






ಗಳಿಕೆಯ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡಿ-ಆನಂದ ರೈ




ಪುತ್ತೂರು: ಸಮಾಜದಲ್ಲಿನ ಅತೀ ದುರ್ಬಲರಿಗೆ ಸಹಾಯ ಮಾಡುವುದರಲ್ಲಿ ಲಯನ್ಸ್ ಕ್ಲಬ್ ಗಳು ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ತಮ್ಮ ಗಳಿಕೆಯ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಾಗ ಸಮಾಜ ಸುಭೀಕ್ಷೆಯತ್ತ ಸಾಗುವುದು ಎಂದು ಲಯನ್ಸ್ ಪ್ರಾಂತ್ಯ ಅಧ್ಯಕ್ಷರಾದ ಎಂ.ಆನಂದ ರೈ ಪಿ.ರವರು ಹೇಳಿದರು.



ಡಿ.16ರಂದು ಕಾವು ಮುಖ್ಯ ರಸ್ತೆಯ ಸಮುದಾಯ ಭವನದಲ್ಲಿ ನಡೆದ ಅಂತರರಾಷ್ಟ್ರೀಯ ಲಯನ್ಸ್ ಇದರ ಲಯನ್ಸ್ ಜಿಲ್ಲೆ 317ಡಿ, ರೀಜ್ಹನ್ 7, ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಭೇಟಿ ಹಾಗೂ ಝೋನ್ ಸೋಶಿಯಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುತ್ತೂರು ಕಾವು ಕ್ಲಬ್ ಕಳೆದ ಆರು ತಿಂಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುತ್ತದೆ. ಪ್ರಕೃತಿ, ಆರೋಗ್ಯ, ಮನೆ ಕಟ್ಟುವವರಿಗೆ ಧನ ಸಹಾಯ, ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಕಾವು ಹಮ್ಮಿಕೊಂಡು ಜಿಲ್ಲೆಯಲ್ಲಿ ಸೇವೆಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿರುವುದು ಶ್ಲಾಘನೀಯ ಎಂದರು.
ಹೊಸ ಕ್ಲಬ್ ಗಳಿಗಿಂತ ಲಯನ್ಸ್ ಕಾವಿನಿಂದ ಹೆಚ್ಚಿನ ದೇಣಿಗೆ-ಜಗನ್ನಾಥ ರೈ:
ಝೋನ್ ಸೋಶಿಯಲ್ ಕಾರ್ಯಕ್ರಮವನ್ನು ನಡೆಸಿದ ಲಯನ್ಸ್ ವಲಯಾಧ್ಯಕ್ಷ ಜಗನ್ನಾಥ್ ರೈ ಗುತ್ತು ಮಾತನಾಡಿ, ನನ್ನ ವಲಯದ ಮೂರು ಕ್ಲಬ್ ಗಳಾದ ಪುತ್ತೂರು ಕಾವು, ಬೆಳ್ಳಾರೆ ಜಲದುರ್ಗ, ದುರ್ಗಾಂಬ ಆಲಂಕಾರು ಇವುಗಳು ಉತ್ತಮ ಸೇವೆಯನ್ನು ಸಮಾಜಕ್ಕೆ ನೀಡುತ್ತಿದೆ. ಲಯನ್ಸ್ ಪುತ್ತೂರು ಕಾವು ಈಗಾಗಲೇ ಅಂತರರಾಷ್ಟ್ರೀಯ ಲಯನ್ಸ್ ಗೆ 9000 ಡಾಲರ್ ಅನ್ನು ದೇಣಿಗೆಯನ್ನು ನೀಡಿದ್ದು ಹೊಸ ಕ್ಲಬ್ ಗಳ ವಿಭಾಗದಲ್ಲಿ ಇಷ್ಟು ದೇಣಿಗೆ ನೀಡಿರುವುದು ಗಮನಾರ್ಹ ಎಂದರು.
ಕ್ಲಬ್ ಉತ್ತುಂಗತೆಗೆ ನಾವೆಲ್ಲರೂ ಸಿದ್ಧರಾಗೋಣ-ಇಬ್ರಾಹಿಂ ಹಾಜಿ:
ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ.ಇಬ್ರಾಹಿಂ ಹಾಜಿ ಮಾತನಾಡಿ, ಕ್ಲಬ್ ನ ಸದಸ್ಯರ ಸಹಕಾರ ಹಾಗೂ ಕಾವು ಹೇಮನಾಥ ಶೆಟ್ಟಿರವರ ಮಾರ್ಗದರ್ಶನದಿಂದ ಕ್ಲಬ್ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಇನ್ನೂ ಅನೇಕ ಕಾರ್ಯಚಟುವಟಿಕೆಗಳನ್ನು ನಡೆಸಿ ಕ್ಲಬ್ ನ್ನು ಎತ್ತರಕ್ಕೇರಿಸುವಲ್ಲಿ ನಾವೆಲ್ಲರೂ ಸೇರಿ ಮಹತ್ತರ ಪಾತ್ರ ವಹಿಸಬೇಕಾಗಿದೆ ಎಂದರು.
