





ಪುತ್ತೂರು: “ಒಳ್ಳೆಯ ನಗು ಸಾವಿರ ಮಾತುಗಳಿಗಿಂತ ಉತ್ತಮ” ಎಂಬ ಮಾತಿದೆ. ನಮ್ಮ ನಗು ಸುಂದರವಾಗಿರಲು ಮತ್ತು ಆಕರ್ಷಕವಾಗಿರಲು ಉತ್ತಮ ದಂತ ಆರೋಗ್ಯ ಬಹಳ ಮುಖ್ಯ. ದಂತ ಸಮಸ್ಯೆಗಳು ಬಾಯಿಗೆ ಮಾತ್ರ ಸೀಮಿತವಾಗದೆ ಇಡೀ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸರಿಯಾದ ದಂತ ಆರೋಗ್ಯವನ್ನು ಅನುಸರಿಸುವುದರಿಂದ ಹಲ್ಲು ನೋವು, ಒಸಡಿನ ಕಾಯಿಲೆ ಮತ್ತು ಇತರ ಗಂಭೀರ ದಂತ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಈ ಹಿನ್ನಲೆಯಲ್ಲಿ ಪುತ್ತೂರು ರೋಟರಿ ಕ್ಲಬ್ ಉಚಿತ ದಂತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿತ್ತು.



ಪ್ರತಿ ತಿಂಗಳ 2ನೇ ಸೋಮವಾರದಂದು ನಗರದ ಮಹಾವೀರ ವೆಂಚರ್ಸ್ ಕಟ್ಟಡದಲ್ಲಿರುವ ಪುತ್ತೂರು ಸ್ಯಾಟಲೈಟ್ ಪಾಲಿಕ್ಲಿನಿಕ್ ನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಕಳೆದ 2 ಶಿಬಿರಗಳಲ್ಲಿ ಸುಮಾರು 100ರಷ್ಟು ಜನರು ಉಚಿತ ದಂತ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದು, ನ.10ರಂದು ನಡೆದ 3ನೇ ಮಾಸಿಕ ಶಿಬಿರದಲ್ಲಿ ಸುಮಾರು 47 ಮಂದಿ ಭಾಗವಹಿಸಿದ್ದು, ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ನುರಿತ, ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳಿಂದ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಂಡರು. ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ನ ರೆಸಿಡೆಂಟ್ ವೈದ್ಯೆ ಡಾ.ಶ್ರೀ ದೇವಿ ನೇತೃತ್ವದಲ್ಲಿ ಕೆವಿಜಿ ದಂತ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ನಸ್ರತ್ ಫರೀದ್ ನಿರ್ದೇಶನದಂತೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ತಿಂಗಳ ಇತರ ದಿನಗಳಲ್ಲಿಯೂ ಇಲ್ಲಿ ದಂತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ಮುಂದಿನ ಉಚಿತ ದಂತ ವೈದ್ಯಕೀಯ ಶಿಬಿರವು ಡಿ.10ರಂದು ನಡೆಯಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಂಗಾರಡ್ಕ ತಿಳಿಸಿದ್ದಾರೆ.














