






ಪುತ್ತೂರು:ಮೊಟ್ಟೆತ್ತಡ್ಕ ಮಿಶನ್ಮೂಲೆ ಶ್ರೀ ರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನೂತನ ಶಿಲಾಮಯ ದೇವಾಲಯದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಕೈಂಕರ್ಯ, ದೇವತಾ ಕಾರ್ಯಗಳೊಂದಿಗೆ ಜ.2 ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ.


ಶ್ರೀ ಕ್ಷೇತ್ರದ ಹಿನ್ನೆಲೆ:
ಶ್ರೀ ಕ್ಷೇತ್ರವು ದ.ಕ ಜಿಲ್ಲೆಯ ಪುತ್ತೂರು ನಗರದಿಂದ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯಲ್ಲಿ 2ಕಿ.ಮೀ. ದೂರದ ಮುಕ್ರಂಪಾಡಿ ಮೊಟ್ಟೆತ್ತಡ್ಡ-ಮುಂಡೂರು ರಸ್ತೆಯ ಕೇವಲ 50 ಮೀಟರ್ ದೂರದಲ್ಲಿ ತಾಯಿ ಚಾಮುಂಡೇಶ್ವರಿ ಹಾಗೂ ರಕ್ತೇಶ್ವರಿಯು ಭಕ್ತರ ಮೊರೆಗೆ ಓಗೊಟ್ಟು ಕೈ ಬೀಸಿ ಹರಸಲೆಂದೇ ನೆಲೆ ನಿಂತಿದೆ. ಪೂರ್ವಕಾಲದಲ್ಲಿ ಶ್ರೀಕ್ಷೇತ್ರವು ಭೌಗೋಳಿಕ, ಪ್ರಾಕೃತಿಕ ಲಕ್ಷಣಗಳ ಕುರುಹು ಪ್ರಕಾರ ಗ್ಯಾಲರಿ ಮಾದರಿಯಂತೆ ಗೋಚರಿಸುತ್ತಿದ್ದು ಅಂದು ಅರಸ ತುಂಡರಸರ ಕಾಲದಲ್ಲಿ ಭೂತಾರಾಧನೆ, ನೇಮ ನಡಾವಳಿಯನ್ನು ಜನರು(ಪ್ರಜೆಗಳು) ವೀಕ್ಷಿಸಲು ಅನುಕೂಲವಾಗುವಂತಿತ್ತು ಎಂದು ದೈವಜ್ಞರು ತಿಳಿಸಿರುತ್ತಾರೆ. ಈ ಮೊದಲು ಸದ್ರಿ ಪ್ರದೇಶವು 34 ಎಕ್ರೆ ವಿಸ್ತೀರ್ಣ ವ್ಯಾಪಿಸಿದ್ದು ಸುಮಾರು 125 ವರ್ಷಗಳ ಐತಿಹ್ಯವಿರುವ ಬಂಟ ಮನೆತನದ ಒಡೆತನಕ್ಕೆ ಮಂಗಳೂರು ಪ್ರಾಂತ್ಯದ ಬಾಸೆಲ್ ಮಿಶನ್ನವರಿಂದ ದೊರೆತಿದೆ. ಬಳಿಕ 45 ವರ್ಷಗಳಿಂದ ಶ್ರೀಕ್ಷೇತ್ರ ಸಾನಿಧ್ಯದಲ್ಲಿ ಚಾಮುಂಡೇಶ್ವರಿ, ಕಲ್ಲುರ್ಟಿ ಗುಳಿಗ ಹಾಗೂ ನಾಗದೇವರ ಆರಾಧನೆಯನ್ನು ದೈವಜ್ಞರ ಮಾರ್ಗದರ್ಶನದಂತೆ ಮೊಕ್ತೇಸರ ಕೀರ್ತಿಶೇಷ ಮಿಶನ್ಮೂಲೆ ಮೋಹನ ರೈರವರ ಮುಂದಾಳುತ್ವದಲ್ಲಿ ಊರ ಹತ್ತು ಸಮಸ್ತರು ಹಾಗೂ ಭಕ್ತ ಸಮುದಾಯವನ್ನು ಸೇರಿಸಿಕೊಂಡು ಪ್ರತಿಷ್ಠಾಪನೆ, ಬ್ರಹ್ಮಕಲಶ ಮುಖಾಂತರ ನಡೆಸಿಕೊಂಡು ಬಂದಿರುತ್ತದೆ. ಪ್ರಸ್ತುತ ದಿನಗಳಲ್ಲಿ ಶುಕ್ರವಾರ ಪೂಜೆ, ಭಜನೆ ತಿಂಗಳ ಸಂಕ್ರಮಣ ಆಚರಣೆ, ನವರಾತ್ರಿ ಪೂಜೆ, ಚಂಡಿಕಾಯಾಗ, ಅರ್ಧಏಕಾಹ ಭಜನೆ ಶ್ರೀಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮೀ ಪೂಜೆ ಇತ್ಯಾದಿ ದೇವತಾ ಕಾರ್ಯಗಳನ್ನು ಆಚರಿಸುತ್ತಿದೆ. ಶ್ರೀಕ್ಷೇತ್ರ ಅಧಿದೇವತೆ ಶ್ರೀಚಾಮುಂಡೇಶ್ವರಿ, ಕಲ್ಲುರ್ಟಿ ಪರಿವಾರ ದೈವ ಗುಳಿಗನನ್ನು ಭಕ್ತಿಪೂರ್ವಕ ನಮಿಸಿಕೊಂಡಲ್ಲಿ ಭಕ್ತರ ಸಕಲ ಇಷ್ಟಾರ್ಥ ಪ್ರಾಪ್ತಿಯಾಗುವುದಕ್ಕೆ ಅದೆಷ್ಟೋ ಭಕ್ತ ವೃಂದವೇ ಸಾಕ್ಷಿ. ಇದೇ ಕ್ಷೇತ್ರದ ಸಂಪತ್ತು.




