ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಕ್ರೀಡಾಕೂಟಕ್ಕೆ ವಿದ್ಯುಕ್ತ ತೆರೆ

0

*ರಾಜ್ಯ, ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದ ಶಿಕ್ಷಣ ಸಂಸ್ಥೆಯಾಗಿದೆ-ಅಶೋಕ್ ಕುಮಾರ್ ರೈ
*ಕ್ರೀಡಾಮನೋಭಾವದಿಂದ ನಿಮ್ಮ ಘನತೆ, ಪ್ರಾಮಾಣಿಕತೆ ಹೆಚ್ಚುತ್ತದೆ-ಜೋಸ್ಲಿನ್ ಜೆ. ಫೆರ್ನಾಂಡಿಸ್

ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಮೊ|ಆಂಟನಿ ಪತ್ರಾವೋರವರ ಸ್ಮರಣಾರ್ಥ ಅ.10 ಮತ್ತು 11ರಂದು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯ ವಾರ್ಷಿಕ ಕ್ರೀಡಾಕೂಟ ಸಮಾಪನಗೊಂಡಿತು.


ಅ.೧೦ರಂದು ಬೆಳಿಗ್ಗೆ ಕ್ರೀಡಾಕೂಟ ಉದ್ಘಾಟನೆಗೊಂಡು ಅ.11ರಂದು ಸಂಜೆಯವರೆಗೆ ನಡೆಯಿತು. ಕ್ರೀಡಾಕೂಟ ಮುಕ್ತಾಯಗೊಂಡು ಸಮಾರೋಪ ಸಮಾರಂಭ ನಡೆದ ಬಳಿಕ ಕ್ರೀಡಾಜ್ಯೋತಿಯನ್ನು ಸ್ತಂಭನಗೊಳಿಸಿ ಕ್ರೀಡಾಕೂಟಕ್ಕೆ ತೆರೆ ಎಳೆಯಲಾಯಿತು. ಬಳಿಕ ಕ್ರೀಡಾಧ್ವಜದ ಅವರೋಹಣ ನಡೆಸಿ ಮುಂದಿನ ಕ್ರೀಡಾಕೂಟದ ಸಾರಥ್ಯ ವಹಿಸಲಿರುವ ಸಂಸ್ಥೆಯ ಮುಖ್ಯಸ್ಥರಿಗೆ ಧ್ವಜ ಹಸ್ತಾಂತರಿಸಲಾಯಿತು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕ್ರೀಡಾಕೂಟದುದ್ದಕ್ಕೂ ಬ್ಯಾಂಡ್ ವಾದ್ಯ ಘೋಷ, ಚೆಂಡೆಮೇಳ ಕ್ರೀಡಾಕೂಟಕ್ಕೆ ಮೆರುಗು ತಂದಿತ್ತು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯ, ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದ ಶಿಕ್ಷಣ ಸಂಸ್ಥೆಯಾಗಿದೆ:
ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲೇ ಉತ್ತಮ ಸಂಸ್ಥೆಯಾಗಿ ಮೂಡಿಬಂದಿದೆ. ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಬೆಳೆಸುವುದು ಗಿಡವನ್ನು ನೆಟ್ಟು ಬೆಳೆಸಿದ ಹಾಗೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಷಾನ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಿದ ಕೀರ್ತಿ ಈ ಸಮೂಹ ಸಂಸ್ಥೆಗೆ ಸಲ್ಲುತ್ತದೆ. ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ನೀಡುವ ಸಂಸ್ಥೆಯಾಗಿದೆ. ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಳಿತವರು, ರಾಜ್ಯ, ದೇಶದ ಪ್ರಧಾನ ಹುದ್ದಯೆನ್ನು ಅಲಂಕರಿಸಿದವರು ಇದ್ದಾರೆ. ಕ್ರೀಡೆಯಲ್ಲಿಯೂ ಉತ್ತಮ ಕ್ರೀಡಾಪಟುಗಳನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಇಂದಹ ಸಂಸ್ಥೆ ಪಡೆದುಕೊಂಡ ನಾವು ಧನ್ಯರು. ಎಂದು ಹೇಳಿ ಶುಭಹಾರೈಸಿದರು.

