ನೆಲ್ಯಾಡಿ: ಕಳೆದ ಎರಡು ವರ್ಷಗಳಿಂದ ಬಜತ್ತೂರು ಗ್ರಾ.ಪಂ.ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಮತಿ ಕೆ.ಅವರು ಸೆ.30ರಂದು ನಿವೃತ್ತಿಯಾಗಲಿದ್ದಾರೆ.
ಇವರು 1985ರಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾ.ಪಂ.ಗೆ ಬಿಲ್ ಕಲೆಕ್ಟರ್ ಆಗಿ ಸೇರ್ಪಡೆಗೊಂಡಿದ್ದರು. 1999ರಲ್ಲಿ ಗ್ರೇಡ್-11 ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡು ಏಣ್ಮೂರು ಗ್ರಾ.ಪಂ.ನಲ್ಲಿ ಸೇವೆ ಆರಂಭಿಸಿದ್ದರು. ನಂತರ ಬಂಟ್ವಾಳ ತಾಲೂಕಿನ ಕೇಪು ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದು ಇಲ್ಲಿಂದ ಕಾರ್ಯದರ್ಶಿ ಗ್ರೇಡ್-1ಗೆ ಭಡ್ತಿಗೊಂಡು ಕಬಕ ಗ್ರಾ.ಪಂ.ಗೆ ವರ್ಗಾವಣೆಯಾಗಿದ್ದರು. ಕಡಬ ಗ್ರಾ.ಪಂ.ನಲ್ಲಿ ಕಾರ್ಯದರ್ಶಿಯಾಗಿದ್ದ ವೇಳೆ ಕೊಡಿಪ್ಪಾಡಿ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಒ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಪಿಡಿಒ ಆಗಿ ಭಡ್ತಿಗೊಂಡು ಪಾಣಾಜೆ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಬಜತ್ತೂರು ಗ್ರಾ.ಪಂ.ನಲ್ಲಿ ನಿಯೋಜನೆ ಮೇಲೆ ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಸುಮಾರು 26 ವರ್ಷ ಸೇವೆ ಸಲ್ಲಿಸಿರುವ ಇವರು ಸೆ.೩೦ರಂದು ನಿವೃತ್ತಿಯಾಗಲಿದ್ದಾರೆ.
ಮೂಲತ: ಕೇರಳ ರಾಜ್ಯದ ಬಾಯಾರು ನಿವಾಸಿಯಾಗಿರುವ ಚಂದ್ರಮತಿ ಕೆ.ಅವರು ಪ್ರಸ್ತುತ ವಿಟ್ಲದಲ್ಲಿ ವಾಸ್ತವ್ಯವಿದ್ದಾರೆ. ಇವರ ಪತಿ ಅಶೋಕ್ ಕುಮಾರ್ ಅವರು ಪ್ರೌಢಶಾಲಾ ನಿವೃತ್ತ ಶಿಕ್ಷಕ. ಪುತ್ರ ಅಭಿಷೇಕ್ ವ್ಯಾಸಂಗ ಮಾಡುತ್ತಿದ್ದಾರೆ.