ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಪಡೆದು, ಅಮೆರಿಕದಲ್ಲಿ ಉದ್ಯೋಗ ಪಡೆದ ಯುವ ವಿದ್ವಾಂಸನಿಗೆ ಗೌರವ
ಪುತ್ತೂರು: ತನ್ನ ಸತತ ಪ್ರಯತ್ನದ ಮೂಲಕ ಉನ್ನತ ವಿದ್ಯಾಭ್ಯಾಸವನ್ನು ಪಡೆದು, ಅಮೆರಿಕಾದಲ್ಲಿ ಉದ್ಯೋಗವನ್ನು ಪಡೆದ, ಸಾಲ್ಮರದ ಮನೆತನದ ಜುಬೈದ ಹಾಗೂ ಅಜೀಜ್ ದಂಪತಿಯ ಹಿರಿಯ ಪುತ್ರ ತ್ವಾಹ ಹುದವಿಗೆ, ಅಭಿನಂದನಾ ಸಮಾರಂಭ ಅ.11ರಂದು ಸಾಲ್ಮರದಲ್ಲಿ, ಸಾಲ್ಮರ ಅಬ್ಬು ಹಾಜಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸುಲೈಮಾನ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು.

ತ್ವಾಹ ಹುದವಿಯವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಟ್ರಸ್ಟಿನ ಸಂಚಾಲಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಾತನಾಡಿ ಸ್ವಾತಂತ್ರ ಹೋರಾಟಗಾರ, ದಿವಂಗತ ಅಬ್ಬು ಹಾಜಿಯವರ ಹೆಸರಿನಲ್ಲಿ ಹುಟ್ಟಿಕೊಂಡ ಈ ಟ್ರಸ್ಟ್ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಕೊರೋನಾ ಸಮಯದಲ್ಲಿ ಸಕಾಲಿಕ ಕಾರ್ಯಕ್ರಮಗಳ ಮೂಲಕ, ಜನಮೆಚ್ಚಿಗೆಯನ್ನು ಪಡೆದುಕೊಂಡಿದೆ. ಪ್ರಸ್ತುತ ಸಾಲ್ಮರದ ಮನೆತನದ ಯುವಕ, ತನ್ನ ಕಠಿಣ ಪರಿಶ್ರಮದ ಮೂಲಕ ವಿದ್ಯಾಭ್ಯಾಸವನ್ನು ಪಡೆದು, ಅಮೇರಿಕಾದಲ್ಲಿ ಉದ್ಯೋಗ ಪಡೆದಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ, ಅವರ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಟ್ರಸ್ಟಿನ ಇನ್ನೋರ್ವ ಹಿರಿಯ ಸದಸ್ಯ, ದಕ್ಷಿಣ ಕನ್ನಡ ಜಿಲ್ಲೆಯ ಗಲ್ಫ್ ರಿಟರ್ನ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಹಂಝ ಹಾಜಿ ಮಿತ್ತೂರ್ ಮಾತನಾಡಿ, ಶಿಕ್ಷಣ ಪ್ರೇಮಿಯೂ ಖ್ಯಾತ ಸಮಾಜಸೇವಕರು ಆಗಿದ್ದ ದಿವಂಗತ ಅಬ್ಬು ಹಾಜಿಯವರ ಜೀವನವನ್ನು ಮೆಲುಕು ಹಾಕಿದರು. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ, ಇತರ ಯುವ ಸಮುದಾಯಕ್ಕೆ ಇದರಿಂದ ಪ್ರೇರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸಾಲ್ಮರ ಸಯ್ಯದ್ ಮಲೆ ಜಮಾಆತ್ ಕಮಿಟಿ ಅಧ್ಯಕ್ಷ ನಾಟಿವೈದ್ಯ ಸಂಶುದ್ದೀನ್ ಸಾಲ್ಮರ ಮಾತನಾಡಿ ನಮ್ಮ ಮನೆತನದ ಯುವಕ ಇಂತಹ ಉನ್ನತ ಉದ್ಯೋಗಕ್ಕೆ ಏರಿರೋದು, ನಮ್ಮೆಲ್ಲರಿಗೆ ಸಂತಸ ತಂದಿದೆ ಎಂದು ಶುಭ ಹಾರೈಸಿದರು.
ಸಮಾಜ ಸೇವಕ, ದ.ಕ.ಜಿಲ್ಲಾ ಗಲ್ಫ್ ರಿಟರ್ನ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಯೂಸುಫ್ ಆಲಡ್ಕ, ಸೈಯದ್ ಮಲೆ ಜಮಾಆತ್ ಕಮಿಟಿಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಕಾರ್ಜಾಲ್ ಜುಮಾ ಮಸ್ಜಿದ್ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್ ಸೋಂಪಾಡಿ, ಎಂ ಅಬೂಬಕ್ಕರ್ ಮಿತ್ತೂರ್, ಮೊದಲಾದವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸನ್ಮಾನಿತಗೊಂಡ ತ್ವಾಹ ಹುದವಿ ಮಾತನಾಡಿ ‘ಈ ಸಮಾರಂಭ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಾಗಿವೆ’ಎಂದು ಭಾವುಕರಾದರು. ಆಯೋಜಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಅಬ್ದುಲ್ ಸಮ್ಮದ್ ಸೋಂಪಾಡಿ, ಅನ್ವಾರುದ್ದೀನ್ ಊರಮಾಲ್, ಅನಿವಾಸಿ ಉದ್ಯಮಿಗಳಾದ ಖಾಲಿದ್ (ಆಚಿ)ಸಾಲ್ಮರ, ಇಕ್ಬಾಲ್ ಸಾಲ್ಮರ, ಮುಸ್ತಾಕ್ ಸಾಲ್ಮರ, ಅಲಿ ಸಾಲ್ಮರ, ಎಂ ಹನೀಫ್ ಮಿತ್ತೂರ್, ಅಬ್ದುಲ್ ಅಜೀಜ್ ಮುಂಡೋಳೆ, ನವಾಜ್ ಅಹಮದ್ ಸಾಲ್ಮರ, ಟ್ರಸ್ಟಿನ ವಿವಿಧ ಪದಾಧಿಕಾರಿಗಳು, ಕುಟುಂಬಸ್ಥರೂ, ಮೊದಲಾದವರು ಉಪಸ್ಥಿತರಿದ್ದರು.
ಟ್ರಸ್ಟಿನ ಹಿರಿಯ ಸದಸ್ಯ, ವಿದ್ವಾಂಸರಾಗಿರುವ ಉಮ್ಮರ್ ಫೈಝಿ ಉಸ್ತಾದ್ ರವರ ದುವಾ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸಾಲ್ಮರ ಮೊಹಮ್ಮದ್ ಶರೀಫ್, ಟ್ರಸ್ಟಿನ ಮುಂದಿನ ಯೋಜನೆಗಳನ್ನು ತಿಳಿಯಪಡಿಸಿ, ತ್ವಾಹ ಹುದವಿಗೆ ಶುಭ ಹಾರೈಸಿದರು. ಟ್ರಸ್ಟಿನ ಸ್ಥಾಪಕ ಸದಸ್ಯ, ಅನಿವಾಸಿ ಉದ್ಯಮಿ ನೌಫಲ್ ಸಾಲ್ಮರ ಸ್ವಾಗತಿಸಿ, ಟ್ರಸ್ಟಿನ ಸ್ಥಾಪಕ ಸದಸ್ಯ, ಉದ್ಯಮಿ ಕಬೀರ್ ಸಾಲ್ಮರ ವಂದಿಸಿದರು.