ಮಸೀದಿಗಳಲ್ಲಿ ‘ಗೋವಧೆ ತಡೆ ಜಾಗೃತಿ ಮಾಹಿತಿ’ ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಕೃತ್ಯ -ಮುಸ್ಲಿಂ ಯುವಜನ ಪರಿಷತ್ ಆರೋಪ

0

ಪುತ್ತೂರು:ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯ ಬಗ್ಗೆ ಪೊಲೀಸರು ಮಸೀದಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ಅಸಂವಿಧಾನಿಕ ಮತ್ತು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಕೃತ್ಯ ಎಂದು ಆರೋಪಿಸಿರುವ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಅಂತಹ ಪೊಲೀಸ್ ಸಿಬ್ಬಂದಿಗಳು ಮತ್ತು ಅವರಿಗೆ ನಿರ್ದೇಶನ ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಸುಳ್ಯ ತಾಲೂಕಿನ ಕೆಲವು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದಿರುವ ಜನರನ್ನು ನಿಲ್ಲಿಸಿ ಪೊಲೀಸರು ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯ ಬಗ್ಗೆ ವಿವರಿಸಿ,ಕಾನೂನು ಉಲ್ಲಂಸಿದಲ್ಲಿ ಮನೆ ಜಪ್ತಿ ಮಾಡಲಾಗುವುದು ಎಂದು ಬೆದರಿಸಿದ್ದಾರೆ.ಇದರಿಂದ, ಮುಸ್ಲಿಮರು ಮಾತ್ರ ಈ ಕಾಯ್ದೆಯನ್ನು ಉಲ್ಲಂಸುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ. ಇದು ಒಂದು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಕೃತ್ಯವಾಗಿದೆ.ಈ ಹಿಂದೆ ಇತರ ಸಮುದಾಯದ ಹಲವರ ಮೇಲೂ ಗೋಕಳ್ಳತನ, ಅಕ್ರಮ ದನ ಸಾಗಾಟದ ಕೇಸ್ ದಾಖಲಾಗಿದ್ದರೂ ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ಪೊಲೀಸರು ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ಸಮುದಾಯವನ್ನು ಕ್ರಿಮಿನಲ್‌ಗಳು ಎಂದು ಘೋಷಿಸುವ ಹುನ್ನಾರದಂತೆ ಕಾಣಿಸುತ್ತಿದೆ ಎಂದು ಆರೋಪಿಸಿದರು.


ಧಾರ್ಮಿಕ ಸ್ಥಳದ ಒಳಗೆ ವಿಶೇಷವಾಗಿ ಗೋಹತ್ಯೆಯಂತಹ ಸೂಕ್ಷ್ಮ ವಿಷಯಗಳ ಮೇಲೆ ಅಪರಾಧ ಜಾಗೃತಿ ಕಾರ್ಯಕ್ರಮ ನಡೆಸುವುದು ಸಂವಿಧಾನ ಘೋಷಿಸಿರುವ ರಾಜ್ಯದ ತಟಸ್ಥತೆಯನ್ನು ಉಲ್ಲಂಘಿಸುತ್ತದೆ.ಧಾರ್ಮಿಕ ಕಾಯ್ದೆಯೊಂದರ ಕುರಿತು ಅನಧಿಕೃತ ಜಾಗೃತಿ ಅಭಿಯಾನ ನಡೆಸುವುದು, ಕಾಯ್ದೆಯನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲು ಮಾಡಿ ಆರೋಪಿಸುವುದು ಅಧಿಕಾರದ ದುರುಪಯೋಗ ಮತ್ತು ಕಾನೂನಿನ ಉಲ್ಲಂಘನೆಯಾಗಿದೆ.ಪೊಲೀಸರು ಇಂತಹ ಜಾಗೃತಿ ಕಾರ್ಯಕ್ರಮವನ್ನು ನಡೆಸುವುದಿದ್ದರೂ ಅದನ್ನು ಎಲ್ಲಾ ಜಾತಿ, ಸಮುದಾಯ, ಮಹಿಳೆ ಮತ್ತು ಪುರಷರು ಸೇರಬಹುದಾದ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು.ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಕಾರ್ಯದರ್ಶಿಗಳಾದ ಬಶೀರ್ ಪರ್ಲಡ್ಕ, ರಶೀದ್ ಮುರ, ಕಾನೂನು ಸಲಹೆಗಾರ ಶಾಕಿರ್ ಹಾಜಿ ಮಿತ್ತೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here