ಸೇವಾ ಚಟುವಟಿಕೆ:
ಕ್ಲಬ್ ವತಿಯಿಂದ ಕಾವು ಸರಕಾರಿ ಶಾಲೆಗೆ ಸುಮಾರು 13 ಸಾವಿರ ಮೌಲ್ಯದ ವಾಟರ್ ಫಿಲ್ಟರ್ ಅನ್ನು ಹಸ್ತಾಂತರಿಸಲಾಯಿತು.
ಹೊಸ ಸದಸ್ಯರ ಸೇರ್ಪಡೆ:
ಲಯನ್ಸ್ ಕ್ಲಬ್ ಪುತ್ತೂರು ಕಾವು ಕ್ಲಬ್ ಗೆ ನಾಲ್ಕು ಮಂದಿ ಹೊಸ ಸದಸ್ಯರನ್ನು ಪ್ರಾಂತ್ಯ ಅಧ್ಯಕ್ಷರಾದ ಆನಂದ ರೈರವರು ಪ್ರಮಾಣ ವಚನ ಬೋಧಿಸಿ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಕ್ಲಬ್ ಕೋಶಾಧಿಕಾರಿ ರಮೇಶ್ ಆಳ್ವಿಕೆಯಡಿಯಲ್ಲಿ ಅರಿಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ದೇವಣ್ಣ ರೈ ವರದಿ ವಾಚಿಸಿದರು. ಸುರೇಖಾ ಡಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಪ್ರತಿಷ್ಠಾನ ಮಂಗಳೂರು ಘಟಕದ ಆಡಳಿತ ಮಂಡಳಿ ನಿರ್ದೇಶಕ ಜಯಪ್ರಕಾಶ್ ರೈ, ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಬಿ.ಪಾವನರಾಮರವರು ಸಹಕರಿಸಿದರು.
ಸನ್ಮಾನ..
ಕಾವಿನ ಹಿರಿಯರಾದ ಮೋಹನ್ ಶೆಣೈ ಬಂಡಶಾಲೆ, ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ ಕುಮಾರ್ ಪೆರ್ನಾಜೆ ಹಾಗೂ ಅವರ ಪತ್ನಿ, ಲಯನ್ಸ್ ಕ್ಲಬ್ ನ ಸಮಾಜ ಸೇವಕರು, ಹಿರಿಯರಾದ ದಿನೇಶ್ ಗೌಡ ಹಾಗೂ ಅವರ ಪತ್ನಿ ರವರನ್ನು ಸನ್ಮಾನಿಸಲಾಯಿತು.
ಸೇವಾ ಚಟುವಟಿಕೆಗೆ ಸದಸ್ಯರ ಕೊಡುಗೆ ಅನನ್ಯವಾದದ್ದು…
ನನ್ನ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಈ ಕ್ಲಬ್ ಪ್ರಸ್ತುತ ಆರನೇ ವರ್ಷದತ್ತ ಮುನ್ನೆಡೆಯುತ್ತಿದೆ. ಪುತ್ತೂರು ಕಾವು ಕ್ಲಬ್ ಕಳೆದ ಆರು ತಿಂಗಳಲ್ಲಿ ಕೆ.ಇಬ್ರಾಹಿಂ ಹಾಜಿರವರ ನೇತೃತ್ವದಲ್ಲಿ ಉತ್ತಮವಾದ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಜಿಲ್ಲೆಯಲ್ಲಿ ಉತ್ತಮ ಕ್ಲಬ್ ಎಂಬ ಹೆಗ್ಗಳಿಕೆ ಇದೆ ಮೂವತ್ತೊಂದು ಮಂದಿ ಇರುವ ಈ ಕ್ಲಬ್ ನಿರಂತರ ಟಾಪ್ ಹತ್ತರಲ್ಲಿ ಗುರುತಿಸಿಕೊಂಡಿದೆ. ಗ್ರಾಮೀಣ ಪ್ರದೇಶದ ಈ ಕ್ಲಬ್ ಇಷ್ಟೊಂದು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಕ್ಕೆ ಪ್ರತಿಯೊಬ್ಬ ಸದಸ್ಯರ ಕೊಡುಗೆ ಅನನ್ಯವಾದದ್ದು.
-ಕಾವು ಹೇಮನಾಥ ಶೆಟ್ಟಿ,
ಸ್ಥಾಪಕಾಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರು ಕಾವು









