ಉಪ್ಪಿನಂಗಡಿ: ಬಿಪಿಎಲ್ ಪಡಿತರ ಚೀಟಿ ರದ್ದು – ಮರುಪರಿಶೀಲನೆಗೆ ಹಿರೇಬಂಡಾಡಿ ಸಾಮಾನ್ಯ ಸಭೆಯಲ್ಲಿ ಆಗ್ರಹ

0

ಉಪ್ಪಿನಂಗಡಿ: ಗ್ರಾಮದಲ್ಲಿ ಕಡುಬಡವರ ಬಿಪಿಎಲ್ ಪಡಿತರ ಚೀಟಿಗಳನ್ನು ಏಕಾಏಕಿ ರದ್ದುಪಡಿಸಲಾಗಿದೆ. ಈ ಬಗ್ಗೆ ಮರು ಪರಿಶೀಲಿಸಬೇಕೆಂಬ ಆಗ್ರಹ ಹಿರೇಬಂಡಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.


ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಚಂದ್ರಾವತಿ, ಗ್ರಾಮದ ಸುಮಾರು 70ರಷ್ಟು ಬಡ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ಯಾವುದೇ ಸೂಚನೆಯನ್ನು ರದ್ದುಗೊಳಿಸಲಾಗಿದೆ. ಆಯಾ ಪಡಿತರರಿಗೆ ಕಾರಣ ಕೇಳಿ ನೊಟೀಸ್ ನೀಡಬಹುದಿತ್ತು. ಆದರೆ ಅದು ಮಾಡದೇ ಏಕಾಏಕಿ ರದ್ದುಗೊಳಿಸಿರುವುದು ಸರಿಯಲ್ಲ ಎಂದರು. ಇದಕ್ಕೆ ಸದಸ್ಯ ಹಮ್ಮಬ್ಬ ಶೌಕತ್ ಅಲಿ ಪ್ರತಿಕ್ರಿಯಿಸಿ, 2015ರಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಪ್ರಯತ್ನದಿಂದ ಗ್ರಾಮದ ಮೂಲೆ ಮೂಲೆಗಳಲ್ಲಿ ಬಡವರನ್ನು ಗುರುತಿಸಿ ಗ್ರಾ.ಪಂ. ಕಚೇರಿಯಲ್ಲೇ ರಜಾದಿನಗಳಲ್ಲೂ ಕೂಡಾ ಅವರಿಗೆ ಬಿಪಿಎಲ್ ಪಡಿತರ ಚೀಟಿ ಒದಗಿಸಿದ್ದೇವೆ. ಆದರೆ ಈಗ ಇಂತಹವರಿಗೆ ಪಡಿತರ ಚೀಟಿ ರದ್ದುಗೊಂಡಿರುವುದರಿಂದ ಸಮಸ್ಯೆಯಾಗಿದೆ. ಆದ್ದರಿಂದ ಇದನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಚರ್ಚೆಯಾಗಿ ನಿರ್ಣಯ ಅಂಗೀಕರಿಸಲಾಯಿತು.


ಸದಸ್ಯೆ ಗೀತಾ ದಾಸರಮೂಲೆ ಮಾತನಾಡಿ, ನನ್ನ ಪ್ರಯತ್ನದಿಂದಾಗಿ ಶಾಸಕರು ಹರಿನಗರದಲ್ಲಿ ರಸ್ತೆಗೆ ಅನುದಾನವನ್ನು ಒದಗಿಸಿದ್ದರು. ಆದರೆ ಅದನ್ನು ಬದಲಾವಣೆ ಮಾಡಿ ಆ ಅನುದಾನದ ಬಳಕೆಗೆ ಬೇರೆ ಕಡೆ ಸ್ಥಳ ಗುರುತಿಸಿರುವುದು ಸರಿಯಲ್ಲ. ಅದನ್ನು ಬದಲಾವಣೆ ಮಾಡಬಾರದು ಎಂದರು.


ಸದಸ್ಯ ನಿತಿನ್ ತಾರಿತ್ತಡಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಕಷ್ಟು ಅನುದಾನವಿದ್ದರೂ ಒದಗಿಸಲು ಗ್ರಾ.ಪಂ.ನಿಂದ ಸಾಧ್ಯವಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಿಡಿಒ ಸತೀಶ್ ಬಂಗೇರ, ಪಂಚಾಯತ್‌ಗೆ ಬರಬೇಕಾದ ತೆರಿಗೆ ಹಾಗೂ ನೀರಿನ ಕರ ಮೊದಲು ಪಾವತಿಸಲಿ. ಆ ಬಳಿಕ ಅನುದಾನವನ್ನು ನೀಡುವಲ್ಲಿ ಯಾವುದೇ ಹಿಂದೇಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಇಲ್ಲಿ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಈಗ ಇರುವ ವೇತನಕ್ಕೆ ಮೂರು ಸಾವಿರ ಹೆಚ್ಚುವರಿಗೊಳಿಸಿ ನೀಡುವಂತೆ ಹಾಗೂ ಸರಕಾರ ನಿಗದಿಪಡಿಸಿದ ವೇತನ ನೀಡುವಂತೆ ಹಮ್ಮಬ್ಬ ಶೌಕತ್ ಅಲಿ ಆಗ್ರಹಿಸಿದರು. ಸ್ವಚ್ಛ ಗ್ರಾಮ ಯೋಜನೆಯಡಿ ಮಲತ್ಯಾಜ್ಯ ಘಟಕ ಗ್ರಾಮದಲ್ಲಿ ತೆರೆಯಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸೂಕ್ತ ಜಾಗ ಗುರುತಿಸಿ, ಅದನ್ನು ಜಿ.ಪಂ. ಅಧಿಕಾರಿಗಳ ಗಮನಕ್ಕೆ ತನ್ನಿ. ಇಂತಹ ಮೂಲಭೂತ ಸೌಕರ್ಯ ಗ್ರಾಮಕ್ಕೆ ಅಗತ್ಯ ಇದೆ ಎಂದು ಸದಸ್ಯರು ಸಲಹೆ ನೀಡಿದರು.


ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಾಂಭವಿ, ಸದಸ್ಯರಾದ ನಾರಾಯಣ, ಲಕ್ಷ್ಮೀಶ, ಹೇಮಂತ, ವಾರಿಜಾಕ್ಷಿ, ಸತೀಶ್ ಶೆಟ್ಟಿ ಹೆನ್ನಾಳ, ಉಷಾ ಎಚ್., ಭವಾನಿ, ಸವಿತಾ, ಹೇಮಾವತಿ ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಸತೀಶ ಬಂಗೇರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here