ರೂ.3 ಕೋಟಿ ವೆಚ್ಚ:
ಇದೀಗ ದೇವಸ್ಥಾನದ ಪುನಃನಿರ್ಮಾಣ ಕಾರ್ಯದ ಕುರಿತು ಅಷ್ಟಮಂಗಲ ಪ್ರಶ್ನಾಚಿಂತನೆಯನ್ನು ಶ್ರೀಕ್ಷೇತ್ರದಲ್ಲಿ ಇರಿಸಿದ್ದು ಸುತ್ತುಪೌಳಿ ದೇವಾಲಯ ನಿರ್ಮಾಣ, ಅದಿಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಶ್ರೀರಕ್ತೇಶ್ವರಿ, ಶ್ರೀ ಚಾಮುಂಡೇಶ್ವರಿ ಗುಳಿಗ, ಕಲ್ಲುರ್ಟಿ, ನಾಗದೇವರಿಗೆ ಆಲಯ ನಿರ್ಮಿಸಿ, ಪ್ರತಿಷ್ಠಾಪನೆ, ಬ್ರಹ್ಮಕಲಶ ಕಾರ್ಯ ಶೀಘ್ರ ಮಾಡುವುದರಿಂದ ಸಮಸ್ತ ಊರಿಗೆ ಶ್ರೇಯಸ್ಸು ಎಂದು ದೈವಜ್ಞರಿಂದ ತಿಳಿದು ಬಂದಿರುತ್ತದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಶ್ರೀಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ವೇದಮೂರ್ತಿ ನಾಗೇಶ ತಂತ್ರಿಗಳು ಅಷ್ಠಮಂಗಲ ಜ್ಯೋತಿಷ್ಯರಾದ ಶ್ರೀಧರನ್, ವಾಸ್ತು ಶಿಲ್ಪಿಗಳಾದ ರಮೇಶ ಕಾರಂತ, ಕ್ಷೇತ್ರದ ಮೊಕ್ತೇಸರ ಮೋಹನ್ ರೈ, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಊರ ಆಸ್ತಿಕ ಬಾಂಧವರ ಸಮಕ್ಷಮದಲ್ಲಿ ಆಯೋಜಿಸಲಾಗಿರುತ್ತದೆ. ಅಂದಾಜು ರೂ.3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ನೂತನ ಶಿಲಾಮಯ ದೇವಾಲಯದ ನೀಲಿ ನಕಾಶೆ ಸಿದ್ಧಪಡಿಸಿದ್ದು, ಕೆಲಸ ಕಾರ್ಯ ಪ್ರಗತಿಯಲ್ಲಿದೆ.
