ಪುತ್ತೂರು:ಗ್ರಾಮ ಪಂಚಾಯತ್‌ನ ಸಾರ್ವಜನಿಕ ರಸ್ತೆ ಬದಿ ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಲು ಮುಂದಾಗಿರುವುದನ್ನು ಅ.24ರಂದು ತಾ.ಪಂ., ಪೊಲೀಸರ ಸಹಕಾರದೊಂದಿಗೆ ಗ್ರಾಮ ಪಂಚಾಯತ್‌ನಿಂದ ತೆರವುಗೊಳಿಸಿದ ಘಟನೆ ಬಲ್ನಾಡು ಗ್ರಾಮದ ಕೊಪ್ಪಳ-ಹಸಂತಡ್ಕ ಎಂಬಲ್ಲಿ ನಡೆದಿದೆ.
ಬಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಳ-ಹಸಂತಡ್ಕ ಸಾರ್ವಜನಿಕ ರಸ್ತೆಯ ಒಂದು ಬದಿ ಖಾಸಗಿ ವ್ಯಕ್ತಿಯೋರ್ವರು ಈಟು ಮರದ ಕಂಬ ಹಾಕಿ ಬೇಲಿ ಹಾಕಿ ರಸ್ತೆ ಅತಿಕ್ರಮಿಸಲು ಮುಂದಾಗಿದ್ದರು ಎಂದು ಪಂಚಾಯತ್‌ಗೆ ಸಾರ್ವಜನಿಕರು ದೂರು ಅರ್ಜಿ ಸಲ್ಲಿಸಿದ್ದರು.ಈ ದೂರಿನ ಹಿನ್ನೆಲೆಯಲ್ಲಿ, ಬೇಲಿ ಹಾಕಿದ ವ್ಯಕ್ತಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು.ಆದರೆ ಬೇಲಿ ತೆರವುಗೊಳಿಸದೇ ಇದ್ದುದರಿಂದ ಗ್ರಾಮ ಪಂಚಾಯತ್‌ನಿಂದ ತಾಲೂಕು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು.
ಅ.24ರಂದು ತಾ.ಪಂ ಸಹಾಯಕ ನಿರ್ದೇಶಕ ವಿಲ್ಪ್ರೆಡ್ ರೋಡ್ರಿಗಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೇಲಿಯನ್ನು ತೆರವುಗೊಳಿಸಲಾಯಿತು.ತಾ.ಪಂ.ನ ಭರತ್, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ಚರಿ ಬಿ.ಆರ್.,ಉಪಾಧ್ಯಕ್ಷ ರವಿಚಂದ್ರ, ಸದಸ್ಯೆ ವಸಂತಿ, ಪಿಡಿಓ ದೇವಪ್ಪ ಪಿ.ಆರ್., ಕಾರ್ಯದರ್ಶಿ ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಹಾಗೂ ಸಂಪ್ಯ ಠಾಣಾ ಪೊಲೀಸರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
ಇದೇ ಮೊದಲಲ್ಲ:
ರಸ್ತೆಗೆ ಬೇಲಿ ಹಾಕಿರುವುದು ಇದೇ ಮೊದಲಲ್ಲ.ಈ ಹಿಂದೆಯೂ ಬೇಲಿ ಹಾಕಿದ್ದು ಮಾತುಕತೆಯ ಮೂಲಕ ವಿವಾದ ಇತ್ಯರ್ಥಗೊಳಿಸಿ ಬೇಲಿ ತೆರವುಗೊಳಿಸಲಾಗಿತ್ತು.ಇದೀಗ ಈ ಹಿಂದಿಗಿಂತ ಎರಡು ಅಡಿ ಮುಂದಕ್ಕೆ ಬೇಲಿ ಹಾಕಲು ಮುಂದಾಗಿದ್ದರು.ಅದನ್ನು ತೆರವುಗೊಳಿಸಲಾಯಿತು ಎಂದು ಗ್ರಾ.ಪಂ.ನಿಂದ ಮಾಹಿತಿ ನೀಡಿದ್ದಾರೆ.