ಬೆಳಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ

0

ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ- ದಾನಿಗಳಿಗೆ ಗೌರವ
ಶಿಕ್ಷಣದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು- ಭಾಗೀರಥಿ ಮುರುಳ್ಯ

ಕಾಣಿಯೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಒಂದಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕೇವಲ ಪುಸ್ತಕದಲ್ಲಿರುವ ವಿಚಾರಗಳು ದಾರಿದೀಪವಾಗುವುದಿಲ್ಲ. ಪಠ್ಯದ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕಲು ಕಲಿಯಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.8ರಂದು ನಡೆದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವ ಪೀಳಿಗೆಯು ಸಾಮಾಜಿಕ ಜಾಲತಾಣದಿಂದ ಹೊರಬಂದು ಶೈಕ್ಷಣಿಕ ಚಟುವಟಿಕೆ ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದ ಶಾಸಕರು ಕಾಲೇಜು ಅಭಿವೃದ್ಧಿ ಆಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು, ವಿದ್ಯಾರ್ಥಿಗಳಿಗೆ ಇನ್ನಷ್ಟು ಶಿಕ್ಷಣವನ್ನು ಕೊಟ್ಟಾಗ ಸಮಾಜದಲ್ಲಿ ಉತ್ತಮ ನಾಯಕರನ್ನಾಗಿ ತಯಾರು ಮಾಡಬೇಕು ಎಂಬ ನಿಟ್ಟಿನಲ್ಲಿ ತೊಡಗಿಸಿಕೊಂಡ ಅಭಿವೃದ್ಧಿ ಸಮಿತಿಯವರ ಕಾರ್ಯ ಶ್ಲಾಘನೀಯ ಎಂದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಾವು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಅಂಕ ಗಳಿಸುವುದರ ಕಡೆಗೆ ಒತ್ತು ನೀಡದೆ‌ ಜೀವನದಲ್ಲಿ ಗುರಿಯನ್ನು ಸಾಧಿಸುವುದರ ಕಡೆಗೆ ವಿದ್ಯಾರ್ಥಿಗಳ ಗಮನವಿರಬೇಕೆಂದು ಎಂದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಂಕರ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನಹರಿಸಬೇಕು ಎಂದರು.


ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅರ್ಪಿತಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಲಿಖಿತ, ಪ್ರತೀಕ್, ದಿವ್ಯ, ವಿಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ವಚನಾ ಪ್ರದೀಪ್ ಅರುವಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಲಿಖಿತ ಮತ್ತು ಪೃಥ್ವಿ ಪ್ರಾರ್ಥಿಸಿದರು. ಐಕ್ಯುಎಸಿ ಸಂಚಾಲಕ ಮಹೇಶ್ ಬಿ ಎಸ್, ಸ್ವಾಗತಿಸಿದರು, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ವಿನುತ ವಿ ವಂದಿಸಿದರು. ವಿದ್ಯಾರ್ಥಿನಿಯಾರಾದ ಲಿಖಿತ ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಬೋಧಕ ವರ್ಗ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

ದಾನಿಗಳಿಗೆ ಗೌರವ
ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಶುಲ್ಕ‌ ಭರಿಸಿದ‌ 26 ಮಂದಿ ದಾನಿಗಳಿಗೆ ಹಾಗೂ ಕಾಲೇಜಿನ ಮಧ್ಯಾಹ್ನದ ಅನ್ನದಾಸೋಹ ಕಾರ್ಯಕ್ರಮಕ್ಕೆ ಸಾಮಾಗ್ರಿಗಳನ್ನು ಒದಗಿಸಿದ 20 ಮಂದಿ ದಾನಿಗಳಿಗೆ ಗೌರವವನ್ನು ಸಲ್ಲಿಸಿದರು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಕಾಲೇಜಿನ ಅಭಿವೃದ್ದಿಯಲ್ಲಿ ಎಲ್ಲರ ಸಹಕಾರ ಅಗತ್ಯ- ವಚನಾ ಪ್ರದೀಪ್ ಅರುವಗುತ್ತು

ಬೆಳಂದೂರು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಚನಾ ಪ್ರದೀಪ್ ಅರುವಗುತ್ತು ಅವರು ಪ್ರಾಸ್ತಾವಿಕ ಮಾತನಾಡಿ, ಭವಿಷ್ಯದಲ್ಲಿ ಉನ್ನತ ಮಟ್ಟದ ಉದ್ಯೋಗವನ್ನು ಪಡೆದುಕೊಂಡಾಗ ನಾವು ನಡೆದುಕೊಂಡು ಬಂದ ದಾರಿಯನ್ನು ಮರೆಯಬಾರದು. ನಮ್ಮ ಭವಿಷ್ಯದ ಯಶಸ್ವಿಗೆ ಸಹಕರಿಸಿದವರನ್ನು ನಾವು ಸ್ಮರಣೆ ಮಾಡಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಾಲೇಜಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆದುಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು. ದಾನಿಗಳ ಸಹಕಾರದಿಂದ ಕಾಲೇಜು ಅಭಿವೃದ್ಧಿಗೊಳ್ಳುತ್ತಿದ್ದು, ಊರಿನ ಕಾಲೇಜು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

LEAVE A REPLY

Please enter your comment!
Please enter your name here