ಕ್ರೀಡಾಮನೋಭಾವದಿಂದ ನಿಮ್ಮ ಘನತೆ, ಪ್ರಾಮಾಣಿಕತೆ ಹೆಚ್ಚುತ್ತದೆ:
ಮುಖ್ಯ ಅತಿಥಿ ಪುತ್ತೂರು ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಜೋಸ್ಲಿನ್ ಜೆ. ಫೆರ್ನಾಂಡಿಸ್ ಮಾತನಾಡಿ ಇಂದಿನ ಕ್ರೀಡಾಕೂಟ ಉತ್ತಮ ಕಾರ್ಯಕ್ರಮವಾಗಿದೆ. ಈ ಕ್ರೀಡಾಕೂಟದಿಂದ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲಿ ನಿಮಗೆ ಸಣ್ಣ ಸ್ಪರ್ಧೆಯಿರುತ್ತದೆ. ಆದರೆ ಮುಂದಿನ ಜೀವನದಲ್ಲಿ ದೊಡ್ಡ ಸ್ಪರ್ಧೆಗಳು ಬರುತ್ತದೆ. ಹಲವು ಸವಾಲುಗಳನ್ನು ಎದುರಿಸುತ್ತೀರಿ. ಆಗ ಕ್ರೀಡಾಮನೋಭಾವ ನಿಮಗೆ ಸಹಾಯವಾಗುತ್ತದೆ. ನಿಮ್ಮ ಗುರಿಯನ್ನು ತಲುಪಲು ಸಹಾಯವಾಗುತ್ತದೆ. ಕ್ರೀಡಾಮನೋಭಾವದಿಂದ ನಿಮ್ಮ ಘನತೆ, ಪ್ರಾಮಾಣಿಕತೆ, ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದ ಅವರು ಅವಕಾಶ ನೀಡಿದಕ್ಕೆ ಕೃತಜ್ಞತೆ ತಿಳಿಸಿ ಶುಭಹಾರೈಸಿದರು.

ಕ್ರೀಡೆಯಿಂದ ಸೋಲು, ಗೆಲುವು ಸ್ವೀಕರಿಸುವ ಮನೋಭಾವ ಸಿಗುತ್ತದೆ:
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಎರಡು ದಿನ ಕ್ರೀಡಾಕೂಟದ ಹಬ್ಬ ನಡೆದಿದೆ. ಸಂತೋಷದಿಂದ ಭಾಗವಹಿಸಿದ್ದೇವೆ. ನಿಮ್ಮ ಪ್ರತಿಭೆಗಳನ್ನು ತೋರಿಸಲು ಸಹಕಾರಿಯಾಗಿದೆ. ವಿವಿಧ ರೀತಿಯಲ್ಲಿ ಸೇವೆ, ಪರಸ್ಪರ ಸಹಕಾರ, ತ್ಯಾಗಕ್ಕೆ ಅವಕಾಶ ಸಿಕ್ಕಿದೆ. ಇದರ ಹಿಂದೆ ಬಹಳಷ್ಟು ಜನ ದುಡಿದಿದ್ದಾರೆ. ಪರಿಶ್ರಮ ಪಟ್ಟಿದ್ದಾರೆ. ಕ್ರೀಡೆಯಿಂದ ಸೋಲು ಗೆಲುವನ್ನು ಸ್ವೀಕರಿಸುವ ಮನೋಭಾವ, ಸಹನೆ, ತಾಳ್ಮೆ ಸಿಗುತ್ತದೆ. ಮಾಯದ ದೆ ದೇವುಸ್ ಸಂಸ್ಥೆ ಕುಟುಂಬ ಇದ್ದಂತೆ. ನಾವೆಲ್ಲರೂ ಆ ಕುಟುಂಬ ಸದಸ್ಯರು. ನಯ ವಿನಯ, ಭಯಭಕ್ತಿ ಬೆಳೆಸಿದರೆ ನಾವು ಕಲಿತ ಶೀಕ್ಷಣಕ್ಕೆ ಬೆಲೆ ಬರುತ್ತದೆ. ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ಬದುಕಿ ನಮ್ಮ ಸಂಸ್ಥೆಗಳಿಗೆ ಗೌರವ ತರಬೇಕು ಎಂದರು.

ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರಾದ ವಂ|ಮ್ಯಾಕ್ಸಿಮ್ ಡಿಸೋಜ ಎಮ್., ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರೊಸಲಿನ್ ಲೋಬೊ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಹ್ಯಾರಿ ಡಿಸೋಜ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಾನೆಟ್ ಡಿಸೋಜ, ಸಂತ ಫಿಲೋಮಿನಾ ಮಹಿಳೆಯರ ಹಾಸ್ಟೆಲ್ ವಾರ್ಡನ್ ಸಿಸ್ಟರ್ ಲೂರ್ದು ಮೇರಿ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಜ್ಯೋತಿ ಸ್ಥಂಭನ:
ಕ್ರೀಡಾಕೂಟ ಮುಕ್ತಾಯಗೊಂಡು ಸಮಾರೋಪ ಸಮಾರಂಭ ನಡೆದ ಬಳಿಕ ಕ್ರೀಡಾಂಗಣದಲ್ಲಿನ ಪ್ರಜ್ವಲನಾ ಪೀಠದಲ್ಲಿ ಬೆಳಗುತ್ತಿದ್ದ ಕ್ರೀಡಾಜ್ಯೋತಿಯನ್ನು ಸ್ಥಂಭನಗೊಳಿಸಲಾಯಿತು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮೂಲ್ಯರವರು ಸ್ಥಂಭನಗೊಳಿಸಿ ಕ್ರೀಡಾಕೂಟಕ್ಕೆ ತೆರೆ ಎಳೆಯಲಾಯಿತು.

ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಭಗಿನಿ ಲೋರಾ ಪಾಯಸ್ ಸ್ವಾಗತಿಸಿದರು. ಸಹಶಿಕ್ಷಕಿ ದೀಪಿಕಾ ವಂದಿಸಿದರು. ಸರಿತಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಏಳು ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು ಸಹಕರಿಸಿದರು.

ದೇವರ ಆಶೀರ್ವಾದ, ಎಲ್ಲರ ಸಹಕಾರದಲ್ಲಿ ಕ್ರೀಡಾಕೂಟ ಯಶಸ್ವಿ
ಎರಡು ದಿನಗಳ ಕಾಲ ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡಾಕೂಟ ದೇವರ ಆಶೀರ್ವಾದ, ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದೆ. ದೇವರನ್ನು ಸ್ಮರಿಸಿ, ಎಲ್ಲರ ಉಪಕಾರ ಸ್ಮರಣೆ ಮಾಡಿಕೊಳ್ಳುತ್ತಾ 2025-26ನೇ ಸಾಲಿನ ಕ್ರೀಡಾಕೂಟ ಮುಕ್ತಾಯಗೊಂಡಿದೆ. ಕ್ರೀಡಾಕೂಟದ ಅತಿಥೇಯ ವಹಿಸಿದ್ದ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಗೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ
ವಂ|ಲಾರೆನ್ಸ್ ಮಸ್ಕರೇನಸ್
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ

ಕ್ರೀಡಾಧ್ವಜ ಅವರೋಹಣ, ಧ್ವಜ ಹಸ್ತಾಂತರ
ಕ್ರೀಡಾಜ್ಯೋತಿ ಸ್ತಂಭನಗೊಳಿಸಿದ ಬಳಿಕ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಫಾ|ಲಾರೆನ್ಸ್ ಮಸ್ಕರೇನಸ್‌ರವರು ಕ್ರೀಡಾ ಧ್ವಜದ ಅವರೋಹಣ ನಡೆಸಿ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ತೆರೆ ಎಳೆದು ಕ್ರೀಡಾಕೂಟ ಮುಕ್ತಾಯದ ಅಧಿಕೃತ ಹೇಳಿಕೆ ನೀಡಿದರು. ಬಳಿಕ 2026-26ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟದ ಅತಿಥೇಯ ವಹಿಸಲಿರುವ ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೋರವರಿಗೆ ಸಂಚಾಲಕರು ಕ್ರೀಡಾಧ್ವಜ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here