಉಳಿಸುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಎಂಬ ಧ್ಯೇಯದೊಂದಿಗೆ ನಡೆಯುವ ಕುಂಬ್ರದ ಮಾರ್ನೆಮಿದ ಗೌಜಿ ಒಂದು ವಿಭಿನ್ನ ಕಾರ್ಯಕ್ರಮವಾಗಿದೆ. ಇದರಲ್ಲಿ ಗ್ರಾಮೀಣ ಭಾಗದ ಕಲಾವಿದರ ಮಾರ್ನೆಮಿ ವೇಷಗಳಿಗೆ ಮಾತ್ರ ಆದ್ಯತೆಯನ್ನು ನೀಡಲಾಗುತ್ತಿದೆ. ವಿಶೇಷವಾಗಿ ಮೋಹನ್ ಆಳ್ವ ಮುಂಡಾಳಗುತ್ತು ಮತ್ತು ನೇಮಾಕ್ಷ ಸುವರ್ಣರವರ ಜುಗಲ್ ಬಂದಿ ನಿರೂಪಣೆ ಗಮನ ಸೆಳೆಯುತ್ತದೆ. ಅನುಭವಿ ತೀರ್ಪುಗಾರರ ತೀರ್ಪಿನ ಆಧಾರ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಗ್ರಾಮೀಣ ಕಲಾವಿದರಿಗೊಂದು ವೇದಿಕೆ
ಇದು ಕುಂಬ್ರದಿಂದಲೇ ಆರಂಭ…

ನವರಾತ್ರಿ ಎಂದರೆ ಅಲ್ಲಿ ವೇಷಗಳ ಅಬ್ಬರ ಇದ್ದೇ ಇರುತ್ತದೆ. ಹುಲಿ ವೇಷದ ಹಿಂದೆಯೂ ಒಂದು ದೊಡ್ಡ ಕಥೆ ಇದೆ. ವೇಷ ಹಾಕುವುದು ಕೇವಲ ಮನರಂಜನೆಗಾಗಿ ಅಲ್ಲ ಅಲ್ಲೊಂದು ಹರಕೆಯ ರೂಪವಿದೆ. ನವರಾತ್ರಿ ವೇಷ ಎಂದರೆ ಹುಲಿ, ಕರಡಿ, ಸಿಂಹ ಇತ್ಯಾದಿ ಆಗಿದೆ. ಇಂತಹ ವೇಷಗಳನ್ನು ಹಾಕುವವರು ಗ್ರಾಮೀಣ ಭಾಗದ ಕಲಾವಿದರೆ ಆಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹುಲಿವೇಷ ನರ್ತನಗಳನ್ನು ಆಯೋಜನೆ ಮಾಡಲಾಗುತ್ತದೆ. ಇದು ಒಳ್ಳೆಯ ವಿಚಾರ ಆದರೆ ಗ್ರಾಮೀಣ ಭಾಗದ ಕಲಾವಿದರು ಹಾಕುವ ವೇಷಗಳಿಗೂ ಒಂದು ವೇದಿಕೆ ಸಿಗಬೇಕು ಎಂಬ ನಿಟ್ಟಿನಲ್ಲಿ ಕುಂಬ್ರದ ಬಾಂತಲಪ್ಪು ಜನ ಸೇವಾ ಸಮಿತಿಯವರು ತೀರ್ಮಾನ ತೆಗೆದುಕೊಂಡು 2023 ರಲ್ಲಿ ಆರಂಭಿಸಿದ ಈ ಮಾರ್ನೆಮಿದ ಗೌಜಿ ಇಂದು ಬಹಳಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮೊದಲ ವರ್ಷವೇ ೨೦ ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು ಕಳೆದ ವರ್ಷ 40 ಕ್ಕೂ ಅಧಿಕ ತಂಡಗಳು ಭಾಗವಹಿಸಿದ ಹೆಗ್ಗಳಿಕೆ ಇದೆ. ಈ ವರ್ಷ ಕೆಲವೊಂದು ಕಡೆಗಳಲ್ಲಿ ಮಾರ್ನೆಮಿದ ಗೌಜಿ ಕಾರ್ಯಕ್ರಮ ಮಾಡ ಹೊರಟಿರುವುದು ಶ್ಲಾಘನೀಯ ಇದಕ್ಕೆಲ್ಲಾ ನಾಂದಿ ಹಾಡಿದ್ದು ಕುಂಬ್ರ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here