





ಶಾಸಕ ಅಶೋಕ್ ರೈ ಕಚೇರಿಯಲ್ಲಿ ಪ್ರಥಮ ಹಂತದ ಪರಿಶೀಲನಾ ಸಭೆ


ಪುತ್ತೂರು: ಮಾಣಿ- ಸಂಪಾಜೆ ರಾ.ಹೆದ್ದಾರಿ 270ರ ಚತುಷ್ಫಥ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಥಮ ಹಂತದ ಪರಿಶೀಲನಾ ಸಭೆಯು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಸೋಮವಾರ ನಡೆಯಿತು.





ಮಾಣಿ- ಸಂಪಾಜೆ ರಾ.ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕ ಈ ಹೈವೇಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಾಸಕರಾದ ಮೊದಲ ವರ್ಷದಲ್ಲೇ ಶಾಸಕ ಅಶೋಕ್ ರೈ ಅವರು ಯೋಜನಾ ವರದಿಗೆ ಸಿದ್ದಪಡಿಸಲು ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ 3.90 ಕೋಟಿ ರೂ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ಅದರಂತೆ ಡಿಪಿಆರ್ ಸಿದ್ದಪಡಿಸಲಾಗಿದೆ. ಸಿದ್ದಪಡಿಸಲಾದ ಡಿಪಿಆರ್ ನ್ನು ಶಾಸಕರು ಪರಿಶೀಲನೆ ಮಾಡಿದರು.
ಮಾಣಿಯಿಂದ ಸಂಪಾಜೆ 1300 ಕೋಟಿ
ಮಾಣಿಯಿಂದ ಸಂಪಾಜೆ ತನಕ ಒಟ್ಟು 70 ಕಿ ಮೀ ರಸ್ತೆ ಚತುಷ್ಪಥಕ್ಕೆ ಒಟ್ಟು 1300 ಕೋಟಿ ಅನುದಾನವನ್ನು ಮುಂದಿಡಲಾಗಿದೆ. ಮಾಣಿಯಿಂದ ಸಂಪ್ಯ ತನಕ ರಸ್ತೆಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡುವುದು, ಕಬಕ, ಮಂಜಲ್ಪಡ್ಪು ಬೈಪಾಸ್ ಎಂಟ್ರಿ, ಪರ್ಲಡ್ಕ ತಿರುವಿನಲ್ಲಿ, ಅಶ್ವಿನಿ ಹೊಟೇಲ್ ಬಳಿಯಲ್ಲಿ ಫೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಾಣವಾಗುತ್ತದೆ. ಸಂಪ್ಯದಿಂದ ಸಂಪಾಜೆ ತನಕ ಯಾವುದೇ ಸರ್ವಿಸ್ ರಸ್ತೆಗಳು ಇರುವುದಿಲ್ಲ. ರಸ್ತೆಯು ಒಟ್ಟು 30 ರಿಂದ 35 ಮೀಟರ್ ಅಗಲವನ್ನು ಹೊಂದಲಿದೆ ಮತ್ತು ಶೇ. 98 ತಿರುವುಗಳನ್ನು ತೆರವು ಮಾಡಲಾಗಿದೆ. ಮೊದಲ ಹಂತದ ಡಿಪಿಆರ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೈ ಸೇರಲಿದೆ ಆ ಬಳಿಕ ಕೆಲವೊಂದು ಬದಲಾವಣೆಗಳು ಆಗುವ ಸಾಧ್ಯತೆಯೂ ಇರುತ್ತದೆ.
ಸಭೆಯಲ್ಲಿ ರಾ. ಹೆದ್ದಾರಿ ಮುಖ್ಯ ಕಾರ್ಯನಿರ್ವಾಹಕ ಇಂಜನಿಯರ್ ಚಂದ್ರಶೇಖರ್, ಸಹಾಯಕ ಇಂಜನಿಯರ್‌ಗಳಾದ ಕನಿಷ್ಕ, ಗುರುಪ್ರಸಾದ್ ಉಪಸ್ಥಿತರಿದ್ದರು.
ಮಾಣಿ- ಸಂಪಾಜೆ ರಾ. ಹೆದ್ದಾರಿ 270ನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಬೇಕು ಎಂದು ನಾನು ಶಾಸಕನಾದ ಒಂದೇ ವರ್ಷದಲ್ಲಿ ನಾನು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ, ಅ ಬಳಿಕ ಪುತ್ತೂರಿಗೆ ಬಂದಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಅವರಿಗೆ ಮನವಿ ಮಾಡಿ ಚತುಷ್ಪಥ ರಸ್ತೆಯ ಡಿಪಿಆರ್ ಸಿದ್ದಪಡಿಸಲು ಅನುದಾನ ನೀಡುವಂತೆ ಕೇಳಿಕೊಂಡಿದ್ದೆ. ಕರ್ನಾಟಕ ಸರಕಾರ ಡಿಪಿಆರ್ ಸಿದ್ದಪಡಿಸಲು 3.90 ಕೋಟಿ ಅನುದಾನನ್ನು ನೀಡಿದ್ದು ಅದರಂತೆ ಡಿಪಿಆರ್ ಸಿದ್ದಗೊಂಡಿದೆ. ಸಿದ್ದಗೊಂಡ ಡಿಪಿಆರ್ ಪರಿಸೀಲನೆ ಮಾಡಿದ್ದು , ಈ ವರದಿಯನ್ನು ಕೇಂದ್ರ ಹೆದ್ದಾರಿ ಇಲಾಖೆಗೆ ಕಳುಹಿಸಿದ ಬಳಿಕ ಅಲ್ಲಿಂದ ಅನುಮೋದನೆ ನೀಡಿದ ಬಳಿಕ ಅದು ಅಂತಿಮ ಹಂತಕ್ಕೆ ಬರಲಿದೆ. ಚತುಷ್ಪಥ ನಿರ್ಮಾಣಕ್ಕೆ 1300 ಕೋಟಿ ರೂಗಳು ಬೇಕಾಗಿದ್ದು ಇದು ಪೂರ್ತಿಯಾಗಿ ಕೇಂದ್ರ ಸರಕಾರ ನೀಡಬೇಕಿದೆ.
ಅಶೋಕ್ ರೈ, ಶಾಸಕರು ಪುತ್ತೂರು