ಊರ ಪರಊರ ಭಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ ಮತ್ತು ಡಾ.ಸುರೇಶ್ ಪುತ್ತೂರಾಯ, ಗೌರವ ಸಲಹೆಗಾರರಾದ ಮಾಜಿ ಶಾಸಕ ಸಂಜೀವ ಮಠಂದೂರು, ಕಾವು ಹೇಮನಾಥ ಶೆಟ್ಟ, ಅರುಣ್ ಕುಮಾರ್ ಪುತ್ತಿಲ, ಬೂಡಿಯಾರ್ ರಾಧಾಕೃಷ್ಣ ರೈ, ಜಯಂತ ನಡುಬೈಲು, ಶಿವರಾಮ ಶೆಟ್ಟಿ ಬಳ್ಳಮಜಲು, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಅಜಿತ್ ನಾಯಕ್ ಅನಿತಾ ಆಯಿಲ್ ಮಿಲ್, ಅಧ್ಯಕ್ಷ ಸತೀಶ್ ರೈ ಮಿಶನ್ಮೂಲೆ, ಸಂಚಾಲಕರಾದ ಎನ್ ರವೀಂದ್ರ ಶೆಟ್ಟಿ ನುಳಿಯಾಲು, ರಘುನಾಥ ರೈ ಕೆಯ್ಯೂರು, ಬಿ.ವಿ ಸೂರ್ಯನಾರಾಯಣ, ಪ್ರಸನ್ನ ಕುಮಾರ್ ಮಾರ್ತ, ಉಪಾಧ್ಯಕ್ಷರಾದ ಪ್ರವೀಣ್ ರೈ ಮಿಶನ್ಮೂಲೆ, ದಿನೇಶ್ ರೈ ಮೊಡಪ್ಪಾಡಿಮೂಲೆ, ತಿಮ್ಮಪ್ಪ ರೈ, ಸುರೇಂದ್ರ ರೈ ನೇಸರ, ಸುಪ್ರೀತ್ ಕುಮಾರ್ ಜೈನ್, ನೇಮಾಕ್ಷ ಸುವರ್ಣ, ಕಾರ್ಯದರ್ಶಿ ಸುರೇಂದ್ರ ಎ, ಜೊತೆ ಕಾರ್ಯದರ್ಶಿಗಳಾದ ಮೋಹನ್ ಪಾಟಾಳಿ, ತನಿಯಪ್ಪ ಸುವರ್ಣ, ಕೋಶಾಧಿಕಾರಿ ಬಿ.ವಿಶ್ವನಾಥ ರೈ ಮಿಶನ್ಮೂಲೆ, ಜೊತೆ ಕೋಶಾಧಿಕಾರಿ ಮನೋಹರ ಪಾಟಾಳಿ, ಹರಿಣಿ ಪುತ್ತೂರಾಯ, ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಆಡಳಿತ ಸಮಿತಿಯ ಆಡಳಿತ ಮೊಕ್ತೇಸರ ರಮೇಶ ರೈ ಮಿಶನ್ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ. ಶೇಖರ್, ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಮುಕ್ರಂಪಾಡಿ ಹಾಗೂ ಸತೀಶ್ ಎಂ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಅರ್ಚಕರಾದ ಉದಯ ನಾರಾಯಣ ಕಲ್ಲೂರಾಯ ಹಾಗೂ ರಮೇಶ್ ಅಯ್ಯರ್ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿವರ್ಯರಿಂದ ಆಶೀರ್ವಚನ..
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಾಸನ ಅರೆಮಾದನಹಳ್ಳಿ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ಮಹಾಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಆಶೀರ್ವಚನ ನೀಡಲಿದ್ದಾರೆ.
ಶಾಸಕರಾದ ಅಶೋಕ್ ಕುಮಾರ್ ರೈರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಗೌರವ ಉಪಸ್ಥಿತಿಯಾಗಿ ಬೊಳ್ವಾರು ಮಹಾವೀರ ಆಸ್ಪತ್ರೆಯ ವೈದ್ಯ ಹಾಗೂ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರು ಭಾಗವಹಿಸಲಿದ್ದಾರೆ.
ಪೂರ್ಣಕುಂಭ ಸ್ವಾಗತ..
ಸ್ವಾಮೀಜಿಗಳಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ಮಹಾಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರುಗಳನ್ನು ಮುಕ್ರಂಪಾಡಿ ಜಂಕ್ಷನ್ನಿಂದ ಮೊಟ್ಟೆತ್ತಡ್ಕ ರಸ್ತೆಯ ಮೂಲಕ ಕುಣಿತ ಭಜನೆಯ ತಂಡಗಳ ಸಹಭಾಗಿತ್ವದೊಂದಿಗೆ ಶ್ರೀ ಕ್ಷೇತ್ರಕ್ಕೆ ಕರೆತರಲಾಗುತ್ತದೆ.
ವೈದಿಕ ಕಾರ್ಯಗಳು..
ಈ ಸಂದರ್ಭಧಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಹೋಮ, ಮಹಾ ಚಂಡಿಕಾಯಾಗ, ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗೆ ವಿವಿಧ ಭಜನಾ ತಂಡದವರಿಂದ ಅರ್ಧ ಏಕಾಹ ಭಜನೆ ನೆರವೇರಲಿರುವುದು.










