






ಪೆರಾಬೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಬೆ ಇಲ್ಲಿ 2025- 26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹೆಜ್ಜೆ ಗೆಜ್ಜೆ ನಾದ, ಪ್ರತಿಭಾ ಪುರಸ್ಕಾರ ಹಾಗೂ ನೂತನ ಶೌಚಾಲಯ ಕೊಠಡಿಗಳ ಉದ್ಘಾಟನೆಯು ನಡೆಯಿತು.



ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಪುತ್ತೂರು ಕಡಬ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ನವೀನ್ ಭಂಡಾರಿ ಇವರು ಮಾತನಾಡಿ ಗ್ರಾಮೀಣ ಸರಕಾರಿ ಶಾಲೆಗಳ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರು ಹಾಗೂ ಪೋಷಕರ ಜೊತೆಗೆ ಊರವರ ಸಹಕಾರ, ಮಾರ್ಗದರ್ಶನ ಅಗತ್ಯ ಎಂದರು.




ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ತಾಲೂಕು ಪಂಚಾಯತ್ ಅನುದಾನದಿಂದ ನಿರ್ಮಾಣಗೊಂಡ ಬಾಲಕರ ಹಾಗೂ ಬಾಲಕಿಯರ ನೂತನ ಶೌಚಾಲಯ ಸಮುಚ್ಚಯ ಕೊಠಡಿಗಳ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಶರವೂರು ಇಲ್ಲಿನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಯುವ ಉದ್ಯಮಿ ಡಾ| ಹೇಮಂತ್ ರೈ ಮನವಳಿಕೆಗುತ್ತು ಇವರು ನೆರವೇರಿಸಿ, ಪೆರಾಬೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಣ ಪ್ರೇಮಿಗಳ ಶ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಮುಖ್ಯ ವೇದಿಕೆಯಲ್ಲಿ ಈ ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯ ಶಿಕ್ಷಕಿ ಸುಚೇತಾಕುಮಾರಿ ಬಿ., ಅಕ್ಷರ ದಾಸೋಹ ಸಿಬ್ಬಂದಿಗಳಾದ ಜಯಶ್ರೀ, ಸರಸ್ವತಿ ಹಾಗೂ ಗೌರವ ಶಿಕ್ಷಕಿಯಾದ ಸವಿತಾ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಧ್ಯಾ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ದುರ್ಗಾಂಬ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ರೈ ಮನವಳಿಕೆಗುತ್ತು, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ ಇವರುಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೋಹನದಾಸ್ ರೈ ಪರಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಲೀಲಾವತಿ, ಪ್ರಭಾರ ಮುಖ್ಯ ಶಿಕ್ಷಕಿ ಹೇಮಲತಾ ಪ್ರದೀಪ್ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಾಗಪ್ಪ ಗೌಡ ಮರುವಂತಿಲ ನಿವೃತ್ತ ಮುಖ್ಯ ಶಿಕ್ಷಕರು, ಇಬ್ರಾಹಿಂ ಪೆರಾಬೆ, ಸಂಜೀವ ಶೆಟ್ಟಿ ಪರಾರಿ, ರಾಮಣ್ಣಗೌಡ ಪೇರಾಬೆ ಉಪಸ್ಥಿತರಿದ್ದರು.
ಸಹಶಿಕ್ಷಕಿ ಸುಶ್ಮಿತಾ ಬಿ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಜಯಪ್ರಕಾಶ್ ಜಿ.ಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಮಹದೇವಸ್ವಾಮಿ ಡಿ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ವೈವಿಧ್ಯ ನಡೆಯಿತು.










