ಕೋಟ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ವಿಜಯಲಕ್ಷ್ಮಿ ಶಿಬರೂರು ಆಯ್ಕೆ

0

ಪುತ್ತೂರು: ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಸದ್ಭಾವನಾ ರಾಜ್ಯೋತ್ಸವ ಕಾರ್ಯಕ್ರಮ ಈ ಬಾರಿ ನ.16ರಂದು ಸಂಜೆ ಉಡುಪಿ ಜಿಲ್ಲೆಯ ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಪ್ರತಿವರ್ಷ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ಬರಲಾಗಿದ್ದು ಈ ಬಾರಿ ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರನ್ನು ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 25 ಸಾವಿರ ಮೌಲ್ಯದ ಬೆಳ್ಳಿ ಫಲಕ ಒಳಗೊಂಡಿದೆ.

ವಿಶೇಷ ಪುರಸ್ಕಾರವನ್ನು ವಿಶ್ವವಿಖ್ಯಾತ ರಥಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ ಅವರಿಗೆ ನೀಡಲಿದೆ. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಧನಸಹಾಯ, ವಿದ್ಯಾರ್ಥಿ ವೇತನ, ಸ್ಥಳೀಯ ಮಕ್ಕಳಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ನೆರವು ಸೇರಿದಂತೆ ನಾನಾ ಸಮಾಜಮುಖಿ ಕಾರ್ಯಕ್ರಮ ಈ ವೇದಿಕೆಯಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಪಂಚವರ್ಣ ಮಹಿಳಾ ಮಂಡಲದಿಂದ ಯಕ್ಷರೂಪಕ, ಕುಂಭಾಶಿ ಮಯೂರಿ ನೃತ್ಯ ತಂಡದಿಂದ ನೃತ್ಯ, ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಸಿಂಚನ, ಚಾಪರ್ಕ ತಂಡದಿಂದ ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಹಾಗೂ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ತಿಳಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರಾಗಲಿರುವ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಸೆ.16ರಂದು ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬೆಂಗಳೂರು ವಾರ್ತಾ ಸೌಧದ ಸಮಾಲೋಚನಾ ಸಭಾಂಗಣದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2017ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿತ್ತು. ಕೋಲಾರ ಸರಕಾರ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕಂಚಿಕಲ್ಲು ನಿವಾಸಿ ವಿಜಯ್ ಕೆ. ಅವರ ಪತ್ನಿಯಾಗಿರುವ ವಿಜಯಲಕ್ಷ್ಮಿ ಅವರು ಮೂಲತಃ ಮಂಗಳೂರು ಶಿಬರೂರಿನವರು. ಎಂ.ಸಿ.ಜೆ. ಮತ್ತು ಎಲ್.ಎಲ್.ಬಿ. ವಿದ್ಯಾಭ್ಯಾಸ ಮಾಡಿರುವ ವಿಜಯಲಕ್ಷ್ಮಿ ಒಟ್ಟು ೨೫ ವರ್ಷ ವೃತ್ತಿ ಅನುಭವ ಹೊಂದಿದ್ದಾರೆ. ಜನವಾಹಿನಿ, ಆಕಾಶವಾಣಿ, ಸಂಯುಕ್ತ ಕರ್ನಾಟಕ, ಈ ಟಿವಿ, ಟಿವಿ 9, ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಮಾಧ್ಯಮ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ ಸ್ವಂತ ಸಂಸ್ಥೆಯಾದ ವಿಜಯ ಟೈಮ್ಸ್ ಹಾಗೂ ಸೃಷ್ಟಿ ಮೀಡಿಯಾ ಅಕಾಡೆಮಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇವರು ತನಿಖಾ ಪತ್ರಿಕೋದ್ಯಮದಲ್ಲಿ ದೇಶದಲ್ಲಿಯೇ ಗುರುತಿಸಿಕೊಂಡ ದಿಟ್ಟ ಪತ್ರಕರ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here