




ಮಕ್ಕಳ ಪ್ರತಿಭೆ ಅರಳಿಸುವಲ್ಲಿ ದೈ.ಶಿ.ಶಿಕ್ಷಕರ ಪಾತ್ರ ಅಪಾರ-ಶ್ರೀರಾಮ ಪಕ್ಕಳ



ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕ ಕ್ರೀಡಾಕೂಟ `ಕ್ರೀಡಾ ಸ್ಪಂದನ’ ಡಿ.10ರಂದು ನಡೆಯಿತು.





ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಚ್ ಸೂಫಿ ವಹಿಸಿದ್ದರು. ಕಾಶಿಪಟ್ನ ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ ಪಕ್ಕಳ ಮಾತನಾಡಿ ಮಕ್ಕಳ ಪ್ರತಿಭೆ ಅರಳಿಸುವಲ್ಲಿ ದೈ.ಶಿ.ಶಿಕ್ಷಕರ ಪಾತ್ರ ಪ್ರಮುಖವಾಗಿದೆ, ತಾಲೂಕು, ಜಿಲ್ಲೆ, ರಾಜ್ಯ, ಹೀಗೇ ನಾನಾ ಕ್ಷೇತ್ರಗಳಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿರುವವರ ಹಿಂದೆ ಶಾಲಾ ದೈ.ಶಿ.ಶಿಕ್ಷಕ/ಶಿಕ್ಷಕಿಯರ ಪಾತ್ರ ಬಹಳಷ್ಟಿದೆ ಎಂದು ಹೇಳಿದರು. ಮಕ್ಕಳಿಗೆ ಪಾಠದ ಜೊತೆ ಆಟವೂ ಅಗತ್ಯ, ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಕ್ರೀಡೆ ಬಹಳಷ್ಟು ಸಹಕಾರಿಯಾಗಿದೆ, ಕ್ರೀಡಾ ಚಟುವಟಿಕೆಗಳನ್ನು ತೊಡಗಿಸಿಕೊಂಡಷ್ಟು ಮಕ್ಕಳು ಕ್ರಿಯಾಶೀಲರಾಗಿ ಇರುತ್ತಾರೆ ಎಂದು ಅವರು ಹೇಳಿದರು. ದೈ.ಶಿ.ಶಿಕ್ಷಕ/ಶಿಕ್ಷಕಿಯರು ಬಹಳಷ್ಟು ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಬೆಳಗುವಂತೆ ಮಾಡುತ್ತಿದ್ದು ಅವರ ಕೊಡುಗೆ ಅಪಾರವಾಗಿದೆ. ಮಕ್ಕಳಿಗೆ ಉತ್ತಮ ತರಬೇತಿ ಸಿಕ್ಕಿದಾಗ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶ್ರೀರಾಮ ಪಕ್ಕಳ ಹೇಳಿದರು.
ಪಾಣಾಜೆ ಸುಬೋಧ ಪ್ರೌಢಶಾಲೆಯ ಪಾಣಾಜೆ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ ಧ್ವಜವಂದನೆ ಸ್ವೀಕರಿಸಿದರು. ಅತಿಥಿಗಳಾಗಿ ಮೂಸಾನ್ ಮೈರೋಳು, ಹೇಮಂತ್ ಕರ್ನೂರು ಮಠ, ಅಖಿಲೇಶ್ ಬೆದ್ರಾಡಿ, ಅಬ್ದುಲ್ ಖಾದರ್, ಇಶಾಕ್ ಕರ್ನೂರು ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರವಣ್ ಕ್ರೀಡಾ ಪ್ರತಿಜ್ಞೆ ವಾಚಿಸಿದರು. ಐದನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ರಮೇಶ್ ಶಿರ್ಲಾಲ್ ಸ್ವಾಗತಿಸಿದರು. ಸಾವಿತ್ರಿ ವಂದಿಸಿದರು. ಪ್ರವೀಣ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ ಹಲೀಮಾ ನಜಿಮುನ್ನಿಸಾ, ಬಿಂದು ಕೆ.ಎಸ್, ಸುಪ್ರೀತ, ಭವ್ಯ, ಅಸ್ಮಾ, ಶಾರದಾ ಸಹಕರಿಸಿದರು. ಎಸ್.ಡಿ.ಎಂ.ಸಿಯವರು ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.









